ತನಿಖಾ ವರದಿಯೇ ಇಲ್ಲ, ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಹೇಗೆ ನೀಡಿದ್ರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ
MUDA Scam Case; ಮುಡಾ ಕೇಸ್‌ಗೆ ಸಂಬಂಧಿಸಿದ ತನಿಖಾ ವರದಿಯೇ ಇಲ್ಲ, ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಹೇಗೆ ನೀಡಿದ್ರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ರಾಜ್ಯಪಾಲರ ಕ್ರಮದ ಬಳಿಕ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದ್ದು, ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಬೆಂಗಳೂರು: ಮುಡಾ ಸೈಟ್ ಹಂಚಿಕೆ ಅಕ್ರಮದ ವಿಚಾರವಾಗಿ ಪೊಲೀಸರ ತನಿಖಾ ವರದಿ ಇಲ್ಲದೇ ರಾಜ್ಯಪಾಲರು ಅದ್ಯಾವ ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆಗೆ ಅನುಮತಿ ನೀಡಿದರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು (ಆಗಸ್ಟ್ 17) ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ವಿದ್ಯಮಾನದ ನಂತರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೊಲೀಸ್ ತನಿಖೆ ಮತ್ತು ಅದರ ವರದಿ ಇಲ್ಲದೆ ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಹೇಳಿದರು.
ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲೂ ಈ ವಿಚಾರ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೊಂಡಿರುವುದು ಇಷ್ಟು-
ರಾಜ್ಯಪಾಲರ ಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲ ಪ್ರತಿಕ್ರಿಯೆ
ರಾಜ್ಯಪಾಲರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಪತ್ರ ಕಳುಹಿಸಿದ್ದಾರೆ. ರಾಜ್ಯಪಾಲರ ಜುಲೈ 26 ರಂದು ನೀಡಿದ ಶೋಕಾಸ್ ನೋಟಿಸ್ ಸಂಬಂಧ, ಅದಕ್ಕೂ ಮೊದಲೇ ಅಂದರೆ ಏಪ್ರಿಲ್ 1ರಂದು ಸಂಪುಟ ಸಭೆಯಲ್ಲಿ ಅಗತ್ಯ ನಿರ್ಣಯ ಕೈಗೊಂಡಿದ್ದೇವೆ. ಆ ದೂರಿನಲ್ಲಿ ಹುರುಳು ಇಲ್ಲ. ಸಂವಿಧಾನದ ಅಂಶಗಳನ್ನು ತಿಳಿ ತಿಳಿಯಾಗಿ ಹೇಳಿದ್ದೇವೆ. ಇದು ರಾಜಕೀಯ ಪಿತೂರಿ. ಮುಡಾ ಪ್ರಕರಣದಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಮಟ್ಟದಲ್ಲಿ ಸರ್ಕಾರ ರಾಜ್ಯಪಾಲರ ಅಧೀನ ಕೆಲಸ ಮಾಡುತ್ತದೆ. ಸಂವಿಧಾನದ ಮೌಲ್ಯ ಎತ್ತಿ ಹಿಡಿಯಬೇಕು ಎಂಬ ಉದ್ದೇಶದೊಂದಿಗೆನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಇಂದು ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಪತ್ರ ಕಳುಹಿಸಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬೇಕಾದರೆ ಪ್ರಕರಣದ ಸಂಬಂಧ ತನಿಖೆ ನಡೆಸಿ, ತನಿಖೆಯ ರಿಪೋರ್ಟ್ ಬಂದಿದ್ದರೆ ಅನುಮತಿ ನೀಡಬಹುದಾಗಿತ್ತು ಎಂದು ಕರ್ನಾಟಕ ಕಾಂಗ್ರೆಸ್ ಡಿಕೆ ಶಿವಕುಮಾರ್ ವಿವರಿಸಿದರು.
ಎಚ್‌ಡಿ ಕುಮಾರಸ್ವಾಮಿ, ಜನಾರ್ಧನ ರೆಡ್ಡಿ ವಿರುದ್ಧ ತನಿಖೆಗೆ ಯಾಕಿಲ್ಲ ಅನುಮತಿ
ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತದಲ್ಲಿ ತನಿಖೆ ನಡೆದಿದೆ. ಅವರ ವಿರುದ್ಧ ಲೋಕಾಯುಕ್ತ, ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಮನವಿ ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಜನಾರ್ದನ ರೆಡ್ಡಿ, ಜೊಲ್ಲೆ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿತ್ತು. ಅದರ ಬಗ್ಗೆ ರಾಜ್ಯಪಾಲರು ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ದೂರು ಬಂದ ದಿನವೇ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಟಿಸ್ ಕಳುಹಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಶಾಸಕರ ಬಲದ ಮತ್ತು ರಾಜ್ಯದ ಜನರ ವಿರುದ್ಧದ ತೀರ್ಮಾನ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣ್ಣಿಸಿದರು.
ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಲಾಗುತ್ತಿದೆ. ಜೋಶಿ, ಕುಮಾರಸ್ವಾಮಿ ಈ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಪೂರ್ವಾನುಮತಿ ನೀಡಲಾಗಿದೆ. ಇಡೀ ಸಂಪುಟ ಸಚಿವರು ಸಿಎಂ ಬೆನ್ನಿಗೆ ನಿಂತಿದ್ದಾರೆ. ಪಕ್ಷವೂ ಸಿಎಂ ಬೆನ್ನಿಗೆ ನಿಂತಿದೆ. ಯಾವುದೇ ಪ್ರಕರಣ ಇಲ್ಲ. ಆದರೂ ಸಿಎಂ ಮೇಲೆ ಕೇಸ್ ಮಾಡಿದ್ದಾರೆ. ಈ ಪ್ರಾಸಿಕ್ಯೂಷನ್ ಅನುಮತಿ ಪ್ರಕ್ರಿಯೆ ಸಂವಿಧಾನದ ಚೌಕಟ್ಟಿಗೆ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದರ ವಿರುದ್ಧ ಕಾನೂನು ರೀತಿಯ ಹೋರಾಟ ಮಾಡುತ್ತೇವೆ. ರಾಜಕೀಯವಾಗಿಯೂ ಹೋರಾಟ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.