ಮುಡಾ ಕೇಸ್ ಸಂಕಷ್ಟದ ಸುಳಿಗೆ ಸಿಕ್ಕ ಸಿಎಂ ಸಿದ್ದರಾಮಯ್ಯ ಮುಂದಿನ ನಡೆಯೇನು, ಕೋರ್ಟ್ ಏನು ಮಾಡಬಹುದು, - ವಿಶ್ಲೇಷಣೆ
MUDA Scam Case; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಕೇಸ್ ಇದಾಗಿದ್ದು, ನ್ಯಾಯಾಲಯದ ಮುಂದಿರುವ ಆಯ್ಕೆಗಳೇನು? ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎಂಬಿತ್ಯಾದಿ ವಿವರಗಳನ್ನು ಸ್ಪಷ್ಟಪಡಿಸುವ ವಿಶ್ಲೇಷಣಾತ್ಮಕ ವರದಿ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣ ಮುಂದೆ ಏನೆಲ್ಲಾ ತಿರುವುಗಳನ್ನು ಪಡೆಯಬಹುದು ಎಂದು ಸಾರ್ವಜನಿಕರಲ್ಲಿಯೂ ಕುತೂಹಲ ಮೂಡಿಸಿದೆ.
ರಾಜ್ಯಪಾಲರು ಅನುಮೋದನೆ ನೀಡಿರುವ ರಾಜಭವನದ ಪ್ರಕಟಣೆ ಮುಖ್ಯಮಂತ್ರಿಗಳ ವಿರುದ್ಧ ಕೇವಲ ಪ್ರಾಸಿಕ್ಯೂ಼ಷನ್ ಮಾತ್ರ ಅನುಮತಿ ನೀಡಿರುವುವುದು ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಾತ್ಮಕವಾಗಿ ತೊಂದರೆ ಉಂಟು ಮಾಡುವುದರಲ್ಲಿ ಸಂಶಯವಿಲ್ಲ.
ಬಲ್ಲ ಮೂಲಗಳ ಪ್ರಕಾರ ಸ್ವಾತಂತ್ರ್ಯ ದಿನಾಚರಣೆ ಆಂಗವಾಗಿ ರಾಜಭವನದಲ್ಲಿ ನಡೆದ ಚಹಾ ಕೂಟದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಕಳೆದ ರಾತ್ರಿಯೇ ಮುಖ್ಯಮಂತ್ರಿಗಳು ತಮ್ಮ ಕಾನೂನು ಸಲಹೆಗಾರ ವಿಧಾನಪರಿಷತ್ ಸದಸ್ಯ ಪೊನ್ನಣ್ಣ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಹೋರಾಟಕ್ಕೆ ಸಿಎಂ ಸಿದ್ದತೆ
ಮುಖ್ಯಮಂತ್ರಿಗಳ ತಂಡ ರಾಜ್ಯಪಾಲರು ನಿಡಿರುವ ಅನುಮತಿಯನ್ನು ಪ್ರಶ್ನಿಸಿ ಕಾನೂನಾತ್ಮಕ ಹೋರಾಟ ನಡೆಸಲು ಮುಖ್ಯಮಂತ್ರಿಗಳ ತಂಡ ನಿರ್ಧಾರ ಮಾಡಿದೆ ಎಂದು ಗೊತ್ತಾಗಿದೆ.
ರಾಜ್ಯಪಾಲರ ಅನುಮೋದನೆ ದೊರೆತಿದ್ದು, ಮೂವರು ದೂರುದಾರರಾದ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಅವರ ಹಾದಿ ಸುಗಮವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಕುರಿತು ನ್ಯಾಯಾಲಯ ಆದೇಶ ಹೊರಡಿಸಲಿದೆ.
ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ದೂರಿನ ಅರ್ಜಿ ಕುರಿತು ಆಗಸ್ಟ್ 20ರಂದು ಅದೇಶ ಹೊರಡಿಸಲಿದೆ. ಸೋಮವಾರವೇ ರಾಜ್ಯಪಾಲರ ಪತ್ರವನ್ನು ಸಲ್ಲಿಸಿದರೆ ನ್ಯಾಯಾಲಯ ಮಂಗಳವಾರವೇ ತನ್ನ ನಿರ್ಧಾರ ಕುರಿತು ಆದೇಶ ಹೊರಡಿಸಲಿದೆ. ಅಬ್ರಹಾಂ ಅವರ ಅರ್ಜಿಯ ವಿಚಾರಣೆ ಕುರಿತು ಆಗಸ್ಟ್ 21ರಂದು ವಿಚಾರಣೆ ನಡೆಯಲಿದೆ. ಒಂದು ವೇಳೆ ತನಿಖೆಗೆ ನ್ಯಾಯಾಲಯ ಅನುಮತಿ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗುವುದು ನಿಶ್ಚಿತ. ಇದು ಈ ಪ್ರಕರಣದ ಪ್ರಮುಖ ಘಟ್ಟವಾಗಲಿದೆ.
ಮುಖ್ಯಮಂತ್ರಿಗಳ ಮುಂದಿರುವ ಆಯ್ಕೆಗಳೇನು?
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮೋದನೆ ನೀಡಿದ್ದಾರೆ ಎಂದ ಮಾತ್ರಕ್ಕೆ ಮುಖ್ಯಮಂತ್ರಿಗಳ ಮುಂದೆ ಆಯ್ಕೆಗಳೇ ಇಲ್ಲ ಎಂದು ಅರ್ಥವಲ್ಲ. ರಾಜ್ಯಪಾಲರು ನೀಡಿರುವ ಅನುಮೋದನೆ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದೆ ಮತ್ತು ಸೋಮವಾರವೇ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ತಂಡ ರಾಜ್ಯಪಾಲರ ನಿರ್ಧಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ರಾಜ್ಯಪಾಲರು ಅನುಮೋದನೆ ನೀಡಿರುವುದರಿಂದ ದೂರುದಾರರ ದೂರಿಗೆ ತೂಕ ಬಂದಿದೆ. ಈ ಪ್ರಕರಣದ ವಿಚಾರಣೆ ನಡೆಸಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆಯೂ ಹಲವಾರು ಆಯ್ಕೆಗಳಿವೆ. ಮೇಲ್ನೋಟಕ್ಕೆ ತನಿಖೆಗೆ ಅರ್ಹ ಎಂದು ಕಂಡು ಬಂದರೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅದೇಶ ನೀಡಬಹುದು. ನ್ಯಾಯಾಲಯದ ಮುಂದೆ ಹಾಜರಾಗಲು ಮುಖ್ಯಮಂತ್ರಿಗಳಿಗೆ ಸಮನ್ಸ್ ನೀಡಬಹುದು. ಈ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಕರಣವನ್ನು ತಿರಸ್ಕರಿಸಲೂಬಹುದು.
ಒಟ್ಟಾರೆ ರಾಜ್ಯಪಾಲರು ಪ್ರಾಸಿಕ್ಯೂ಼ಷನ್ ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯ ಡೋಲಾಯಮಾನದಲ್ಲಿದೆ ಎಂದು ಹೇಳಬಹುದು. ನಾಲ್ಕು ದಶಕಗಳ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಡೆಸಿಕೊಂಡು ಬಂದಿದ್ದ ರಾಜಕೀಯ ಜೀವನಕ್ಕೆ ಮುಸುಕಾಗಬಹುದು.
(ವರದಿ- ಎಚ್.ಮಾರುತಿ, ಬೆಂಗಳೂರು)