ಮುಡಾ ಸೈಟ್‌ ಹಂಚಿಕೆ ಅಕ್ರಮ; ರಾಜಕೀಯ ಸಂಚಲನ ಮೂಡಿಸಿದ ರಾಜ್ಯಪಾಲರು ಕ್ರಮ, ವಿಶೇಷ ಸಂಪುಟ ಸಭೆ ರದ್ದು?, ಯಾರು ಏನು ಹೇಳಿದ್ರು
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಸೈಟ್‌ ಹಂಚಿಕೆ ಅಕ್ರಮ; ರಾಜಕೀಯ ಸಂಚಲನ ಮೂಡಿಸಿದ ರಾಜ್ಯಪಾಲರು ಕ್ರಮ, ವಿಶೇಷ ಸಂಪುಟ ಸಭೆ ರದ್ದು?, ಯಾರು ಏನು ಹೇಳಿದ್ರು

ಮುಡಾ ಸೈಟ್‌ ಹಂಚಿಕೆ ಅಕ್ರಮ; ರಾಜಕೀಯ ಸಂಚಲನ ಮೂಡಿಸಿದ ರಾಜ್ಯಪಾಲರು ಕ್ರಮ, ವಿಶೇಷ ಸಂಪುಟ ಸಭೆ ರದ್ದು?, ಯಾರು ಏನು ಹೇಳಿದ್ರು

MUDA Scam Updates; ಮುಡಾ ಸೈಟ್ ಹಂಚಿಕೆ ಅಕ್ರಮ ಕೇಸ್‌ನಲ್ಲಿ ರಾಜ್ಯಪಾಲರ ಕ್ರಮ ರಾಜಕೀಯ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ಕಾರಣ, ಇಂದು ಸಂಜೆಗೆ ನಿಗದಿಯಾಗಿದ್ದ ವಿಶೇಷ ಸಚಿವ ಸಂಪುಟ ಸಭೆ ರದ್ದುಗೊಂಡಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ಮುನ್ನೆಲೆಗೆ ಬಂದಿದೆ. ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಮುಡಾ ಸೈಟ್‌ ಹಂಚಿಕೆ ಅಕ್ರಮ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಮಧ್ಯದವರು) ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ಬಲಬದಿಯವರು) ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ರಾಜೀನಾಮೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ (ಎಡಬದಿಯವರು) ಕೂಡ ಪ್ರತಿಕ್ರಿಯಿಸಿದ್ದಾರೆ.
ಮುಡಾ ಸೈಟ್‌ ಹಂಚಿಕೆ ಅಕ್ರಮ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಮಧ್ಯದವರು) ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ಬಲಬದಿಯವರು) ರಾಜಕೀಯ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ರಾಜೀನಾಮೆ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ (ಎಡಬದಿಯವರು) ಕೂಡ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆ ನಡೆಸುವುದಕ್ಕೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕ್ರಮ ರಾಜಕೀಯ ಸಂಚಲನ ಮೂಡಿಸಿದೆ. ಇಂದು (ಆಗಸ್ಟ್ 17) ಸಂಜೆ ನಿಗದಿಯಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನೂ ಸರ್ಕಾರ ರದ್ದುಗೊಳಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಕೆಲವು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಈ ನಡುವೆ, ಸಚಿವರು ವಿಧಾನಸೌಧಕ್ಕೆ ದೌಡಾಯಿಸಿದ್ದು, ಅಲ್ಲಿ ಅಧಿಕಾರಿಗಳ ಜೊತೆಗೂ ಸಮಾಲೋಚನೆ ನಡೆಸಿದ್ದಾರೆ. ಸೋಮವಾರ ರಾಜ್ಯಪಾಲರ ತೀರ್ಮಾನದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಏತನ್ಮಧ್ಯೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವರ ನಿಯೋಗ ಈಗ ಮಧ್ಯಾಹ್ನ 12.30 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಸಚಿವರು ಒಬ್ಬೊಬ್ಬರಾಗಿ ಪ್ರತಿಕ್ರಿಯೆ ನೀಡತೊಡಗಿದ್ದು, ಅದರ ವಿವರ ಇಲ್ಲಿದೆ.

ಮುಡಾ ಹಗರಣಕ್ಕೆ ಕಾನೂನು ಪರಿಣತರ ತಂಡದ ಸಲಹೆಯಂತೆ ಕ್ರಮ; ಗೃಹ ಸಚಿವ ಡಾ. ಜಿ.ಪರಮೇಶ್ವರ

"ಯಾವ ರೀತಿ‌ ಅನುಮತಿ ನೀಡಿದ್ದಾರೆ ನೋಡಬೇಕು. ಅನುಮತಿ ಕೊಟ್ಟದ್ದು ನಿಜವಾದರೆ ಅದರ ವಿರುದ್ಧ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೀಗಲ್ ಟೀಮ್ ಜೊತೆ ಚರ್ಚೆ ಮಾಡ್ತಾರೆ. ಮೊದಲಿಂದಲೂ ಕೇಂದ್ರದಿಂದ ಒತ್ತಡ ಇದೆ ಅನ್ನೋದು ಸ್ಪಷ್ಟವಾಗಿದೆ. ನಿಖರವಾದ ಮಾಹಿತಿಗಳು ಸಿಎಂ ಆದೇಶ, ಮೌಖಿಕ ಆದೇಶ ಇಲ್ಲದಿದ್ರೂ ಶೋಕಾಸ್ ನೋಟೀಸ್ ನೀಡಿದ್ರು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಇಡೀ ಪ್ರಕರಣಕ್ಕೆ ಸಂಬಂಧಿಸಿ ಪೂರ್ಣ ವಿವರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಮೇಲಿಂದ ಒತ್ತಡ ಬಂದಿರಬಹುದು. ರಾಜಭವನವನ್ನು ದುರ್ಬಳಕೆ ಮಾಡುಕೊಂಡಿದ್ದಾರೆ. ಪ್ರಾಸಿಕ್ಯೂಷನ್ ಬಗ್ಗೆ ದೂರುದಾರನನ್ನ ಕರೆದಿರೋದು ಗೊತ್ತಿಲ್ಲ. ಯಾವ ರೀತಿ ನೇರವಾಗಿ ಇನ್ವಾಲ್ವ್ ಆಗದಿದ್ರೂ ಅವರ ಮೇಲೆ ಈ ಕ್ರಮ ಸರಿಯಲ್ಲ. ಸಿಎಂ ರಾಜೀನಾಮೆ ಪ್ರಶ್ನೆ ಈಗ ಉದ್ಭವ ಆಗಲ್ಲ. ಯಾವ ರೀತಿ ಹೋರಾಟ ಮಾಡಬೇಕು ಅನ್ನೋದು ನಾವು ನೋಡ್ತೀವಿ. ಲೀಗಲ್ ಟೀಮ್ ಯಾವ ರೀತಿ ಸಲಹೆ ನೀಡುವುದೋ ನೋಡಿ ಮುಂದಿನ ಕ್ರಮ ತಗೊಳ್ಳುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿದರು.

ಈ ಹಿಂದೆ ಮುರುಗೇಶ್‌ ನಿರಾಣಿ ವಿರುದ್ಧ ವಿಚಾರಣೆಗೆ ಪರ್ಮೀಷನ್‌ ಕೊಡಲಿಲ್ಲ, ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ ವಿರುದ್ಧ ಪರ್ಮೀಷನ್ ಕೊಡಲಿಲ್ಲ. ಬಿಜೆಪಿ ಕಾಲದ ಹಗರಣ ತನಿಖೆ ಸ್ಪೀಡ್ ಅಪ್ ಮಾಡಿದ್ದೇವೆ. ವರದಿ ಬಂದ ಬಳಿಕ ಕ್ರಮ ತಗೊಳ್ಳುತ್ತೇವೆ. ಅದೇ ರೀತಿ, ಬಿಎಸ್‌ವೈ ಪೋಕ್ಸೋ ಪ್ರಕರಣದಲ್ಲಿ ನಮ್ಮ ಅಡ್ವೋಕೇಟ್ ಜನರಲ್ ಮೇಲ್ಮನವಿಯನ್ನ ತೆರವು ಮಾಡಿಸಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.

ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ; ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ

ರಾಜ್ಯಪಾಲರು ತಮ್ಮ ಸಂವಿಧಾನ ದತ್ತ ಅಧಿಕಾರ ಚಲಾಯಿಸಿ ಮುಖ್ಯಮಂತ್ರಿಗಳ ಮುಡಾ ಹಗರಣದ ದೂರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ.

ಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಭಂಡತನ ಪ್ರದರ್ಶಿಸುತ್ತಿದ್ದ ಸಿದ್ದರಾಮಯ್ಯನವರು ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಬಿಜೆಪಿ ಪಾದಯಾತ್ರೆಗೆ ಸಿಕ್ಕಿರುವ ಯಶಸ್ಸು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ವ್ಯಕ್ತಿಯ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿಲ್ಲ. ಅಕ್ರಮ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಉದ್ದೇಶ. ಇದರ ಸತ್ಯ ಏನೆಂದು ಗೊತ್ತಾಗಲಿ. 86 ಸಾವಿರ ಜನರು ನಿವೇಶನಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅವರಿಗೆ ಈ ತನಿಖೆಯಿಂದ ನ್ಯಾಯ ದೊರೆಯಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯವಾಗಿಲ್ಲ. ಸದನದಲ್ಲಿ ನಿಲುವಳಿ ಸೂಚನೆಗೆ ಅವಕಾಶ ಕೊಟ್ಟು ಜನರಲ್ಲಿರುವ ಗೊಂದಲ ನಿವಾರಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಪಲಾಯನ ಮಾಡಿದ್ದರಿಂದ ಇದರಲ್ಲಿ ಏನೋ ಇದೆ ಎಂಬ ಅನುಮಾನ ಎಲ್ಲರಿಗೂ ಸ್ಪಷ್ಟವಾಯಿತು. ಪ್ರತಿ ಹಂತದಲ್ಲೂ ಸಿದ್ದರಾಮಯ್ಯನವರ ಹಸ್ತಕ್ಷೇಪ ಕಂಡುಬಂದಿದೆ. ಡಿ ನೋಟಿಫಿಕೇಶನ್‌, ಭೂ ಪರಿವರ್ತನೆ ಈ ಎಲ್ಲ ಹಂತದಲ್ಲೂ ಅವರ ಹುದ್ದೆಯ ಪ್ರಭಾವ ಬಳಕೆಯಾಗಿದೆ. ಇಷ್ಟೆಲ್ಲ ಆಗಿರುವಾಗ ಇದು ದೊಡ್ಡ ಹಗರಣ ಎಂಬುದು ಸಾಬೀತಾಗಿದೆ ಎಂದರು.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿನ ರಾಜ್ಯಪಾಲರು ಖಾಸಗಿ ದೂರಿಗಾಗಿ ತನಿಖೆಗೆ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ ಕೈವಾಡವಿತ್ತು ಎಂದರೆ ಅದನ್ನು ಒಪ್ಪುತ್ತಾರಾ? ಈಗ ನೈತಿಕತೆಯ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಆಗ ಯಡಿಯೂರಪ್ಪ ತೋರಿದ ನಡೆಯನ್ನು ಸಿದ್ದರಾಮಯ್ಯ ಈಗ ತೋರಲಿ. ರಾಜ್ಯಪಾಲರು ಸರ್ಕಾರದ ಭಾಗ. ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟಿಸಿದರೆ ಅವರು ಸಂವಿಧಾನಕ್ಕೆ ತೋರುವ ಅಗೌರವ ಎಂದು ಅವರು ಹೇಳಿದರು.

ಸರ್ಕಾರ ಅಸ್ಥಿರಗೊಳಿಸುತ್ತಿಲ್ಲ: ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಶಾಸಕರೇ ತಿರುಗಿಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಅಶೋಕ ಅವರು ಸ್ಪಷ್ಟಪಡಿಸಿದರು.

Whats_app_banner