ಲೋಕಸಭೆ ಚುನಾವಣೆ ಸಮೀಪವಿರುವಾಗಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೇಕೆ ಕಾಂಗ್ರೆಸ್‌ ಕೆಂಗಣ್ಣು; ಪ್ರಶ್ನೆಗಳ ಸುರಿಮಳೆ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭೆ ಚುನಾವಣೆ ಸಮೀಪವಿರುವಾಗಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೇಕೆ ಕಾಂಗ್ರೆಸ್‌ ಕೆಂಗಣ್ಣು; ಪ್ರಶ್ನೆಗಳ ಸುರಿಮಳೆ

ಲೋಕಸಭೆ ಚುನಾವಣೆ ಸಮೀಪವಿರುವಾಗಲೇ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲೇಕೆ ಕಾಂಗ್ರೆಸ್‌ ಕೆಂಗಣ್ಣು; ಪ್ರಶ್ನೆಗಳ ಸುರಿಮಳೆ

ಲೋಕಸಭೆಯ ಕಲಾಪದ ನಡುವೆ ಒಂದಿಬ್ಬರು ಅಕ್ರಮವಾಗಿ ನುಸುಳಿದ ಪ್ರಕರಣದ ಬಳಿಕ, ಮೈಸೂರು ಸಂಸದ ಪ್ರತಾಪ್ ಸಿಂಹನ ವಿರುದ್ಧ ಕರ್ನಾಟಕದಲ್ಲಿ ಕಾಂಗ್ರೆಸ್‌ ತನ್ನ ಟೀಕಾ ಪ್ರಹಾರವನ್ನು ತೀವ್ರಗೊಳಿಸಿದೆ. ಈ ವಿದ್ಯಮಾನದ ವಿವರ ಹೀಗಿದೆ.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ (@mepratap)

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕಾಂಗ್ರೆಸ್ ವಾಗ್ದಾಳಿ ಹೆಚ್ಚಾಗಿದೆ. ಪ್ರತಾಪ್ ಸಿಂಹ ವಿರುದ್ಧ ಅವರ ತಮ್ಮನ ಹೆಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಹೊಸದಾಗಿ ವಾಗ್ದಾಳಿ ಶುರುಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಟ್ವಿಟರ್ ಹ್ಯಾಂಡಲ್‌ನಲ್ಲೂ ಪ್ರತಾಪ್ ಸಿಂಹ ಅವರನ್ನು ಟ್ಯಾಗ್ ಮಾಡಿ, ಪ್ರಶ್ನೆಗಳ ಸರಣಿಯನ್ನೆ ಮುಂದಿಡಲಾಗಿದೆ.

“ನಾಡಿನ ಸುಳ್ಳ ಪ್ರತಾಪ್ ಸಿಂಹನ ತಮ್ಮ ಕಾಡಿನ ಕಳ್ಳ ವಿಕ್ರಮ್ ಸಿಂಹ! ಸಂಸತ್ ದಾಳಿಕೋರರಿಗೆ ಪಾಸ್ ನೀಡಿದ ವಿಚಾರದಲ್ಲಿ ಪ್ರಶ್ನೆಗಳಿಗೆ ಉತ್ತರಿಸದೆ ಪ್ರತಾಪ್ ಸಿಂಹ ತಲೆ ಮರೆಸಿಕೊಂಡಿದ್ದಾರೆ, ಅವರ ತಮ್ಮ ಮರಗಳ್ಳತನದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ತಪ್ಪೇ ಮಾಡಿಲ್ಲ ಎಂದರೆ ತಮ್ಮ ತಲೆಮರೆಸಿಕೊಳ್ಳುವುದೇಕೆ? ಅಣ್ಣ ಉತ್ತರಿಸದೆ ಪಲಾಯನ ಮಾಡುವುದೇಕೆ?” ಎಂದು ಕಾಂಗ್ರೆಸ್ ಪಕ್ಷದ ಎಕ್ಸ್‌ ಹ್ಯಾಂಡಲ್‌ನಲ್ಲಿ ಮಾಡಿದ ಟ್ವೀಟ್‌ ಮಾಡಲಾಗಿದೆ.

ಯುವ ಕಾಂಗ್ರೆಸ್ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದು, “ನಾಡಿನ ಸುಳ್ಳ ಪ್ರತಾಪ್ ಸಿಂಹನ ತಮ್ಮ ಕಾಡಿನ ಕಳ್ಳ ವಿಕ್ರಮ್ ಸಿಂಹ. ಸಂಸತ್ ದಾಳಿಕೋರರಿಗೆ ಪಾಸ್ ನೀಡಿದ ವಿಚಾರದಲ್ಲಿ ಉತ್ತರಿಸದೆ ಪ್ರತಾಪ್ ಸಿಂಹ ಅವರು ತಲೆ ಮರೆಸಿಕೊಂಡಿದ್ದಾರೆ, ಅವರ ತಮ್ಮ ಮರಗಳ್ಳತನದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ತಪ್ಪೇ ಮಾಡಿಲ್ಲ ಎಂದರೆ, ತಮ್ಮ ತಲೆಮರೆಸಿಕೊಳ್ಳುವುದೇಕೆ? ಅಣ್ಣ ಉತ್ತರಿಸದೆ ಪಲಾಯನ ಮಾಡುವುದೇಕೆ?” ಎಂದು ಪ್ರಶ್ನಿಸಿ ಅಣ್ಣ ತಮ್ಮಿಂದರ ಫೋಟೋ ಹಾಕಿ ಪ್ರಶ್ನೆಗಳನ್ನು ಮುಂದಿಟ್ಟಿದೆ.

ಈ ಎರಡೂ ಟ್ವೀಟ್‌ಗಳಿಗೆ ಹಲವರು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ ಪಕ್ಷವನ್ನು ಒಂದಷ್ಟು ಜನ ತರಾಟೆಗೆ ತೆಗೆದುಕೊಂಡರೆ, ಇನ್ನೊಂದಿಷ್ಟು ಜನ ಬಿಜೆಪಿಯನ್ನು, ಪ್ರತಾಪ್ ಸಿಂಹ ಅವರನ್ನು ಟೀಕಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದುಕೊಂಡು ಲೋಕಸಭೆಯಲ್ಲಿ ಕಲಾಪದ ವೇಳೆ ದಾಂದಲೆ ಎಬ್ಬಿಸಿದ ಪ್ರಕರಣದ ಬಳಿಕ ಅವರ ವಿರುದ್ಧ ಕರ್ನಾಟಕದಲ್ಲಿ ವಾಗ್ದಾಳಿ, ಟೀಕೆಗಳು ಹೆಚ್ಚಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಪ್ರತಾಪ್ ಸಿಂಹ, ಈ ಬಾರಿ ಮೂರನೇ ಸಲ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಎರಡು ಚುನಾವಣೆಗಳಲ್ಲಿ ಪ್ರತಾಪ್ ಸಿಂಹ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಸರಿಯಾದ ಪೈಪೋಟಿ ಸಿಕ್ಕಿರಲಿಲ್ಲ ಎಂಬ ಕಾರಣಕ್ಕೆ, ಗೆಲುವು ಸುಲಭವಾಗಿತ್ತು ಎನ್ನುತ್ತಾರೆ ಸಿದ್ದರಾಮಯ್ಯ ಅಭಿಮಾನಿಗಳು. ವಿಧಾನಸಭಾ ಚುನಾವಣೆ ವೇಳೆ ವರುಣಾದಲ್ಲಿ ಪ್ರತಾಪ್ ಸಿಂಹ ಅವರ ಪ್ರಚಾರ ವೈಖರಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆರಳಿಸಿತ್ತು. ಆದ್ದರಿಂದ ಈ ಸಲ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಸುಲಭ ಗೆಲುವು ಸಿಕ್ಕಬಾರದು ಎಂಬ ರಾಜಕೀಯ ಲೆಕ್ಕಾಚಾರ ಈ ದಾಳಿಯ ಹಿಂದಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿಕೊಂಡಿವೆ.

ಏನಿದು ವಿಕ್ರಮ ಸಿಂಹನ ಪ್ರಕರಣ: ಹಾಸನ ತಾಲೂಕು ನಂದಗೋಡನಹಳ್ಳಿ ಗ್ರಾಮದ ಸಮೀಪದ ಗೋಮಾಳವನ್ನು ಶುಂಠಿ ಬೆಳೆಯಲು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಮ ಸಿಂಹ ಗುತ್ತಿಗೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಈ ಗೋಮಾಳದಲ್ಲಿದ್ದ 126 ಮರಗಳನ್ನು ಕಳೆದ ವಾರ ಕಡಿಯಲಾಗಿತ್ತು. ಬೇಲೂರು ತಹಸೀಲ್ದಾರ್‌ ಮಮತಾ ಅವರು ಈ ವಿದ್ಯಮಾನವನ್ನು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ದೂರು ಬಂದ ನಂತರ ಕೆಲ ಮರಗಳನ್ನು ಜಪ್ತಿ ಮಾಡಲಾಗಿತ್ತು. ಮರ ಕಡಿದ ಪ್ರಕರಣದಲ್ಲಿ ಜಮೀನು ಸ್ವಾಧೀನದಲ್ಲಿಟ್ಟುಕೊಂಡಿರುವ ಜಯಮ್ಮ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮರಕಡಿದ ಪ್ರಕರಣದಲ್ಲಿ ವಿಕ್ರಮ ಸಿಂಹ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದಾಗ್ಯೂ, ಪ್ರಕರಣದ ತನಿಖಾಧಿಕಾರಿ ಬೇಲೂರು ವಲಯದ ಅರಣ್ಯಾಧಿಕಾರಿ ಎದುರು ಹಾಜರಾಗಿದ್ದ ವಿಕ್ರಮ ಸಿಂಹ, ಶುಂಠಿ ಬೆಳೆಯುವ ಸಲುವಾಗಿ ಜಯಮ್ಮ ಅವರ ಜತೆಗೆ ಒಪ್ಪಂದ ಮಾಡಿಕೊಂಡಿರುವುದು ನಿಜ. ಮರ ಕಡಿದ ವಿಚಾರಕ್ಕೂ ತನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ಈ ನಡುವೆ, ಸಂಸದ ಪ್ರತಾಪ್ ಸಿಂಹ ತನ್ನ ಮೇಲೆ ಯಾಕೆ ಈ ರೀತಿ ಸುಖಾ ಸುಮ್ಮನೆ ದಾಳಿ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

“ಮಾನ್ಯ ಮುಖ್ಯಮಂತ್ರಿಗಳೇ, ನನ್ನ ತಮ್ಮ ಮರಗಳ್ಳನಾ? ನಿಮ್ಮದೇ ಸರ್ಕಾರ ಹಾಕಿರುವ FIR ನಲ್ಲಿ ಯಾರ ಹೆಸರಿದೆ? ನನ್ನ ಮೇಲೆ ಇನ್ನೂ ನಡೆಯಲಿದೆ ಅವ್ಯಾಹತ ಆಕ್ರಮಣ” ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

Whats_app_banner