ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಮೂರನೇ ದೂರು ದಾಖಲು, ಇಂದು ಒಂದರ ತೀರ್ಪು ಸಾಧ್ಯತೆ
Muda Scam; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಸೈಟ್ ಅಕ್ರಮದ ಕೇಸ್ ಬಹಳ ಸಂಕಷ್ಟವನ್ನು ಉಂಟುಮಾಡಿದೆ. ಇದೀಗ, ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಮೂರನೇ ದೂರು ದಾಖಲು, ಇಂದು ಒಂದರ ತೀರ್ಪು ಸಾಧ್ಯತೆ ಇದೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಂಚಿಕೆ ಕೇಸ್ (ಮುಡಾ ಕೇಸ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಬೆಂಗಳೂರಿನಲ್ಲಿರುವ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ದೂರು ಅರ್ಜಿ ಸಲ್ಲಿಸಿದ್ದಾರೆ. ಇದರ ತೀರ್ಪು ಇಂದು ಪ್ರಕಟವಾಗುವ ನಿರೀಕ್ಷೆ ಇದೆ.
ರಾಜ್ಯಪಾಲರ ಕಡ್ಡಾಯ ಅನುಮತಿಯಿಲ್ಲದೆ ಸಲ್ಲಿಸಲಾದ ಈ ಖಾಸಗಿ ದೂರಿನಲ್ಲಿ ನ್ಯಾಯಾಲಯದ ನಿರ್ದೇಶನದ ತನಿಖೆ ಅಥವಾ ಸಿಬಿಐ ಅಥವಾ ಲೋಕಾಯುಕ್ತ ತನಿಖೆಯನ್ನು ನಡೆಸಬೇಕು ಎದು ಕೋರಲಾಗಿದೆ. ಇನ್ನೊಂದೆಡೆ, ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರನ್ನು ಸೋಮವಾರ ಸಂಜೆ ಸಲ್ಲಿಸಿದ್ದು, ಇದರ ವಿಚಾರಣೆ ಇಂದು (ಆಗಸ್ಟ್ 13) ನಡೆಯುವ ಸಾಧ್ಯತೆ ಇದೆ.
ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ
ಮುಡಾ ಕೇಸ್‌ಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪವಿದೆ. ಈ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ದೂರು ಅರ್ಜಿ ಸಲ್ಲಿಸಿದ್ದರು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಆಗಸ್ಟ್ 9 ರಂದು ವಿಚಾರಣೆ ನಡೆಸಿದ್ದರು. ಇದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿದ್ದು, ಇಂದು ತೀರ್ಪು ಹೊರಬೀಳು ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರಿನಲ್ಲಿ ಏನಿದೆ?
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223 ರ ಜೊತೆಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 200 ರ ಪ್ರಕಾರ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಮುಡಾ ಅಕ್ರಮದ ತನಿಖೆಯನ್ನು ಪ್ರಾರಂಭಿಸಲು ಅಥವಾ ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಲೋಕಾಯುಕ್ತ ತನಿಖೆಗೆ ನಿರ್ದೇಶಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ದೂರಿನಲ್ಲಿರುವ ಪ್ರಕಾರ, ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಅಂತಹ ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿರುವುದಾಗಿ ಹೇಳಲಾಗುತ್ತಿದೆ. ಈ ಜಮೀನಿಗೆ ಬದಲಿ ನಿವೇಶವನ್ನು ಮುಡಾ ಮೂಲಕ ಪಡೆಯಲಾಗಿದೆ. ಇದು ಪರೋಕ್ಷವಾಗಿ ಅಧಿಕಾರ ದುರ್ಬಳಕೆ ಎಂಧು ಆರೋಪಿಸಲಾಗಿದೆ. ಆದ್ದರಿಂದಲೇ ಮುಖ್ಯಮಂತ್ರಿ ಅವರ ವಿರುದ್ಧ ಕ್ರಿಮಿನಲ್ ಆರೋಪದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಕೃಷ್ಣ ಅವರು ಮನವಿ ಮಾಡಿದ್ದಾರೆ.