Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ-ಮಾದಾವರ ಮೆಟ್ರೋ ರೈಲು ಸಂಚಾರ ಜುಲೈ ಅಂತ್ಯಕ್ಕೆ ಆರಂಭ
2025ರ ವೇಳೆಗೆ ನಮ್ಮ ಮೆಟ್ರೋ 2ನೇ ಹಂತವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದೀಗ ನಾಗಸಂದ್ರ-ಮಾದಾವರ ಮೆಟ್ರೋ ರೈಲು ಸಂಚಾರ ಜುಲೈ ಅಂತ್ಯಕ್ಕೆ ಆರಂಭವಾಗಲಿದೆ ಎಂದು ವರದಿಯಾಗಿದೆ.
ಬೆಂಗಳೂರು: ನಾಗಸಂದ್ರ ಮತ್ತು ಮಾದಾವರ (Nagasandra-Madavara Metro Service) ನಡುವಿನ ಮೆಟ್ರೋ ಮಾರ್ಗದ ವಿಸ್ತರಣೆಯು ಜುಲೈ ಅಂತ್ಯದ ವೇಳೆಗೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹಸಿರು ಮಾರ್ಗದಲ್ಲಿ 3.7 ಕಿಲೋಮೀಟರ್ ವಿಸ್ತರಣೆ 2019 ರಿಂದ ವಿಳಂಬವಾಗಿದೆ. ವಿಸ್ತೃತ ಮಾರ್ಗದಲ್ಲಿ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಸೇರಿ ಒಟ್ಟು ಮೂರು ನಿಲ್ದಾಣಗಳಿವೆ. ಈ ಮಾರ್ಗದ ಕಾಮಗಾರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 298 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿ, "ಟ್ರ್ಯಾಕ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಪ್ರಾಯೋಗಿಕ ತಪಾಸಣೆ ನಡೆಸಲಾಗುವುದು. ಈಗಿನಂತೆ, ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನಮ್ಮ ಮೆಟ್ರೋ 2ನೇ ಹಂತವನ್ನು 2025ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ಹೇಳಿದ್ದಾರೆ. ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಮಾರ್ಗದ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದರು.
ಬೆಂಗಳೂರು ಮೆಟ್ರೋ ಜಾಗತಿಕ ಗುಣಮಟ್ಟವನ್ನು ಹೊಂದಿದೆ. ಇದನ್ನು 'ದೆಹಲಿ ಮೆಟ್ರೋಗಿಂತ ಉತ್ತಮ' ಎಂದಿದ್ದಾರೆ. "ನಮ್ಮ ಮೆಟ್ರೋ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿದೆ. ಯಾವುದೇ ದಿನ ಇರಲಿ ದೆಹಲಿ ಮೆಟ್ರೋಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಯಾವುದೇ ಹಂತದಲ್ಲಿ ಗುಣಮಟ್ಟ, ಪ್ರಯಾಣಿಕರ ಸೌಕರ್ಯ ಹಾಗೂ ಅನುಕೂಲತೆಯೊಂದಿಗೆ ರಾಜಿ ಮಾಡಿಕೊಂಡಿಲ್ಲ. ಮೆಟ್ರೋ ಬೆಂಗಳೂರಿನ ಭವಿಷ್ಯ" ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಮಾರ್ಗದ ಸಮಯ, ಟಿಕೆಟ್ ದರಗಳನ್ನು ಇನ್ನಷ್ಟೇ ತಿಳಿಯಬೇಕಿದೆ. ಈ ಸಂಚಾರ ಸೇವೆಯನ್ನು ಆರಂಭಿಸುವ ಮುನ್ನವೇ ಬಿಎಂಆರ್‌ಸಿಎಲ್ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ದಕ್ಷಿಣ ಭಾರತದ ಮೊದಲ ಮೆಟ್ರೋ ರೈಲು ಸಂಪರ್ಕವನ್ನು ಪಡೆದ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಮೆಟ್ರೋ ಸೇವೆಯಲ್ಲಿ ವಿಸ್ತರಿಸಲಾಗುತ್ತಿದೆ. ಇತ್ತೀಚೆಗಷ್ಟೇ ಅಂದ್ರೆ 2023ರ ಅಕ್ಟೋಬರ್ 9 ರಂದು ಕಾಡುಗೋಡಿಯಿಂದ (ವೈಟ್‌ಫೀಲ್ಡ್) ಚಲ್ಲಘಟ್ಟಕ್ಕೆ ಸಂಪರ್ಕ ಕಲ್ಪಿಸುವ 43 ಕಿಲೋ ಮೀಟರ್ ದೂರದ ನೇರಳೆ ಮಾರ್ಗವನ್ನು ಆರಂಭಿಸಲಾಗಿದೆ. ಇದು ಬೆಂಗಳೂರಿನ ಪೂರ್ವ ಮತ್ತು ಪಶ್ಟಿಮ ಭಾಗಗಳ ನಡುವಿನ ಸುಗಮ ಸಂಪರ್ಕವನ್ನು ಸಕ್ರಿಯಗೊಳಿಸಿದೆ. 43 ಕಿಲೋ ಮೀಟರ್ ಕ್ರಮಿಸಲು ಒಟ್ಟು 80 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 37 ನಿಲ್ದಾಣಗಳನ್ನು ಒಳಗೊಂಡಿದೆ. ಆರಂಭದಲ್ಲಿ ಇದು ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆಗೆ ಮಾತ್ರಗೆ ಸಮೀತವಾಗಿತ್ತು. ನಂತರ ಹಂತ ಹಂತವಾಗಿ ವಿಸ್ತರಿಸಲಾಗಿದೆ.
ಚಲ್ಲಘಟ್ಟದಿಂದ ಬಿಡದಿ ವರೆಗೆ 15 ಕಿಲೋ ಮೀಟರ್, ಸಿಲ್ಕ್‌ಬೋರ್ಡ್‌ನಿಂದ ಕನಕಪುರ ರಸ್ತೆಯಹಾರೋಹಳ್ಳಿಯ ವರೆಗೆ 24 ಕಿಲೋ ಮೀಟರ್ ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ವಿಸ್ತರಿಸಲು ಈಗಾಗಲೇ ಬಿಎಂಆರ್‌ಸಿಎಲ್‌ಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.