Namma Metro: ಬಿಡದಿ ಹ್ಯಾಫ್ ಮಾರಥಾನ್ ಹಿನ್ನೆಲೆ, ನಾಳೆ ಬೆಳಿಗ್ಗೆ 5 ಗಂಟೆಯಿಂದಲೇ ಶುರುವಾಗಲಿದೆ ಮೆಟ್ರೋ ರೈಲು ಓಡಾಟ
ರಾಮನಗರದ ಬಿಡದಿಯಲ್ಲಿ ನಾಳೆ (ಮಾರ್ಚ್ 23) ನಡೆಯುತ್ತಿರುವ ಹ್ಯಾಫ್ ಮಾರಥಾನ್‌ಗೆ ತೆರಳಲು ಜನರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೊ ಬೆಳಿಗ್ಗೆ 5 ಗಂಟೆಯಿಂದಲೇ ಸೇವೆ ಆರಂಭಿಸಲಿದೆ. ಮೆಜಿಸ್ಟಿಕ್‌ನಿಂದ ಚಲ್ಲಘಟ್ಟದ ಕಡೆಗೆ 4 ಗಂಟೆಯಿಂದಲೇ ಮೆಟ್ರೊ ರೈಲು ಓಡಾಟ ಆರಂಭವಾಗಲಿದೆ.

ಬೆಂಗಳೂರು: ಬಿಡದಿಯಲ್ಲಿ ನಾಳೆ (ಮಾರ್ಚ್ 23) ನಡೆಯಲಿರುವ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಗಮವು (ಬಿಎಂಆರ್‌ಸಿಎಲ್) ಬೆಳಿಗ್ಗೆ 5 ಗಂಟೆಯಿಂದ ಮೆಟ್ರೋ ರೈಲುಗಳ ಓಡಾಟವನ್ನು ಆರಂಭಿಸಲಿದೆ. ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ರೈಲು ಓಡಾಟ ಆರಂಭವಾಗುತ್ತದೆ.
ನಾಲ್ಕು ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ರೈಲುಗಳು ಬೆಳಿಗ್ಗೆ 7 ಗಂಟೆಗೆ ಬದಲಾಗಿ ಬೆಳಿಗ್ಗೆ 5 ಗಂಟೆಗೆ ಓಡಾಟ ಪ್ರಾರಂಭಿಸುತ್ತವೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಅನುಕೂಲ ಮಾಡಲು, ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಚಲ್ಲಘಟ್ಟ ಕಡೆಗೆ ಸೇವೆಗಳು ಬೆಳಿಗ್ಗೆ 4 ಗಂಟೆಯಿಂದಲೇ ಪ್ರಾರಂಭವಾಗಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ಬಿಎಂಆರ್‌ಸಿಎಲ್ ಪ್ರಯಾಣಿಕರನ್ನು ವಿನಂತಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಸೇವೆಗಳನ್ನು ವಿಸ್ತರಿಸುವುದಾಗಿ ಬಿಎಂಆರ್‌ಸಿಎಲ್ ಇತ್ತೀಚೆಗೆ ಘೋಷಿಸಿತ್ತು. ಅದರ ಪ್ರಕಾರ ಮಾರ್ಚ್ 13 ರಿಂದ ಐಟಿಪಿಎಲ್ ಹಾಗೂ ಮೈಸೂರು ರಸ್ತೆ ನಡುವೆ 5.56ರ ಬದಲು 3.56 ರಿಂದ ರಾತ್ರಿ 8 ಗಂಟೆವರೆಗೆ 5 ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಓಡಾಡುತ್ತಿವೆ.
ಈ ಬದಲಾವಣೆಯು ಮೈಸೂರು ರಸ್ತೆ ಹಾಗೂ ಐಟಿಪಿಎಲ್ ನಡುವೆ ಸಂಜೆ ಹೊತ್ತಿನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ವಿಶೇಷವಾಗಿ ಐಟಿಪಿಎಲ್, ವೈಟ್‌ಫೀಲ್ಡ್‌ನಂತಹ ಐಟಿ ಕಾರಿಡಾರ್ ಪ್ರದೇಶದಲ್ಲಿರುವವರಿಗೆ ಕಚೇರಿಯಿಂದ ಮನೆಗೆ ತೆರಳಲು ನೆರವಾಗಲು ಈ ಸೇವೆಯನ್ನು ಒದಗಿಸಲಾಗಿದೆ. ಹೆಚ್ಚು ಸುಗಮ ಪ್ರಯಾಣಕ್ಕಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಬಳಸಿಕೊಳ್ಳುವಂತೆ ಬೆಂಗಳೂರು ಮೆಟ್ರೊ ಮನವಿ ಮಾಡಿದೆ.
ಮೇ ತಿಂಗಳಿಂದ ಹಳದಿ ಮಾರ್ಗ ಆರಂಭ ಸಾಧ್ಯತೆ
ಬಹು ನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ, ಇದು ಮೇ 2025 ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪಿಂಕ್ ಲೈನ್ ಅಪ್‌ಡೇಟ್
ಹಳದಿ ಮಾರ್ಗ ನವೀಕರಣದ ಜೊತೆಗೆ, ಶಿವಕುಮಾರ್ ಅವರು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ದಿಂದ ನಾಗವಾರದವರೆಗೆ ಚಲಿಸುವ ಪಿಂಕ್ ಮಾರ್ಗದ ವಿವರಗಳನ್ನು ನೀಡಿದರು. ಈ 21.2-ಕಿಮೀ ಮಾರ್ಗವು 7.5-ಕಿಮೀ ಎತ್ತರದ ವಿಭಾಗ ಮತ್ತು 13.7-ಕಿಮೀ ಸುರಂಗ ಮಾರ್ಗವನ್ನು ಹೊಂದಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ (ಸ್ವಾಗತ್ ಕ್ರಾಸ್) ವರೆಗಿನ ಎತ್ತರದ ಭಾಗವು ಡಿಸೆಂಬರ್ 2025 ರ ವೇಳೆಗೆ ಸಾರ್ವಜನಿಕ ಬಳಕೆಗೆ ಸಿದ್ಧವಾಗಲಿದೆ, ಆದರೆ ಡೈರಿ ವೃತ್ತವನ್ನು ನಾಗವಾರಕ್ಕೆ ಸಂಪರ್ಕಿಸುವ ಸುರಂಗ ಮಾರ್ಗವು ಡಿಸೆಂಬರ್ 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.
