Bengaluru News: 37 ಪರೀಕ್ಷೆಗಳಿಗೆ ಒಳಗಾಗಲಿದೆ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಮೆಟ್ರೋ ರೈಲು
ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ಮೆಟ್ರೋ ರೈಲು 37 ವಿವಿಧ ಪರೀಕ್ಷೆಗಳನ್ನು ಎದುರಿಸಲಿದೆ. ಇದಾದ ಬಳಿಕ ಈ ರೈಲು ಸಂಚಾರ ಶುರುಮಾಡಲಿದೆ. ಇಂತಹ ಇನ್ನೆಷ್ಟು ಚಾಲಕ ರಹಿತ ರೈಲುಗಳು ಬೆಂಗಳೂರಿಗೆ ಆಗಮಿಸಲಿವೆ- ಇಲ್ಲಿದೆ ಆ ವಿವರ.
ಬೆಂಗಳೂರು: ಹಳದಿ ಮೆಟ್ರೋ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕ ರಹಿತ ರೈಲನ್ನು ಟ್ರ್ಯಾಕ್‌ನಲ್ಲಿ ಪರೀಕ್ಷಿಸುವುದಕ್ಕೆ ಬೆಂಗಳೂರು ಮೆಟ್ರೋ ರೈಲು ಸಾರಿಗೆ ನಿಗಮ (ಬಿಎಂಆರ್‌ಸಿಎಲ್) ಸಜ್ಜಾಗಿದೆ. ಹಳದಿ ಮೆಟ್ರೋ ರೈಲಿನ ಬೋಗಿಗಳ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಶೀಘ್ರವೇ ಪರೀಕ್ಷಾರ್ಥ ಸಂಚಾರಕ್ಕೆ ಚಾಲಕ ರಹಿತ ಮೆಟ್ರೋ ರೈಲನ್ನು ಹಳಿಗೆ ಇಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಚೀನಾದ ಎಂಜಿನಿಯರ್‌ಗಳ ಸಮ್ಮುಖದಲ್ಲೇ ರೈಲಿನ ಜೋಡಣೆ ಕಾರ್ಯಗಳು ಮತ್ತು ಇತರೆ ಪರೀಕ್ಷೆಗಳು ನಡೆಯತ್ತಿವೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 37 ಪರೀಕ್ಷೆಗಳು ನಡೆಯಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
"ಹೊಸ ರೋಲಿಂಗ್ ಸ್ಟಾಕ್ ಆಗಿರುವುದರಿಂದ, ಅನೇಕ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗಾಗಿ ಪರೀಕ್ಷಾ ಟ್ರ್ಯಾಕ್ ಗೆ ತೆರಳುವ ಮೊದಲು ಬೋಗಿಗಳನ್ನು ಜೋಡಿಸಲಾಗಿದೆ. ನಂತರ, ಇದನ್ನು ಮುಖ್ಯ ಪರೀಕ್ಷೆಗೆ ಸ್ಥಳಾಂತರಿಸಲಾಗುವುದು. ನಾಲ್ಕು ತಿಂಗಳ ಕಾಲ ಸುಮಾರು 37 ರೀತಿಯ ಪರೀಕ್ಷೆಗಳು ನಡೆಯಲಿದ್ದು, ನಂತರ ಸಿಗ್ನಲಿಂಗ್ ವ್ಯವಸ್ಥೆ, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಇತ್ಯಾದಿಗಳೊಂದಿಗೆ ಸಿಸ್ಟಮ್ ಏಕೀಕರಣವೂ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬೆಂಗಳೂರಿಗೆ ಇನ್ನೂ ಬರಲಿವೆ ಚಾಲಕ ರಹಿತ ರೈಲುಗಳು
ಮೇ ವೇಳೆಗೆ ಇನ್ನೂ ಎರಡು ರೈಲುಗಳು ಮತ್ತು ಜೂನ್ ನಿಂದ ಪ್ರತಿ ತಿಂಗಳು ಎರಡು ರೈಲುಗಳು ಬೆಂಗಳೂರು ತಲುಪುವ ನಿರೀಕ್ಷೆಯಿದೆ. ಈ ಚಾಲಕರಹಿತ ರೈಲುಗಳು 90 ಸೆಕೆಂಡುಗಳ ಆವರ್ತನದಲ್ಲಿ ಚಲಿಸುತ್ತವೆ. ಪ್ರತಿ ಬೋಗಿಯು 21 ಮೀಟರ್ ಉದ್ದವಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಈ ಚಾಲಕರಹಿತ ರೈಲನ್ನು ಹಳದಿ ಮಾರ್ಗದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ವೇಳೆಗೆ ಪರಿಚಯಿಸಲಾಗುತ್ತದೆ. 2019 ರಲ್ಲಿ ಸಿಆರ್‌ಸಿಸಿ ನಾನ್ಜಿಂಗ್ ಪುಜೆನ್ ಕಂಪನಿ ಲಿಮಿಟೆಡ್ ಬೆಂಗಳೂರು ಮೆಟ್ರೋ ರೈಲು ಸಾರಿಗೆ ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಈ ಮೂಲಮಾದರಿ ರೈಲಿಗೆ 216 ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ರೈಲನ್ನು ಜೋಡಿಸಲಾಯಿತು. ಚೀನಾದ ಎಂಜಿನಿಯರ್ ಗಳ ತಂಡವು ಜೋಡಣೆ ಚಟುವಟಿಕೆಯ ಮೇಲ್ವಿಚಾರಣೆ ಮಾಡಿತು.
ಸಿಲ್ಕ್ ಬೋರ್ಡ್ ಮೂಲಕ ಆರ್.ವಿ.ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಈ ಮೂಲಮಾದರಿ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ. ಈ ರೈಲಿನ ಪ್ರಾಯೋಗಿಕ ಸಂಚಾರವನ್ನು ಕೈಗೊಂಡ ನಂತರ, ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)