ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ; ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ
ಕನ್ನಡ ಸುದ್ದಿ  /  ಕರ್ನಾಟಕ  /  ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ; ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ

ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ; ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರವರೆಗಿನ 3.7 ಕಿ.ಮೀ ವಿಸ್ತರಣೆ ಪೂರ್ಣಗೊಂಡಿದೆ. ಸಿಎಂಆರ್‌ಎಸ್ ಅನುಮೋದನೆಯ ನಂತರ ಅಕ್ಟೋಬರ್ ತಿಂಗಳ ಅಂತ್ಯಕ್ಕೂ ಮುನ್ನ ಈ ಮಾರ್ಗದಲ್ಲಿ ಮೆಟ್ರೋ ರೈಲು ಓಡಾಡುವ ಸಾಧ್ಯತೆ ಇದೆ.

ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ
ಇನ್ಮುಂದೆ ಈ ಮಾರ್ಗದಲ್ಲೂ ಸಂಚರಿಸಲಿದೆ ನಮ್ಮ ಮೆಟ್ರೋ

ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಗೊಂಡಿದ್ದು, ರೈಲುಗಳ ಓಡಾಟ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ಅನುಮೋದನೆಯ ನಂತರ ನಮ್ಮ ಮೆಟ್ರೋದಲ್ಲಿ ವಿಸ್ತರಣೆಗೊಂಡ ಮಾರ್ಗದಲ್ಲಿ ಅಕ್ಟೋಬರ್‌ ತಿಂಗಳೊಳಗೆ ಪ್ರಯಾಣಿಕರು ಪ್ರಯಾಣಿಸುವ ಅವಕಾಶ ಸಿಗುವ ಸುಳಿವು ಸಿಕ್ಕಿದೆ. ಈವರೆಗೆ ಹಸಿರು ಮಾರ್ಗದಲ್ಲಿ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ನಿಂದ ನಾಗಸಂದ್ರವರೆಗೆ ಮಾತ್ರವೇ ಮೆಟ್ರೋ ಸೌಲಭ್ಯ ಅಸ್ತಿತ್ವದಲ್ಲಿತ್ತು. ಇದೀಗ ನಾಗಸಂದ್ರದಿಂದ ಮತ್ತು ಮಾದಾವರದವರೆಗೂ ಹಸಿರು ಮಾರ್ಗ ವಿಸ್ತರಣೆಗೊಂಡಿದ್ದು, ಶೀಘ್ರದಲ್ಲೇ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದೃಢಪಡಿಸಿದೆ. ಈ ಅನುಮೋದನೆಯು ಮಹತ್ವದ ಮೈಲಿಗಲ್ಲು ಆಗಿದ್ದು, ಹಸಿರುವ ಮಾರ್ಗದಲ್ಲಿ ಬಹುನಿರೀಕ್ಷಿತ ವಿಸ್ತರಣೆಯ ಮಾರ್ಗ ಇದಾಗಿದೆ. ಜನನಿಬಿಡ ಪ್ರದೇಶದಲ್ಲಿ ನಮ್ಮ ಮೆಟ್ರೋಗೆ ಆದಾಯ ಗಳಿಕೆಯೂ ಆರಂಭವಾಗಲಿದೆ.

ಅಕ್ಟೋಬರ್ 3ರ ಗುರುವಾರ ನಡೆದ ಸಮಗ್ರ ಪರಿಶೀಲನೆಯ ನಂತರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಅಧಿಕಾರಿಗಳು ಒಂದೇ ದಿನದಲ್ಲಿ ಹೊಸ ಮಾರ್ಗವನ್ನು ಮೌಲ್ಯಮಾಪನ ಮಾಡಿದ್ದಾರೆ. ವಿಸ್ತೃತ ಮಾರ್ಗದ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ತುಮಕೂರು ರಸ್ತೆಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ವಿಸ್ತರಣೆ ಅಕ್ಟೋಬರ್ ತಿಂಗಳ ಮಧ್ಯಾವಧಿ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಎಂಬ ಭರವಸೆ ಇದೆ ಎಂದು ದಿ ಹಿಂದೂ ವರದಿ ತಿಳಿಸಿದೆ.

ಅನುಮೋದನೆ ಪಡೆದ ಮಾರ್ಗವು ಹಸಿರು ಮಾರ್ಗಕ್ಕೆ 3.7 ಕಿಲೋಮೀಟರ್ ಹೆಚ್ಚುವರಿ ದೂರ ಸೇರ್ಪಡೆಯಾಗುತ್ತದೆ. ಈ ಹಿಂದೆಯೇ ಈ ಮಾರ್ಗಕ್ಕೆ ಚಾಲನೆ ದೊರಕಬೇಕಿತ್ತು. ಆದರೆ ಯೋಜನೆಗೆ ಗಮನಾರ್ಹ ವಿಳಂಬವಾಗಿದೆ. ನೈಸ್ ರಸ್ತೆಯ ಬಳಿ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ಸವಾಲಾಗಿದ್ದ ಕಾರಣದಿಂದ ಐದು ವರ್ಷಗಳ ಕಾಲ ವಿಳಂಬವಾಯ್ತು. ಆ ಬಳಿಕ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಮತ್ತೆ ಸಮಸ್ಯೆಗಳಾಗಿತ್ತು.

ಮೂರು ನಿಲ್ದಾಣ

ವಿಸ್ತೃತ ಮಾರ್ಗವು ಸಂಪೂರ್ಣ ಎಲಿವೇಟೆಡ್ ಮಾರ್ಗವಾಗಿದೆ. ಇದರಲ್ಲಿ ಮೂರು ಹೊಸ ನಿಲ್ದಾಣಗಳು ಸೇರ್ಪಡೆಯಾಗಲಿವೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರಕ್ಕೆ ಹಸಿರು ಮಾರ್ಗ ಅಂತ್ಯವಾಗಲಿದೆ. ಈ ವಿಭಾಗದಲ್ಲಿ ಮೆಟ್ರೋ ಆರಂಭವಾದ ನಂತರ, ಪ್ರಮುಖ ಸ್ಥಳಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಪರ್ಕ ಸುಲಭವಾಗಲಿದೆ. ವಿಶೇಷವಾಗಿ ಪ್ರಮುಖ ಪ್ರದರ್ಶನಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ಕ್ಕೆ ಹತ್ತಿರವಾಗಲಿದೆ.

ಅಕ್ಟೋಬರ್‌ ತಿಂಗಳ ಮಧ್ಯದಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸುವ ಬಿಎಂಆರ್‌ಸಿಎಲ್‌ನ ಯೋಜನೆಯಿಂದ ಪ್ರಯಾಣಿಕರಿಗೆ ಸುಧಾರಿತ ಮೆಟ್ರೋ ಪ್ರಯಾಣ ಸಿಗಲಿದೆ. ಮುಖ್ಯವಾಗಿ ತುಮಕೂರು ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ತುಸು ಸರಾಗವಾಗಲಿದೆ.

Whats_app_banner