ಕನ್ನಡ ಸುದ್ದಿ  /  Karnataka  /  Bengaluru News Namma Metro Passengers Complain About Operations Of Short Loop Trains Causing Inconvenience Bmrcl Uks

Namma Metro: ಬೆಂಗಳೂರು ಮೆಟ್ರೋ ಶಾರ್ಟ್‌ ಲೂಪ್ ರೈಲು ಸೇವೆ ಬಗ್ಗೆ ಪ್ರಯಾಣಿಕರ ಅಸಮಾಧಾನ, ನಿಯತ ಸೇವೆ ಒದಗಿಸಲು ಆಗ್ರಹ

ಬೆಂಗಳೂರಿನಲ್ಲಿ ಬೆಳಗ್ಗಿನ ಹೊತ್ತು ಕಂಡುಬರುವ ಜನದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಮತ್ತು ನಿತ್ಯ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸುವುದಕ್ಕೆ ನಮ್ಮ ಮೆಟ್ರೋ ಶಾರ್ಟ್‌ ಲೂಪ್ ಸೇವೆ ಆರಂಭಿಸಿತ್ತು. ಈ ಸೇವೆಯ ಬಗ್ಗೆ ಪ್ರಯಾಣಿಕರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಯಾಕೆ ಏನು ಎಂಬುದರ ವಿವರ ಇಲ್ಲಿದೆ.

ಬೆಂಗಳೂರು ಮೆಟ್ರೋ (ಸಾಂದರ್ಭಿಕ ಚಿತ್ರ)
ಬೆಂಗಳೂರು ಮೆಟ್ರೋ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪ್ರಯಾಣಿಕ ದಟ್ಟಣೆಗೆ ನಮ್ಮ ಮೆಟ್ರೋ ಪರಿಚಯಿಸಿದ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣ ಮತ್ತು ಗರುಡಾಚಾರ್‌ಪಾಳ್ಯ ನಡುವೆ ಶಾರ್ಟ್ ಲೂಪ್ ರೈಲು ಸೇವೆಯಲ್ಲಿ ಅನಾನುಕೂಲ ಉಂಟಾಗುತ್ತಿದೆ ಎಂದು ನಿತ್ಯ ಪ್ರಯಾಣಿಕರು ದೂರಿದ್ದಾರೆ.

ರೈಲು ಸಂಚಾರದಲ್ಲಿ ಉಂಟಾಗುತ್ತಿರುವ ದಿಢೀರ್ ವಿಳಂಬ ಮತ್ತು ಜನದಟ್ಟಣೆಯ ಕಾರಣ, ಕಚೇರಿಗೆ ತೆರಳುವವರು, ನಿತ್ಯ ವೃತ್ತಿಗಾಗಿ ಹೋಗುವವರು, ಇಂದಿರಾನಗರದಿಂದ ಪಟ್ಟಂದೂರು ಅಗ್ರಹಾರಕ್ಕೆ ತೆರಳುವವರು ತೊಂದರೆಯಾಗುತ್ತಿರುವುದಾಗಿ ಕಳೆದ ಮಂಗಳವಾರ ದೂರಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗರುಡಾಚಾರ್‌ಪಾಳ್ಯದಿಂದ ಆಚೆಗೆ ಹೋಗುವ ಪ್ರಯಾಣಿಕರು, ನಮ್ಮ ಮೆಟ್ರೋ ರೈಲು ಸೇವೆ ದಿಢೀರ್ ಸ್ಥಗಿತಗೊಳಿಸಿದ ಕಾರಣ ತೊಂದರೆ ಅನುಭವಿಸಿದರು. ರೈಲಿಗಾಗಿ ಪ್ಲಾಟ್‌ಫಾರಂನಲ್ಲಿ ಬಹಳ ಸೇರಿದ್ದರಿಂದ ಅಲ್ಲಿ ಜನದಟ್ಟಣೆಯೂ ಅನುಭವಕ್ಕೆ ಬಂತು. ಈ ರೀತಿ ದಿಢೀರ್ ಸೇವೆ ಸ್ಥಗಿತಗೊಳಿಸುತ್ತಿರುವುದು ಮೊದಲಲ್ಲ ಎಂದು ಅನೇಕ ಪ್ರಯಾಣಿಕರು ದೂರಿದ್ದಾಗಿ ವರದಿ ಹೇಳಿದೆ.

ನಮ್ಮ ಮೆಟ್ರೋ ರೈಲು ಸೇವೆ ದಿಢೀರ್ ಸ್ಥಗಿತ; ಪ್ರಯಾಣಿಕರ ಆರೋಪ

‘ನಮ್ಮ ಮೆಟ್ರೊ’ದ ನಿತ್ಯದ ಬಳಕೆದಾರರೊಬ್ಬರು, “ನಾನು ಸಾಮಾನ್ಯವಾಗಿ ಇಂದಿರಾನಗರದಿಂದ ಪಟ್ಟಂದೂರು ಅಗ್ರಹಾರಕ್ಕೆ 25 ನಿಮಿಷಗಳ ಪ್ರಯಾಣಕ್ಕೆ ನಮ್ಮ ಮೆಟ್ರೋ ರೈಲು ಸೇವೆಯನ್ನು ಬಳಸುತ್ತೇನೆ. ಮಂಗಳವಾರ ಬೆಳಿಗ್ಗೆ, ನಾನು ಇನ್ನೊಂದು ಮೆಟ್ರೋ ರೈಲು ಹಿಡಿಯುವ ಸಲುವಾಗಿ ಗರುಡಾಚಾರ್‌ಪಾಳ್ಯದ ತನಕ ಶಾರ್ಟ್‌ಲೂಪ್‌ ರೈಲಿನಲ್ಲಿ ಹೊರಟೆ. ಆದರೆ, ಪ್ಲಾಟ್‌ಫಾರಂನಲ್ಲಿ ಅದಾಗಲೇ ಜನದಟ್ಟಣೆ ಇತ್ತು. ದಿಢೀರ್‌ ಆಗಿ ರೈಲು ಸೇವೆ ಸ್ಥಗಿತವಾಗಿತ್ತು ಮೂರು ರೈಲುಗಳು ಬಂದಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ವೈಟ್‌ಫೀಲ್ಡ್‌ಗೆ ಹೋಗುವ ರೈಲು ಬಂತು. ಪ್ರಯಾಣಿಕ ದಟ್ಟಣೆ ಇದ್ದ ಕಾರಣ ರೈಲು ಏರಲು ಸಾಧ್ಯವಾಗಿಲ್ಲ" ಎಂದು ತಿಳಿಸಿದ್ದಾಗಿ ವರದಿ ಹೇಳಿದೆ.

ಇದೇ ಸಮಯದಲ್ಲಿ ಸತ್ಯ ಸಾಯಿ ಹಾಸ್ಪಿಟಲ್ ಮೆಟ್ರೋ ಸ್ಟೇಶನ್‌ನಲ್ಲಿ ಪ್ರಯಾಣಿಕರಲ್ಲಿ ರೈಲು ಇಳಿಯುವಂತೆ ಸೂಚಿಸಲಾಗಿತ್ತು. ಅಲ್ಲಿ ಕೂಡ ಜನದಟ್ಟಣೆ ಕಂಡುಬಂದಿತ್ತು. ಈ ಎಲ್ಲ ಕಾರಣದಿಂದ ನಿಗದಿತ ಸಮಯಕ್ಕೆ ಪಟ್ಟಂದೂರು ಅಗ್ರಹಾರಕ್ಕೆ ತಲುಪುವುದು ಸಾಧ್ಯವಾಗಿಲ್ಲ. 55 ನಿಮಿಷ ಬೇಕಾಯಿತು ಎಂದು ಅವರು ವಿವರಿಸಿದ್ದಾಗಿ ವರದಿ ಹೇಳಿದೆ.

ನಮ್ಮ ಮೆಟ್ರೋ ತಾಂತ್ರಿಕ ದೋಷಗಳು ಹೊಸದಲ್ಲ

ಕಳೆದ ವಾರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಗೆ ಪೀಕ್ ಅವರ್ (ಬೆಳಗ್ಗೆ 8.45 ರಿಂದ 10.20) ನಲ್ಲಿ ಜನದಟ್ಟಣೆ ನಿರ್ವಹಿಸುವುದಕ್ಕಾಗಿ ಶಾರ್ಟ್‌ ಲೂಪ್ ಸೇವೆಯನ್ನು ಬೆಳಗ್ಗೆ 5 ಗಂಟೆಯಿಂದ ಪರಿಚಯಿಸಿತ್ತು. ಇದನ್ನು ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ಜನರಿಗೆ ಅನುಕೂಲ ಒದಗಿಸುವುದಕ್ಕೆ ಪರಿಚಯಿಸಲಾಗಿದೆ. ಇದನ್ನು ನಿಯತವಾಗಿ ಒದಗಿಸಬೇಕು ಎಂಬುದು ಜನರ ಬೇಡಿಕೆ.

ಇವೆಲ್ಲದರ ನಡುವೆ, ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ತಾಂತ್ರಿಕ ದೋಷಗಳು ಹೊಸದಲ್ಲ. ಈ ವಿಚಾರವಾಗಿ ಸ್ಪಂದಿಸಿರುವ ಬಿಎಂಆರ್‌ಸಿಎಲ್‌, ಮೆಟ್ರೋ ರೈಲು ಸೇವೆ ರದ್ದುಗೊಳಿಸಿಲ್ಲ. ತಾಂತ್ರಿಕ ದೋಷದ ಕಾರಣ ವಿಳಂಬವಾಗಿದೆಯಷ್ಟೇ ಎಂದು ಸಮಜಾಯಿಷಿ ನೀಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point