ಬೆಂಗಳೂರು: ಚಾಲಕ ರಹಿತ ಹಳದಿ ಮೆಟ್ರೋ ರೈಲು ಪರೀಕ್ಷೆ, 20 ನಿಮಿಷ ಅಂತರದಲ್ಲಿ ಸೇವೆ, 5 ರಿಂದ 6 ರೈಲು ಸಂಚಾರ ಸಾಧ್ಯತೆ ಮತ್ತು ಇತರೆ ಅಪ್ಡೇಟ್ಸ್
ಬೆಂಗಳೂರು: ಚಾಲಕ ರಹಿತ ಹಳದಿ ಮೆಟ್ರೋ ರೈಲು ಪರೀಕ್ಷೆ ಗುರುವಾರ ಯಶಸ್ವಿಯಾಗಿ ನೆರವೇರಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ಸಂಚಾರ ಶುರುವಾಗಲಿದ್ದು, 20 ನಿಮಿಷ ಅಂತರದಲ್ಲಿ 5 ರಿಂದ 6 ರೈಲು ಸಂಚಾರ ಸಾಧ್ಯತೆ ಇದೆ. ಯುಪಿಎಸ್‌ಸಿ ಪರೀಕ್ಷೆಗೆ ಹೆಚ್ಚುವರಿ ಮೆಟ್ರೋ ರೈಲು ಸೇವೆ ಒದಗಿಸುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಹಳಿಗಳ ಮೇಲೆ ಶೀಘ್ರದಲ್ಲೇ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ನಡೆಸಲಿದೆ. ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಎಂಜಿನ್ ರೈಲು ಪ್ರಾಯೋಗಿಕ ಸಂಚಾರ ನಡೆಸಿದೆ. ಬೊಮ್ಮಸಂದ್ರ ಆರ್ ವಿ ರಸ್ತೆ ನಡುವಿನ 18.82 ಕಿಮೀ ಹಳಿಯಲ್ಲಿ ಚಾಲಕ ರಹಿತ ರೈಲಿನಲ್ಲಿ ಮೆಟ್ರೋ ತಂತ್ರಜ್ಞರು ಸಂಚರಿಸಿ ಪರೀಕ್ಷೆ ನಡೆಸಿದರು. ಇವರು ಸಿಗ್ನೆಲಿಂಗ್, ಟ್ರ್ಯಾಕ್ಷನ್, ಮತ್ತು ಬ್ರೇಕಿಂಗ್ ಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ- ಆಗಸ್ಟ್ ತಿಂಗಳಲ್ಲಿ ಇನ್ನಷ್ಟು ಪರೀಕ್ಷೆ ಮುಗಿದ ಬಳಿಕ ಸಿಎಂಆರ್‌ಎಸ್‌ನಿಂದ ಅನುಮತಿ ಸಿಕ್ಕ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಲಿದೆ. ಆರಂಭಿಕ ಹಂತದಲ್ಲಿ 5 ರಿಂದ 6 ರೈಲುಗಳು 20 ನಿಮಿಷ ಅಂತರದಲ್ಲಿ ಸಂಚಾರ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವರ್ಷದ ಫೆಬ್ರವರಿ 20 ರಂದು ಚೀನಾದಿಂದ ಚಾಲಕ ರಹಿತ ರೈಲಿನ ಆರು ಬೋಗಿಗಳ ಮೊದಲ ರೈಲು ಹೆಬ್ಬಗೋಡಿ ಮೆಟ್ರೋಗೆ ಬಂದಿಳಿದಿದ್ದವು. ಚಾಲಕ ರಹಿತ ರೈಲು ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಸಿಂಗಸಂದ್ರ, ಕೂಡ್ಲು ಗೇಟ್, ಬೊಮ್ಮನಹಳ್ಳಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇ ಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್ ವಿ ರಸ್ತೆ ನಿಲ್ದಾಣ ಸೇರಿ 16 ನಿಲ್ದಾಣಗಳ ಮೂಲಕ ಹಾದು ವಿವಿಧ ಪರೀಕ್ಷೆಗಳನ್ನು ನಡೆಸಿದೆ.
ಪ್ರಾಥಮಿಕ ಪರೀಕ್ಷೆಗಳು ಮುಗಿದ ಬಳಿಕ ಸಿಸ್ಟಂ ಸಂಯೋಜನೆ ನಡೆಯಲಿದೆ. ಈ ಪರೀಕ್ಷೆಗಳು ಯಶಸ್ವಿಯಾದರೆ ಗುಣಮಟ್ಟ ತಪಾಸಣಾ ಸಂಸ್ತೆಗಳು ಸುರಕ್ಷತಾ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲಿವೆ. ಹಳದಿ ಮಾರ್ಗದ ಕಾಮಗಾರಿ 2017ರಲ್ಲಿ ಆರಂಭವಾಗಿತ್ತು. ಮಾರ್ಗವು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವನ್ನು ಸಂಪರ್ಕಿಸುತ್ತದೆ. ಜೊತೆಗೆ ಈ ಮಾರ್ಗವು ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳೊಂದಿಗೆ ಸಂಪರ್ಕ ಕೊಂಡಿಯಾಗಿಯೂ ಕೆಲಸ ಮಾಡಲಿದೆ.
ಯುಪಿಎಸ್‌ಸಿ ಪರೀಕ್ಷೆಗೆ ಹೆಚ್ಚುವರಿ ಮೆಟ್ರೋ ರೈಲು ಸಂಚಾರ
ಕೇಂದ್ರ ನಾಗರಿಕ ಸೇವೆಗಳ (ಯುಪಿಎಸ್ ಸಿ) ಪರೀಕ್ಷೆಗಳು ಜೂನ್ 16ರಂದು ನಡೆಯಲಿದ್ದು ಅಂದು ನಮ್ಮ ಮೆಟ್ರೋ ರೈಲುಗಳು ಒಂದು ಗಂಟೆ ಮುಂಚಿತವಾಗಿ ಕಾರ್ಯಾಚರಣೆ ಆರಂಭಿಸಲಿವೆ. ಪ್ರತಿ ಭಾನುವಾರ ನಮ್ಮ ಮೆಟ್ರೋ ರೈಲುಗಳು 7 ಗಂಟೆಗೆ ಸಂಚಾರ ಆರಂಭಿಸಲಿವೆ.
ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಇರುವುದರಿಂದ ಜೂನ್ 16 ಭಾನುವಾರದಂದು ಬೆಳಗ್ಗೆ 6 ಗಂಟೆಗೆ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿವೆ. ಅಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ನಾಲ್ಕೂ ಟರ್ಮಿನಲ್ ಗಲಾದ ವೈಟ್ ಫೀಲ್ಡ್ಡ್, ಚಲ್ಲಘಟ್ಟ, ನಾಗಸಂದ್ರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣಗಳಿಂದ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ತೆರೆಯದ ಮೆಟ್ರೋ ಬಾಗಿಲುಗಳು, ಆತಂಕಕ್ಕೀಡಾದ ಪ್ರಯಾಣಿಕರು
ನಮ್ಮ ಮೆಟ್ರೋದ ನೇರಳೆ ಮಾರ್ಗದ ಎಂಜಿ ರಸ್ತೆಯ ಟ್ರಿನಿಟಿ ನಿಲ್ದಾಣದಲ್ಲಿ ಮೆಟ್ರೋ ರೈಲಿನ ಬಾಗಿಲುಗಳು ತೆರೆದುಕೊಳ್ಳದೆ ಪ್ರಯಾಣಿಕರು ಆತಂಕಕಕೀಡಾಗಿದ್ದರು ಮತ್ತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈಟ್ ಫೀಲ್ಡ್ ಕಡೆಯಿಂದ ಮೆಜೆಸ್ಟಿಕ್ ಗೆ ಸಂಚರಿಸುತ್ತಿದ್ದ ರೈಲು ಗುರುವಾರ ಬೆಳಗ್ಗೆ 9.58ಕ್ಕೆ ಟ್ರನಿಟಿ ನಿಲ್ದಾಣ ತಲುಪಿತ್ತು. ಆದರೆ ತಾಂತ್ರಿಕ ದೋಷಗಳಿಂದಾಗಿ ಬಾಗಿಲುಗಳು ತೆರೆದುಕೊಳ್ಳಲಿಲ್ಲ. ರೈಲು ಇಳಿಯಬೇಕಿದ್ದ ಮತ್ತು ಹತ್ತಬೇಕಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಕೊನೆಗೆ ತಂತ್ರಜ್ಞರು ಆಗಮಿಸಿ ಬಾಗಿಲುಗಳನ್ನು ತೆರೆದು ಪ್ರಯಾಣಿಕರಿಗೆ ಸಹಕರಿಸಿದರು.
ಇದರಿಂದ ಪ್ರಯಾಣಿಕರು ಸುಮಾರು 15 ನಿಮಿಷಗಳ ಕಾಲ ಆತಂಕ್ಕೀಡಾಗಿದ್ದರು. ನಂತರ ಈ ದೋಷಪೂರಿತ ರೈಲನ್ನು ಮೆಜೆಸ್ಟಿಕ್ ನ ಲೂಪ್ ಮಾರ್ಗಕ್ಕೆ ತಂದು ರಿಪೇರಿ ಮಾಡಲಾಯಿತು.ನಂತರ 11.30ಕ್ಕೆ ಎಂದಿನಂತೆ ಮೆಟ್ರೋ ಸಂಚಾರ ಆರಂಭವಾಯಿತು. ಸುಮಾರು ಒಂದೂವರೆ ಗಂಟೆ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
