ಕನ್ನಡ ಸುದ್ದಿ  /  Karnataka  /  Bengaluru News Namma Metro Updates Yellow Line Trial Runs Begin Deadline Extended To Year End Bengaluru Metro Bmrcl Uks

Bengaluru News: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೊದಲ ಚಾಲಕ ರಹಿತ ರೈಲಿನ ಪರೀಕ್ಷಾ ಸಂಚಾರ ಶೀಘ್ರ; ಈಗೇನು ನಡೆಯುತ್ತಿದೆ ಇಲ್ಲಿದೆ ವಿವರ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೊದಲ ಚಾಲಕ ರಹಿತ ರೈಲಿನ ಪರೀಕ್ಷಾ ಸಂಚಾರ ಶೀಘ್ರ ಶುರುವಾಗಲಿದೆ. 15 ರೈಲುಗಳ ಪೈಕಿ ಎರಡು ಬೆಂಗಳೂರು ತಲುಪಿದ್ದು, ಉಳಿದವು ಕೂಡ ಶೀಘ್ರವೇ ಬರಲಿವೆ. ಇವುಗಳ ಸಂಚಾರಕ್ಕೆ ಮೊದಲು ಪರೀಕ್ಷಾ ಸಂಚಾರ ನಡೆಯಲಿದೆ. ಈಗೇನು ನಡೆಯುತ್ತಿದೆ ಎಂಬುದರ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದ ಪರೀಕ್ಷಾ ಸಂಚಾರ ಶೀಘ್ರ (ಸಾಂಕೇತಿಕ ಚಿತ್ರ)
ನಮ್ಮ ಮೆಟ್ರೋ ಹಳದಿ ಮಾರ್ಗದ ಪರೀಕ್ಷಾ ಸಂಚಾರ ಶೀಘ್ರ (ಸಾಂಕೇತಿಕ ಚಿತ್ರ)

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಸಂಚಾರಕ್ಕೆ ಸಂಬಂಧಿಸಿದ ಮಹತ್ವದ ಅಪ್ಡೇಟ್ ಇದು. ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚರಿಸಲಿದ್ದು, ಈಗ ಅದರ ಜೋಡಣೆ ಪೂರ್ಣಗೊಂಡಿದ್ದು ಪರೀಕ್ಷೆಗಳು ನಡೆಯಲಿವೆ. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಹಳದಿ ಮೆಟ್ರೋ ಮಾರ್ಗದಲ್ಲಿ ರೈಲು ಸಂಚಾರ ಜುಲೈನಲ್ಲಿ ಶುರುವಾಗಲಿದೆ ಎಂದು ಘೋಷಿಸಿದ್ದರು.

ಆದರೆ, ಈ ಗಡುವು ಮುಂದೂಡಲ್ಪಡುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಚಾಲಕರಹಿತ ಮೆಟ್ರೋ ರೈಲು ಜೋಡಣೆ ಪೂರ್ಣಗೊಂಡಿದ್ದು, ಇನ್ನು 4 ತಿಂಗಳ ಅವಧಿಯಲ್ಲಿ 37 ವಿವಿಧ ಪರೀಕ್ಷೆಗಳನ್ನು ಅದು ಎದುರಿಸಲಿದೆ. ಪರೀಕ್ಷಾ ಸಂಚಾರವೂ ನಡೆಯಲಿದೆ. ಅದಾದ ಬಳಿಕವಷ್ಟೇ ಹಳದಿ ಮಾರ್ಗದ ಮೆಟ್ರೋ ರೈಲು ಸಂಚಾರ ಸಾಕಾರವಾಗಲಿದೆ.

ಹಳದಿ ಮಾರ್ಗದಲ್ಲಿ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಇನ್ನು ನಾಲ್ಕು ದಿನದಲ್ಲಿ ಪ್ರಾರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಬುಧವಾರ (ಮಾ.6) ಹೇಳಿತ್ತು. ಇದರಂತೆ ಚೀನಾದಿಂದ ತರಿಸಲಾದ ಚಾಲಕ ರಹಿತ ಮೆಟ್ರೋ ಎಂಜಿನ್ ಬೋಗಿ ಜೊತೆಗೆ ಪ್ರಯಾಣಿಕ ಬೋಗಿ ಜೋಡಿಸುವ ಕೆಲಸ ನಡೆದಿತ್ತು. ಚೀನಾದ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಇದು ನಡೆದಿತ್ತು. ಈಗ ನಿಗದಿ ಮಾಡಿರುವ ಪ್ರಕಾರ, ಇಂದು ಮತ್ತು ನಾಳೆ ಸಿಗ್ನಲಿಂಗ್ ಟೆಸ್ಟ್‌ಗಳು ನಡೆಯಲಿವೆ.

ಬೆಂಗಳೂರು ಮೆಟ್ರೋ ಹಳದಿ ಮಾರ್ಗ

ನಮ್ಮ ಮೆಟ್ರೋ ಹಳದಿ ಮಾರ್ಗವು 19.15 ಕಿ.ಮೀ ಉದ್ದ ಇದ್ದು, ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಜಯದೇವ ಹಾಸ್ಪಿಟಲ್, ಸಿಲ್ಕ್‌ಬೋರ್ಡ್ ಜಂಕ್ಷನ್‌, ಎಲೆಕ್ಟ್ರಾನಿಕ್ ಸಿಟಿ ಮೂಲಕ ಸಂಪರ್ಕ ಕಲ್ಪಿಸುತ್ತದೆ.

ಈ ಮಾರ್ಗದಲ್ಲಿ ಆರಂಭಿಕವಾಗಿ ಬೊಮ್ಮಸಂದ್ರ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ ಪ್ರಾಯೋಗಿಕ ಓಟಗಳನ್ನು ನಡೆಸಲಾಗುವುದು. ಏಪ್ರಿಲ್ ಮಧ್ಯದ ವೇಳೆಗೆ ಸಂಪೂರ್ಣ ಮಾರ್ಗಕ್ಕೆ ಈ ಪರೀಕ್ಷಾ ಸಂಚಾರವನ್ನು ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಾಜೆಕ್ಟ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) ಜಿತೇಂದ್ರ ಝಾ ಸುದ್ದಿಗಾರರಿಗೆ ತಿಳಿಸಿದರು.

ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಕನಿಷ್ಠ ಏಳು ರೈಲುಗಳು ಬೇಕು. ಮುಂದಿನ ವರ್ಷದ ಹೊತ್ತಿಗೆ ಇನ್ನೂ 8 ರೈಲುಗಳು ಸೇರ್ಪಡೆಯಾಗಲಿವೆ. ನಂತರ ಪ್ರತಿ 15 ನಿಮಿಷಕ್ಕೆ ಒಂದು ರೈಲು ಈ ಮಾರ್ಗದಲ್ಲಿ ಸಂಚರಿಸಲಿವೆ. ಈ ಸಂಚಾರಕ್ಕೆ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ(ಆರ್‌ಡಿಎಸ್‌ಒ) ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರು ಮತ್ತು ರೈಲ್ವೆ ಮಂಡಳಿಯಿಂದ ಶಾಸನಬದ್ಧ ಅನುಮೋದನೆಗಳು ಬೇಕಾಗಿವೆ ಎಂದು ಅವರು ಹೇಳಿದರು.

ಚೀನಾ ಕಂಪನಿಗೆ ರೈಲು ಪೂರೈಸುವ ಗುತ್ತಿಗೆ

ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂಪನಿ ಲಿಮಿಟೆಡ್ 2019 ರಲ್ಲಿ ಬಿಎಂಆರ್‌ಸಿಎಲ್‌ಗೆ 216 ಕೋಚ್‌ಗಳನ್ನು ಪೂರೈಸುವ 1,578 ಕೋಟಿ ರೂ. ಗುತ್ತಿಗೆ ಒಪ್ಪಂದ ಪಡೆದುಕೊಂಡಿತು. ಇದರಲ್ಲಿ ಹನ್ನೆರಡು ಕೋಚ್‌ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಉಳಿದವುಗಳನ್ನು ಬಂಗಾಳದಲ್ಲಿ ಸಿಆರ್‌ಆರ್‌ಸಿಯ ಭಾರತದ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಜೋಡಿಸಲಿದೆ. ಈ ಮೊದಲ ಎರಡು ರೈಲುಗಳು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲ್ಪಟ್ಟಿದ್ದು, ಹೆಬ್ಬಗೋಡಿ ಡಿಪೋದಲ್ಲಿವೆ. ಒಟ್ಟು 15 ರೈಲುಗಳ ಪೈಕಿ ಈಗ ಒಂದು ರೈಲನ್ನು ಜೋಡಿಸಲಾಗಿದ್ದು, ಅದನ್ನು ಹಲವು ಪರೀಕ್ಷೆಗಳಿಗೆ ಬಳಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point