Namma Metro: 2024ರ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ನಿರೀಕ್ಷೆ, ಸುಳಿವು ನೀಡಿದ ಸಂಸದ ತೇಜಸ್ವಿ ಸೂರ್ಯ
ಬಹು ನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು 2024ರ ಫೆಬ್ರವರಿ ವೇಳೆಗೆ ಸಾರ್ವಜನಿಕರಿಗೆ ತೆರೆಯುವ ಸಾಧ್ಯತೆಯಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಮುಂದಿನ ವರ್ಷ ಫೆಬ್ರವರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಹು ನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು 2024ರ ಫೆಬ್ರವರಿ ವೇಳೆಗೆ ಸಾರ್ವಜನಿಕರಿಗೆ ತೆರೆಯುವ ಸಾಧ್ಯತೆಯಿದೆ. ಈ ನಿರ್ದಿಷ್ಟ ಮಾರ್ಗದ ಪ್ರಾರಂಭದಲ್ಲಿ ಹಲವಾರು ಅಡೆತಡೆ ಉಂಟಾದ ಕಾರಣ ವಿಳಂಬವಾಗಿದೆ. ಇದನ್ನು ಈ ವರ್ಷದ ಜುಲೈ ವೇಳೆಗೆ ಪೂರ್ಣಗೊಳಿಸಲು ಮೊದಲೇ ನಿಗದಿಪಡಿಸಲಾಗಿತ್ತು ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಿರ್ಮಿಸುತ್ತಿರುವ ಬೊಮ್ಮಸಂದ್ರದಿಂದ ಆರ್‌ವಿ ರಸ್ತೆ ಮಾರ್ಗವನ್ನು ಪರಿಶೀಲಿಸಿದ ನಂತರ ತೇಜಸ್ವಿ ಸೂರ್ಯ ಸುದ್ದಿಗಾರರ ಜತೆಗೆ ಮಾತನಾಡಿದರು. ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ 18.8 ಕಿ.ಮೀ ಉದ್ದದ ಈ ಮಾರ್ಗದ ಒಟ್ಟು 16 ನಿಲ್ದಾಣಗಳ ಪೈಕಿ 15 ನಿಲ್ದಾಣಗಳಲ್ಲಿ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಬೆಂಗಳೂರು ಮಹಾನಗರದಲ್ಲಿ ಸಂಚಾರ ಸುಗಮಗೊಳಿಸಲು ಅಧಿಕಾರಿಗಳು ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಇದು ಬೊಮ್ಮಸಂದ್ರದಿಂದ ಹೆಚ್ಚು ಜನದಟ್ಟಣೆಯ ಕೇಂದ್ರ ಸಿಲ್ಕ್ ಬೋರ್ಡ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ 16 ನಿಲ್ದಾಣಗಳಿವು
ಬೆಂಗಳೂರು ಮೆಟ್ರೋದ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಅವುಗಳ ಪಟ್ಟಿ ಹೀಗಿದೆ.
- ಆರ್.ವಿ.ರಸ್ತೆ
- ರಾಗಿಗುಡ್ಡ
- ಜಯದೇವ ಆಸ್ಪತ್ರೆ
- ಬಿಟಿಎಂ ಲೇಔಟ್
- ಸೆಂಟ್ರಲ್ ಸಿಲ್ಕ್ ಬೋರ್ಡ್
- ಬೊಮ್ಮನಹಳ್ಳಿ
- ಸಿಂಗಸಂದ್ರ
- ಎಲೆಕ್ಟ್ರಾನಿಕ್ ಸಿಟಿ
- ಬೊಮ್ಮಸಂದ್ರ
- ಹೊಂಗಸಂದ್ರ
- ಕೂಡ್ಲು ಗೇಟ್
- ಹೊಸ ರೋಡ್
- ಬೆರಟೆನ ಅಗ್ರಹಾರ
- ಕೋನಪ್ಪನ ಅಗ್ರಹಾರ
- ಹುಸ್ಕೂರು ರಸ್ತೆ
- ಹೆಬ್ಬಗೋಡಿ
ಈ ವಿಸ್ತರಣೆಯು ಜಯದೇವ, ಸಿಲ್ಕ್ ಬೋರ್ಡ್ ಮತ್ತು ಆರ್‌ವಿ ರಸ್ತೆ ಸ್ಟೇಶನ್‌ಗಳಲ್ಲಿ ಮೂರು "ಇಂಟರ್‌ಚೇಂಜ್ ಸ್ಟೇಷನ್"ಗಳನ್ನು ಹೊಂದುವ ನಿರೀಕ್ಷೆಯಿದೆ. ಇದು ಸವಾರರು ಗುಲಾಬಿ, ಹಸಿರು ಮತ್ತು ನೇರಳೆ ಮಾರ್ಗಗಳಿಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಹಳದಿ ಮಾರ್ಗವು ಒಮ್ಮೆ ಕಾರ್ಯರೂಪಕ್ಕೆ ಬಂದರೆ ಪ್ರತಿದಿನ 2.5 ಲಕ್ಷ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಫ್ಟ್‌ವೇರ್ ಮತ್ತು ಐಟಿ ದೈತ್ಯ ಇನ್ಫೋಸಿಸ್ ಈ ಮಾರ್ಗದಲ್ಲಿ ಮೆಟ್ರೋ ನಿಲ್ದಾಣಕ್ಕಾಗಿ 180 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ನಮ್ಮ ಮೆಟ್ರೋ ನೇರಳೆ ಮಾರ್ಗ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ
ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಎರಡು ನಿರ್ಣಾಯಕ ಮಾರ್ಗಗಳನ್ನು ಬಳಸುವುದಕ್ಕಾಗಿ ಬೆಂಗಳೂರಿನ ಪ್ರಯಾಣಿಕರು ಮತ್ತು ನಿವಾಸಿಗಳು ಕಾತರದಿಂದ ಇದ್ದಾರೆ. ಕೃಷ್ಣರಾಜಪುರಂ - ಬೈಯಪ್ಪನಹಳ್ಳಿ ಮತ್ತು ಕೆಂಗೇರಿ - ಚಲ್ಲಘಟ್ಟ ಮಾರ್ಗದಲ್ಲಿ ನೇರಳೆ ನಮ್ಮ ಮೆಟ್ರೋ ಶೀಘ್ರದಲ್ಲೇ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಈ ಎರಡು ಮೆಟ್ರೋ ಮಾರ್ಗಗಳ ಉದ್ಘಾಟನೆಯೊಂದಿಗೆ, ನೇರಳೆ ಮಾರ್ಗವು ಪೂರ್ಣವಾದಂತಾಗುತ್ತದೆ. ಇದು ಪೂರ್ವ ಬೆಂಗಳೂರಿನಲ್ಲಿ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.