Farmers Suicide; 15 ತಿಂಗಳಲ್ಲಿ ಕರ್ನಾಟಕದ 1180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ಕಲ್ಯಾಣ ಕರ್ನಾಟಕದವರೇ ಹೆಚ್ಚು-bengaluru news nearly 1200 karnataka farmers died by suicide in 15 months 277 from kalyana karnataka uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Farmers Suicide; 15 ತಿಂಗಳಲ್ಲಿ ಕರ್ನಾಟಕದ 1180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ಕಲ್ಯಾಣ ಕರ್ನಾಟಕದವರೇ ಹೆಚ್ಚು

Farmers Suicide; 15 ತಿಂಗಳಲ್ಲಿ ಕರ್ನಾಟಕದ 1180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ಕಲ್ಯಾಣ ಕರ್ನಾಟಕದವರೇ ಹೆಚ್ಚು

Karnataka farmers Suicide; ಕರ್ನಾಟಕದಲ್ಲಿ 15 ತಿಂಗಳಲ್ಲಿ 1,180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಕಲ್ಯಾಣ ಕರ್ನಾಟಕದವರೇ ಹೆಚ್ಚು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲುಬರಗಿಯಲ್ಲಿ ಹೆಚ್ಚು ಅನ್ನದಾತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕಳವಳಕಾರಿ ಅಂಶದ ಕಡೆಗೆ ಬೆಳಕು ಹರಿಸುವ ವರದಿ ಇಲ್ಲಿದೆ.

15 ತಿಂಗಳಲ್ಲಿ ಕರ್ನಾಟಕದ 1180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ (ಸಾಂಕೇತಿಕ ಚಿತ್ರ)
15 ತಿಂಗಳಲ್ಲಿ ಕರ್ನಾಟಕದ 1180ಕ್ಕೂ ಹೆಚ್ಚು ರೈತರ ಆತ್ಮಹತ್ಯೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಒಂದೆಡೆ ಪ್ರಕೃತಿ ವಿಕೋಪ, ಅತಿ ವೃಷ್ಟಿ, ಅನಾವೃಷ್ಟಿಗಳ ನಡುವೆ ಸಾಲಬಾಧೆಗೆ ಒಳಗಾಗಿ ರೈತರು ಪಡಬಾರದ ಸಂಕಟ ಅನುಭವಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ 1180ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 122 ಪ್ರಕರಣಗಳು ವರದಿಯಾಗಿದ್ದು, ಹಾವೇರಿ ಮತ್ತು ಧಾರವಾಡದಲ್ಲಿ ಕ್ರಮವಾಗಿ 120 ಮತ್ತು 101 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇನ್ನು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಗಮನಿಸಿದರೆ, 277 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಅಂಶ ಕಂಡುಬಂದಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರಗಿಯಲ್ಲಿ ಅತೀ ಹೆಚ್ಚು 69, ಯಾದಗಿರಿಯಲ್ಲಿ 68 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಸೆಳೆದಿದೆ.

ರೈತರ ಸಂಕಷ್ಟಗಳು ಒಂದಲ್ಲ ಎರಡಲ್ಲ..

ಕಳೆದ ವರ್ಷ ಬರದ ಕರಿನೆರಳು ಕೃಷಿಕರನ್ನು ಕಾಡಿತ್ತು. ಅದಕ್ಕೂ ಹಿಂದಿನ ವರ್ಷ ಅತಿವೃಷ್ಟಿ ಬೆಳೆನಾಶಕ್ಕೆ ಕಾರಣವಾಗಿತ್ತು. ಹೀಗೆ ಅತಿ ವೃಷ್ಟಿ ಅನಾವೃಷ್ಟಿಗಳ ನಡುವೆ ಉತ್ತಮ ಮಳೆಯಾಗಿ ಭರ್ಜರಿ ಫಸಲು ಕೈಸೇರಿದಾಗ, ಇಳುವರಿಗೆ ತಕ್ಕ ಬೆಲೆ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸಾಲ ಸೋಲ ಮಾಡಿ ಬಿತ್ತನೆ ಬೀಜ ತಂದು ಕೃಷಿ ಮಾಡುವ ಅನ್ನದಾತನಿಗೆ ಪ್ರತಿ ಹಂತದಲ್ಲೂ ಕೈ ಸುಡುವ ಅನುಭವ. ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಕಳವಳ, ಸಕಾಲಕ್ಕೆ ಸಾಲ ಮರುಪಾವತಿಸಲಾಗದೆ ಮರ್ಯಾದೆಗೆ ಅಂಜಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅನ್ನದಾತರು. ಈ ಪೈಕಿ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ರೈತರು ಎಂಬುದು ಗಮನಿಸಬೇಕಾದ ವಿಷಯ.

"ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 15 ತಿಂಗಳಲ್ಲಿ 277 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ. ಇದಕ್ಕೆ ಪ್ರಕೃತಿಯ ಮುನಿಸು ಒಂದೆಡೆಯಾದರೆ, ಕೃಷಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುವ ಸರ್ಕಾರವೂ ಕಾರಣ. ರೈತರ ಸಂಕಷ್ಟಕ್ಕೆ ಸರ್ಕಾರ ಆಗಬೇಕು, ರೈತರ ಹಿತ ಕಾಪಾಡಲು ಅಗತ್ಯ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು. ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಒದಗಿಸಿದರೆ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ ಎಂದು ಬೀದರ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿರುವುದಾಗಿ ಉದಯವಾಣಿ ವರದಿ ಮಾಡಿದೆ.

ರೈತರ ಆತ್ಮಹತ್ಯೆ- ಕಂದಾಯ ಇಲಾಖೆ ದಾಖಲೆ ಹೇಳುವುದೇನು?

ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ಕರ್ನಾಟಕದಲ್ಲಿ 2023 ಎ. 1ರಿಂದ 2024 ಜು. 4ರ ನಡುವಿನ ಅವಧಿಯಲ್ಲಿ ಒಟ್ಟು1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 277 ರೈತರು ಇದ್ದಾರೆ. ಇನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ, ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು 69, ಯಾದಗಿರಿಯಲ್ಲಿ68, ವಿಜಯನಗರದಲ್ಲಿ 37, ಬೀದರ್‌ನಲ್ಲಿ 36, ಕೊಪ್ಪಳದಲ್ಲಿ 30, ಬಳ್ಳಾರಿಯಲ್ಲಿ 19 ಮತ್ತು ರಾಯಚೂರು ಜಿಲ್ಲೆಯಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷಿ ಚಟುವಟಿಕೆಗಳಲ್ಲಿ ಯುವ ಸಮೂಹದ ಭಾಗಿದಾರಿಕೆ ಕಡಿಮೆಯಾಗುತ್ತಿದೆ. ಕೃಷಿಯಿಂದ ಎಲ್ಲರೂ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಕೃಷಿಕರು ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ಬೆಳವಣಿಗೆಯು ಕೃಷಿ ವಲಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿದೆ. ಕೃಷಿ ಕ್ಷೇತ್ರದ ಅಸ್ತಿತ್ವ ಉಳಿಸಲು ಮತ್ತು ಕೃಷಿಕರನ್ನು ಉಳಿಸಿ ಬೆಳೆಸಲು ಸರ್ಕಾರ ಸರಿಯಾದ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾದ ತುರ್ತು ಸಂದರ್ಭ ಇದು ಎಂಬುದು ರೈತ ಸಂಘಟನೆಗಳ ಅಭಿಪ್ರಾಯ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ