ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನ ಬಂಧನ; 4 ವರ್ಷದ ಮಗು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಮಾಡಿದ ಆರೋಪಿ, ಬೃಹತ್ ಪ್ರತಿಭಟನೆ
ಬೆಂಗಳೂರು ಅಪರಾಧ ಸುದ್ದಿ; ಪತ್ನಿ ಮೇಲೆ ಹಲ್ಲೆ ನಡೆಸಿದ ಕಿರುತೆರೆ ನಟನ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ 4 ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಮಾಡಿದ ಆರೋಪಿಯ ವಿರುದ್ಧ ಬೃಹತ್ ಪ್ರತಿಭಟನೆ ವ್ಯಕ್ತವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಕಿರುತೆರೆ ನಟ ಸನ್ನಿ ಮಹಿಪಾಲ್ ವಿರುದ್ಧ ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಪಾಲ್ ಆತನ ಪತ್ನಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪರಿಚಯವಾಗಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಪರಸ್ಪರ ಒಪ್ಪಿ ಜೂನ್ 15ರಂದು ದೇವಾಲಯವೊಂದರಲ್ಲಿ ವಿವಾಹವಾಗಿದ್ದರು. ಮಹಿಪಾಲ್ ಈ ವಿಷಯವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಸ್ವಲ್ಪ ದಿನಗಳ ನಂತರ ಮನೆಯವರಿಗೆ ತಿಳಿಸುತ್ತೇನೆ. ಅಲ್ಲಿಯವರೆಗೂ ದೂರ ಇರೋಣ ಎಂದು ಭರವಸೆ ನೀಡಿದ್ದರು. ಆದರೆ ಮಹಿಪಾಲ್ ಮತ್ತೊಬ್ಬ ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ವಿಷಯ ಯುವತಿ ತಿಳಿದುಕೊಂಡಿದ್ದರು. ಇದನ್ನು ಪ್ರಶ್ನಿಸಲು ವಿಜ್ಞಾನ ನಗರದ ಮಹಿಪಾಲ್ ಮನೆಗೆ ಆಗಮಿಸಿದ್ದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿದೆ.
ಮಹಿಪಾಲ್ ಚಾಕುವಿನಿಂದ ಯುವತಿಯ ಕೈ ಮತ್ತು ಬೆನ್ನಿಗೆ ಇರಿದಿದ್ದಾರೆ. ಆಗ ಯುವತಿ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾರೆ. ನಂತರ ನೆರೆಹೊರೆಯವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಪಾಲ್ ನಡೆಸಿದ ಹಲ್ಲೆಯಿಂದ ಯುವತಿಗೆ ಗರ್ಭಪಾತವಾಗಿದೆ ಎಂದು ತಿಳಿದು ಬಂದಿದೆ. ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರ್ಟ್ ಆವರಣದಲ್ಲೇ ಮಹಿಳೆಗೆ ಚಾಕು ಇರಿತ; ಆರೋಪಿ ಬಂಧನ
ಹಣಕಾಸು ವ್ಯವಹಾರದಲ್ಲಿ ಉಂಟಾದ ವೈಮನಸ್ಸಿನಿಂದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.
ಮಂಗಳವಾರ ಆರೋಪಿ ಜೆ.ವಿ. ಜಯರಾಮ ರೆಡ್ಡಿ ಚಾಕುವಿನಿಂದ ವಿಮಲಾ ಎಂಬುವರನ್ನು ಇರಿದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಡ್ಡಿ ಮತ್ತು ವಿಮಲಾ ಇಬ್ಬರೂ 9 ವರ್ಷಗಳಿಂಧ ಪರಸ್ಪರ ಸ್ನೇಹಿತರಾಗಿದ್ದರು. ಪ್ರಕರಣವೊಂದರ ಸಂಬಂಧ ವಿಮಲಾ ಶೇಷಾದ್ರಿಪುರ ಪೊಲೀಶ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಕೋರ್ಟ್ ಗೆ ಆಗಮಿಸುತ್ತಿದ್ದಾಗ ವಿಮಲಾ ಅವರಿಗೆ ಆರೋಪಿ ಚಾಕುವಿನಿಂದ ತಿವಿದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಮಹಿಳೆಯು ಅಪಾಯದಿಂದ ಪಾರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
4 ವರ್ಷದ ಮಗು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿ, ಬೃಹತ್ ಪ್ರತಿಭಟನೆ;
ಮೂರು ದಿನಗಳ ಹಿಂದೆ 4 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಗುವಿನ ಶವವು ತಿಪ್ಪಗೊಂಡನಹಳ್ಳಿ ಸಮೀಪ ಪತ್ತೆಯಾಗಿದೆ. ಮಗುವಿನ ಸಂಬಂಧಿಕನೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬೆಂಗಳೂರಿನ ಗೌರಿಪಾಳ್ಯದ ಇಮ್ರಾನ್ ಖಾನ್ ನನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಪೋಷಕರ ಸಂಬಂಧಿಯಾದ ಇಮ್ರಾನ್ ಆಗಾಗ್ಗೆ ಇವರ ಮನೆಗೆ ಬರುತ್ತಿದ್ದ. ಮೂರು ದಿನಗಳ ಹಿಂದೆ ಬಂದಿದ್ದಾಗ ಮಗುವನ್ನು ಕರದುಕೊಂಡು ಹೋಗಿ ಐಸ್ ಕ್ರೀಂ ಕೊಡಿಸಿದ್ದ. ನಂತರವೂ ಮತ್ತೆ ಮಗುವನ್ನು ತನ್ನ ಜತೆ ಕರೆದೊಯ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸಂಜೆಯಾದರೂ ಮಗು ಮನೆಗೆ ಬಾರದಿದ್ದರಿಂದ ಪೋಷಕರು ಹುಡುಕಾಟ ನಡೆಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಆರೋಪಿಗೆ ಕರೆ ಮಾಡಿ ಕೇಳಿದಾಗಲೂ ತನಗೇನೂ ತಿಳಿದಿಲ್ಲ ಎಂದು ಹೇಳಿ ಮೊಬೈಲ್ ಬಂದ್ ಮಾಡಿಕೊಂಡಿದ್ದ. ಶಂಕೆಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆತ ತಿಪ್ಪಗೊಂಡನ ಹಳ್ಳಿ ಸುತ್ತಮುತ್ತ ಸಂಚಾರ ನಡೆಸಿರುವುದು ಪತ್ತೆಯಾಗಿತ್ತು. ಅಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಶವ ಪತ್ತೆಯಾಗಿತ್ತು.
ನಂತರ ಕಲಾಸಿಪಾಳ್ಯದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಮಾಗಡಿಯ ಮುಸಲ್ಮಾನರೆಲ್ಲರೂ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಇಲ್ಲವೇ ಎನ್ ಕೌಂಟರ್ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)