ಬೆಂಗಳೂರಿಗರಿಗೆ ಒಂದು ಖುಷಿ ಸುದ್ದಿ, ಸೆಪ್ಟೆಂಬರ್‌ನಲ್ಲಿ ನೂತನ ಬೌರಿಂಗ್ ಆಸ್ಪತ್ರೆ ಕಾಮಗಾರಿ ಶುರು, ಚರಕ ಆಸ್ಪತ್ರೆ ಲೋಕಾರ್ಪಣೆ
ಬೆಂಗಳೂರಿಗರಿಗೆ ಒಂದು ಖುಷಿ ಸುದ್ದಿ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ ನೂತನ ಬೌರಿಂಗ್ ಆಸ್ಪತ್ರೆ ಕಾಮಗಾರಿ ಶುರು, ಚರಕ ಆಸ್ಪತ್ರೆ ಲೋಕಾರ್ಪಣೆ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನ ಸಾಮಾನ್ಯರಿಗೊಂದು ಖುಷಿ ಸುದ್ದಿ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವ ಸದುದ್ದೇಶದಿಂದ ಶಿವಾಜಿ ನಗರದಲ್ಲಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾ ಬೌರಿಂಗ್ ಆಸ್ಪತ್ರೆಯ ಕಾಮಗಾರಿಗೆ ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಲಿದೆ.
ಬೆಂಗಳೂರಿನ ಹಳೆಯ ಬೌರಿಂಗ್ ಆಸ್ಪತ್ರೆಯನ್ನು ನೆಲಸಮಗೊಳಿಸಿದ ನಂತರ ನೂತನ ಹತ್ತು ಅಂತಸ್ತಿನ 500 ಹಾಸಿಗೆಗಳ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸೋಮವಾರ (ಆಗಸ್ಟ್ 5) ಹೇಳಿದರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಸೋಮವಾರ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಡೆಂಗ್ಯೂ ವಾರ್ಡ್‌ಗೆ ಭೇಟಿ ನೀಡಿದ ಅವರು ಅಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆಯೇ? ಬೆಳಗಿನ ಉಪಹಾರ, ಮಧ್ಯಾಹ್ನಾದ ಬೋಜನ ಸಮಯಕ್ಕೆ ಸರಿಯಾಗಿ ನೀಡುತ್ತಿದ್ದಾರೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.
ಇನ್ನೊಂದು ತಿಂಗಳಲ್ಲಿ ಚರಕ ಆಸ್ಪತ್ರೆ ಲೋಕಾರ್ಪಣೆ
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನಿಂದ ಬೆಂಗಳೂರು ಶಿವಾಜಿನಗರದ ಚರಕ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದ ಸಚಿವ ಪಾಟೀಲ್ ಮಧ್ಯಮ ವರ್ಗದ ಜನರಿಗೆ ಅನುಕೂಲ ಅಗುವಂತೆ ಚರಕ ಆಸ್ಪತ್ರೆ ರೆಡಿಯಾಗ್ತಿದೆ. ಕೆಲವೇ ದಿನದಲ್ಲಿ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.
“ಈ ಕಟ್ಟಡ ಬಿಬಿಎಂಪಿ ಮಾಡಿದೆ, ಇನ್‌ಫ್ರಾಸ್ಟ್ರಕ್ಚರ್ ಕೊಟ್ಟಿದ್ದು ಇನ್ಫೋಸಿಸ್. ಲೋಕಾರ್ಪಣೆ ಮಾಡೋದಕ್ಕೆ ಸರ್ಕಾರದಿಂದ ಏನೇನು ಬೇಕು ಅದನ್ನು ಮಾಡಿಕೊಳ್ಳಲಾಗಿದೆ. ಕಾರ್ಡಿಯಾಕ್, ನ್ಯೂರೋ, ನೆಫ್ರಾಲಜಿ ಸೇರಿದಂತೆ ಎಲ್ಲಾ ಚಿಕಿತ್ಸೆ ಚರಕ ಆಸ್ಪತ್ರೆಯಲ್ಲಿ ನೀಡಲಾಗುತ್ತೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಸಿಗಲಿದೆ” ಎಂದು ಸಚಿವ ಪಾಟೀಲ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಹಿರಿಯ ಅಧಿಕಾರಿಗಳು ಡಾ.ಪಾಟೀಲ್ ಜೊತೆಗಿದ್ದರು
ಸರ್ಕಾರ ಅಸ್ಥಿರಗೊಳಿಸುವ ಉದ್ದೇಶ ಈಡೇರಲ್ಲ; ಸಚಿವ ಶರಣ್ ಪ್ರಕಾಶ್ ಪಾಟೀಲ್
ಬಹುಮತ ಹೊಂದಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ-ಜೆಡಿಎಸ್ ನಾಯಕರ ಉದ್ದೇಶ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ದೋಸ್ತಿ ಪಕ್ಷಗಳ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸೋಮವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಬೌರಿಂಗ್ ಹಾಗೂ ಚರಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳ ಜನಾದೇಶ ತಮ್ಮ ಪಾಲಿಗೆ ಇದೆ. ಈಗ ನಮ್ಮ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾಡುತ್ತಿದ್ದು, ಅದು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ದಲ್ಲಿ ಹಗರಣ ನಡೆದಿದೆ ಎಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಮುಡಾದಲ್ಲಿ ಹಗರಣ ಏನಾಗಿದೆ?. ಈ ಹಗರಣ ಮಾಡಿದವರು ಯಾರು? ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣವಲ್ಲವೇ? ಎಂದು ತಿರುಗೇಟು ನೀಡಿದರು.
ರಾಜ್ಯದ ಜನತೆ ಬಿಜೆಪಿ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಬಿಜೆಪಿ ಸ್ಥಿತಿ ನೀರಿನಿಂದ ತಗೆದ ಮೀನಿನಂತಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ನಾಟಕ ಮಾಡುತ್ತಿದ್ದಾರೆ. ಇದನ್ನೆಲ್ಲ ನಂಬಲು ಕನ್ನಡಿಗರು ಮೂರ್ಖರಲ್ಲ. ಮುಂಬರುವ ಯಾವುದೇ ಚುನಾವಣೆಗಳಲ್ಲಿ ಈ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಾಟೀಲ್ ಹೇಳಿದರು.