ರಾತ್ರಿ ವೇಳೆ ಹೆಚ್ಚಾಗ್ತಿದೆ ಲೈಂಗಿಕ ದೌರ್ಜನ್ಯ ಕೇಸ್; ಬೆಂಗಳೂರು ಪೊಲೀಸರಿಂದ ಖಡಕ್ ನಿರ್ಧಾರ, 16 ಹೊಸ ನಿಯಮಗಳು ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  ರಾತ್ರಿ ವೇಳೆ ಹೆಚ್ಚಾಗ್ತಿದೆ ಲೈಂಗಿಕ ದೌರ್ಜನ್ಯ ಕೇಸ್; ಬೆಂಗಳೂರು ಪೊಲೀಸರಿಂದ ಖಡಕ್ ನಿರ್ಧಾರ, 16 ಹೊಸ ನಿಯಮಗಳು ಜಾರಿ

ರಾತ್ರಿ ವೇಳೆ ಹೆಚ್ಚಾಗ್ತಿದೆ ಲೈಂಗಿಕ ದೌರ್ಜನ್ಯ ಕೇಸ್; ಬೆಂಗಳೂರು ಪೊಲೀಸರಿಂದ ಖಡಕ್ ನಿರ್ಧಾರ, 16 ಹೊಸ ನಿಯಮಗಳು ಜಾರಿ

ಬೆಂಗಳೂರಿನಲ್ಲಿ ರಾತ್ರಿ ವೇಳೆ ಮಹಿಳೆಯರು ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಅಲ್ಲದೇ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಅಪಘಾತದ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಈ ಎಲ್ಲದರ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಪೊಲೀಸ್‌ ಇಲಾಖೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. (ವರದಿ: ಎಚ್‌. ಮಾರುತಿ)

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ರಾತ್ರಿ ವೇಳೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯವಾಗಿ

ನಿಯೋಜಿಸುವಂತೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಆದೇಶ ಹೊರಡಿಸಿದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಸಂಚಾರ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ಪ್ರತಿ ದಿನ ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಎಚ್.ಸಿ./ಪಿ.ಸಿ. ಸಿಬ್ಬಂದಿಗಳನ್ನು ಕಡ್ಡಾಯವಾಗಿ ನಿಯೋಜಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸಂಚಾರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಾರಾಂತ್ಯದ ಗುರುವಾರದಿಂದ ಭಾನುವಾರದವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವಾಹನ ಸವಾರರು/ಚಾಲಕರ ವಿರುದ್ಧ ಪ್ರತಿ ವಾರ ಠಾಣೆಯ ಎಲ್ಲಾ ಪಿ.ಎಸ್.ಐ ರವರು ಕಡ್ಡಾಯವಾಗಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಠಾಣಾ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರುವ ಜಂಕ್ಷನ್‌ಗಳಲ್ಲಿ ಮಾತ್ರ ಪಕರಣಗಳನ್ನು ದಾಖಲಿಸಬೇಕು ಹಾಗೂ ಆ ಸಮಯದಲ್ಲಿ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ಸೂಚನೆಗಳು

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ಅನಿವಾರ್ಯವಾಗಿದ್ದು ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅಪಘಾತಗಳನ್ನು ತಡೆಯಲು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸದಾಗಿ ಮತ್ತಷ್ಟು ಸೂಚನೆಗಳನ್ನು ನೀಡಲಾಗಿದೆ.

1. ರಾತ್ರಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿ, ಮೇಲಾಧಿಕಾರಿಗಳು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

2. ಸಂಬಂಧಪಟ್ಟ ಠಾಣಾಧಿಕಾರಿಯವರು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕಡ್ಡಾಯವಾಗಿ ಎರಡು ಬೈಕ್‌ಗಳು ಲಭ್ಯವಿರಬೇಕು.

3. ಮಹಿಳೆಯರು ಇದ್ದ ವಾಹನಗಳ ಅಪಘಾತದ ಕುರಿತು ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಿ ಮಹಿಳಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಬೇಕು.

4. ರಾತ್ರಿ ವೇಳೆ ಅಪಘಾತವಾದಾಗ ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರಿಗೆ ತುರ್ತಾಗಿ ಸ್ಪಂದಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಬೇಕು ಮತ್ತು ಮನೆಗೆ ಕಳುಹಿಸಿಕೊಡಲು ಕ್ರಮವಹಿಸಬೇಕು.

5. ರಾತ್ರಿ ವೇಳೆ ಗಣ್ಯ ವ್ಯಕ್ತಿಗಳ ಸಂಚಾರವಿದ್ದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

6. ರಾತ್ರಿ ವೇಳೆ ಅಂಬ್ಯುಲೆನ್ಸ್ / ಆಗ್ನಿಶಾಮಕ ದಳ ವಾಹನಗಳ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು.

7. ರಾತ್ರಿ ವೇಳೆ ಹಾಗೂ ಬೆಳಗಿನ ಜಾವದಲ್ಲಿ ವ್ಹಿಲಿಂಗ್ ಮಾಡುವ ಸ್ಥಳಗಳನ್ನು ಗುರುತಿಸಿ ನಿಗಾವಹಿಸಬೇಕು.

8. ರಾತ್ರಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಠಾಣಾ ಸರಹದ್ದಿನಲ್ಲಿರುವ ಸಿಗ್ನಲ್ ಲೈಟ್ಸ್‌, ಪೆಲಿಕಾನ್ ಸಿಗ್ನಲ್‌ಗಳು, ಸಿಸಿಟಿವಿ ಕ್ಯಾಮರಾಗಳು ಹಾಗೂ ಸರ್ಕಾರಿ ಸ್ವತ್ತುಗಳ ಬಗ್ಗೆ ನಿಗಾವಹಿಸಬೇಕು.

9. ರಾತ್ರಿ ತೆರೆದಿರುವ ಹೋಟೆಲ್, ಬಾರ್, ರೆಸ್ಟೋರೆಂಟ್ ಮತ್ತಿತರ ಮನರಂಜನಾ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ವಹಿಸಬೇಕು.

10. ರಾತ್ರಿ ವೇಳೆ ಪ್ರಮುಖ ಜಂಕ್ಷನ್‌ಗಳಲ್ಲಿ ಮುಖ್ಯವಾಗಿ ರಿಪ್ಲೆ ಸ್ಟೀವ್ ಜಾಕೇಟ್‌ಗಳನ್ನು

ಧರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು.

11. ರಾತ್ರಿ ವೇಳೆ ಯಾವುದಾದರೂ ಕಾರ್ಯಕ್ರಮಗಳು ಇದ್ದಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ನಿಗಾವಹಿಸಬೇಕು.

12. ರಾತ್ರಿ ವೇಳೆ ಮಹಿಳೆಯರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ವಿಳಂಬ ಮಾಡದೇ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ರವಾನಿಸಿ, ಸೂಕ್ತ ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿಯನ್ನು ನೀಡಬೇಕು.

13. ರಿಂಗ್ ರಸ್ತೆಗಳಲ್ಲಿರುವ ಸಂಚಾರ ಪೊಲೀಸರು ಪೀಕ್ ಅವರ್ಸ್ ಹೊರತುಪಡಿಸಿ ಉಳಿದ ಸಮಯದಲ್ಲಿ ಭಾರಿ ವಾಹನಗಳು ಸಂಚರಿಸುವಂತೆ ಮತ್ತು ವಾಹನಗಳು ಕೆಟ್ಟು ನಿಂತಲ್ಲಿ ಕ್ರೇನ್‌ ಅಥವಾ ಟೋಯಿಂಗ್ ವಾಹನಗಳ ಬಗ್ಗೆ ಮಾಹಿತಿಯನ್ನು ಇಟ್ಟುಕೊಳ್ಳಬೇಕು.

14. ರಾತ್ರಿ ವೇಳೆ ಅಪಘಾತವಾದಗ ಅದಷ್ಟೂ ಬೇಗ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಬೇಕು ಮತ್ತು ಆರೋಪಿ ಪತ್ತೆಯ ಬಗ್ಗೆಯೂ ನಿಗಾವಹಿಸಬೇಕು

15. ಮಳೆಗಾಲದಲ್ಲಿ ಹೆಚ್ಚಾಗಿ ಅಪಘಾತವಾಗುವ ಸ್ಥಳಗಳು, ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಯ ಜೊತೆಗೆ ಸಮನ್ವಯ ಸಾಧಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು.

16. ಮರಗಳು ಬಿದ್ದ ಸಂರ್ದಭದಲ್ಲಿ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಬಿದ್ದ ಮರಗಳನ್ನು ತೆರವುಗೊಳಿಸಬೇಕು.

 

Whats_app_banner