ಕನ್ನಡ ಸುದ್ದಿ  /  ಕರ್ನಾಟಕ  /  Hebbal Flyover: ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್‌; ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ, ಮೊದಲ ದಿನ ಸುಗಮ ಸಂಚಾರ

Hebbal Flyover: ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್‌; ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ, ಮೊದಲ ದಿನ ಸುಗಮ ಸಂಚಾರ

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್ ಅಳವಡಿಸಲಾಗುತ್ತಿದ್ದು, ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಪ್ರಯತ್ನದಲ್ಲಿ ಮೊದಲ ದಿನ ಯಾವುದೇ ಟ್ರಾಫಿಕ್ ಸಮಸ್ಯೆಯಾಗಿಲ್ಲ. (ವರದಿ: ಎಚ್ ಮಾರುತಿ)

ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ (ಫೋಟೊ-ತ್ರಿನೇತ್ರಾಫೋಟೊಗ್ರಫಿ)
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ (ಫೋಟೊ-ತ್ರಿನೇತ್ರಾಫೋಟೊಗ್ರಫಿ)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದಂತೆ ಸಂಚಾರದ ಸಮಸ್ಯೆಯು (Bangalore Traffic Problem) ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರಗಳು (Karnataka Govt) ಹೊಸ ಹೊಸ ಯೋಜನೆಗಳ ಮೂಲಕ ಸಕಲ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೆಬ್ಬಾಳ ಮೇಲ್ಸೇತುವೆಯ (Hebbal Flyover) ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈ ಮಾರ್ಗದಲ್ಲಿ ಏಪ್ರಿಲ್ 17 ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಿದೆ. ಆದರೆ ಮೊದಲ ದಿನವಾದ ಗುರುವಾರ (ಏಪ್ರಿಲ್ 18) ಅಂತಹ ಸಂಚಾರ ದಟ್ಟಣೆ ಉಂಟಾಗಲಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೇಲ್ಸೇತುವೆ ಕೆಳಗೆ ಕೊಡಿಗೆಹಳ್ಳಿ ಕಡೆ ಸಾಗುವ ವಾಹನಗಳು ಒಂದಕ್ಕೊಂದು ಅಂಟಿಕೊಂಡಿದ್ದರೂ ಅಂತಹ ಗಂಭೀರ ಸಮಸ್ಯೆ ಉಂಟಾಗಲಿಲ್ಲ. ಈ ಭಾಗದಲ್ಲಿ ಬೇಥಲ್ ಎ ಜಿ ಚರ್ಚ್ ಎದುರು ಕೆಲ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ಮಾತ್ರ ಅನುಕೂಲ ಕಲ್ಪಿಸಲಾಗಿತ್ತು. ಈ ರಸ್ತೆಯಲ್ಲಿ ವಾಹನ ಸಂಚಾರ ನಿಧಾನವಾಗಿ ಸಾಗುತ್ತಿದ್ದರೂ ವಾಹನ ಸವಾರರಿಗೆ ಸಮಸ್ಯೆ ಉಂಟಾಗಲಿಲ್ಲ. ಈ ರಸ್ತೆ ಬಂದ್ ಮಾಡುವ ಬಗ್ಗೆ ಸಾಕಷ್ಟು ಮುಂಚಿತವಾಗಿ ಪ್ರಚಾರ ಮಾಡಲಾಗಿತ್ತು. ವಾಹನ ಸವಾರರಿಗೆ ಅರಿವು ಮೂಡಿದ್ದ ಕಾರಣ ತೊಂದರೆ ಎದುರಾಗಲಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಇನ್ನೂ ಮೂರು ನಾಲ್ಕು ದಿನ ಕಳೆದ ನಂತರ ಸ್ಪಷ್ಟ ಚಿತ್ರಣ ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಸಂಜೆ ಕಚೇರಿ ಸಮಯ ಮುಗಿದ ನಂತರ ಸ್ವಲ್ಪ ಮಟ್ಟಿಗೆ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ರಸ್ತೆ ಬಂದ್ ಏಕೆ ಮತ್ತು ಹೇಗೆ ಸಾಗಬೇಕು?

ಹೆಬ್ಬಾಳ ಮತ್ತು ಕೆ.ಆರ್ ಪುರ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಆದ್ದರಿಂದ, ಕೆ.ಆರ್ ಪುರ ಲೂಪ್‌ ಸೇತುವೆ ಮೇಲೆ ವಾಹನ ಸಂಚಾರವನ್ನು ಸುಮಾರು ಆರು ತಿಂಗಳ ನಿಷೇಧಿಸಲಾಗಿದೆ. ಕೆ.ಆರ್.ಪುರ, ನಾಗಾವರ ಕಡೆಯಿಂದ ಆಗಮಿಸಿ ಮೇಖ್ರಿ ವೃತ್ತದ ಕಡೆಗೆ ಸಾಗುವ ಅಪ್‌ ರ್‍ಯಾಂಪ್‌ ಮೇಲೆ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಹೊರವರ್ತುಲ ರಸ್ತೆಯ ನಾಗವಾರ ಕಡೆಯಿಂದ ಮೇಖ್ರಿ ವೃತ್ತದ ಮೂಲಕ ಬರುತ್ತಿದ್ದ ವಾಹನಗಳು, ಹೆಬ್ಬಾಳ ವೃತ್ತದ ಮೇಲ್ಸೇತುವೆ ಕೆಳಗಿನಿಂದ ಬಲಕ್ಕೆ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್‌ ಬಳಿ ಯೂಟರ್ನ್ ಪಡೆದು ಸರ್ವೀಸ್‌ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆ ರ್‍ಯಾಂಪ್‌ ಮೂಲಕ ಬೆಂಗಳೂರನ್ನು ಪ್ರವೇಶಿಸಬಹುದು. ಕೆ.ಆರ್.ಪುರ ಮತ್ತು ನಾಗಾವಾರ ಕಡೆಯಿಂದ ನಗರದ ಕಡೆಗೆ ಸಾಗುವ ವಾಹನಗಳು, ಐಒಸಿ–ಮುಕುಂದ ಥಿಯೇಟರ್‌ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗಾವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರವನ್ನು ಪ್ರವೇಶಿಸಬಹುದು. ಹೆಗಡೆನಗರ- ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರದತ್ತ ಸಾಗಬಹುದಾಗಿದೆ.

ಕೆ.ಆರ್ ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಕೆಳಗಡೆಯಿಂದ ನೇರವಾಗಿ ಬಿಇಎಲ್ ವೃತ್ತವನ್ನು ತಲುಪಿ ಎಡಕ್ಕೆ ತಿರುವು ಪಡೆದು ಸದಾಶಿವನಗರ ಜಂಕ್ಷನ್‌ ನಲ್ಲಿ ಬಲತಿರುವು ಪಡೆದು ಐಐಎಸ್ ಸಿ ಮೂಲಕ ಚಲಿಸಬಹುದು. ಕೆ.ಆರ್‌. ಪುರ, ಹೆಣ್ಣೂರು, ಎಚ್‌ಆರ್‌ಬಿಆರ್‌ ಲೇಔಟ್, ಕೆ.ಜಿ. ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವ ವಾಹನಗಳು ಹೆಣ್ಣೂರು–ಬಾಗಲೂರು ರಸ್ತೆಯನ್ನು ಬಳಸಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಬಹುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.(ವರದಿ: ಎಚ್ ಮಾರುತಿ)

IPL_Entry_Point