ಲೋಕಸಭಾ ಚುನಾವಣೆ; ವೈದ್ಯರು, ನರ್ಸ್‌, ಆರೋಗ್ಯ ಸಿಬ್ಬಂದಿಗಿಲ್ಲ ಚುನಾವಣಾ ಕರ್ತವ್ಯ, ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ; ವೈದ್ಯರು, ನರ್ಸ್‌, ಆರೋಗ್ಯ ಸಿಬ್ಬಂದಿಗಿಲ್ಲ ಚುನಾವಣಾ ಕರ್ತವ್ಯ, ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಲೋಕಸಭಾ ಚುನಾವಣೆ; ವೈದ್ಯರು, ನರ್ಸ್‌, ಆರೋಗ್ಯ ಸಿಬ್ಬಂದಿಗಿಲ್ಲ ಚುನಾವಣಾ ಕರ್ತವ್ಯ, ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ವೈದ್ಯರು, ನರ್ಸ್‌, ಆರೋಗ್ಯ ಸಿಬ್ಬಂದಿಗಿಲ್ಲ ಚುನಾವಣಾ ಕರ್ತವ್ಯ ಎಂಬುದನ್ನು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನೆನಪಿಸಿಕೊಟ್ಟು, ನಿರ್ದೇಶನ ನೀಡಿದೆ. ಯಶವಂತಪುರದ ಇಎಸ್‌ಐ ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಈ ನಿರ್ದೇಶನ ನೀಡಿದೆ. (ವರದಿ -ಎಚ್. ಮಾರುತಿ, ಬೆಂಗಳೂರು)

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Election in Karnataka) ಪ್ರಕ್ರಿಯೆಯ ಮೊದಲ ಹಂತ ಪ್ರಗತಿಯಲ್ಲಿದೆ. ಈ ಹಂತದಲ್ಲಿ ವೈದ್ಯರು ಮತ್ತು ನರ್ಸ್‌ಗಳಿಗೆ ಖುಷಿ ಕೊಡುವ ಸುದ್ದಿಯೊಂದು ಬಂದಿದೆ. ವೈದ್ಯರು ಮತ್ತು ನರ್ಸ್‌ಗಳು ಜೀವ ಉಳಿಸುವ ಕೆಲಸ ಮಾಡುತ್ತಾರೆ. ಇವರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿದರೆ ಆರೋಗ್ಯ ಸೇವೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ತುರ್ತು ಸಂದರ್ಭಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳು ಇಲ್ಲದೇ ಹೋದಲ್ಲಿ ರೋಗಿಗಳಿಗೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ.

ವೈದ್ಯರು, ನರ್ಸ್‌ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ವೈದ್ಯರು ಮತ್ತು ನರ್ಸ್‌ಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದ್ದು ಇದು ಕಾನೂನು ಬಾಹಿರ ಎಂದು ಬೆಂಗಳೂರಿನ ಯಶವಂತಪುರದ ಇಎಸ್‌ಐ ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್‌ ಮತ್ತಿತರರು ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಚುನಾವಣಾ ಕರ್ತವ್ಯದಿಂದ ವೈದ್ಯರು ಮತ್ತು ನರ್ಸ್‌ಗಳಿಗೆ ವಿನಾಯಿತಿ ನೀಡುವಂತೆ ಆದೇಶಿಸಿದೆ.

ವೈದ್ಯಕೀಯ ಸಿಬ್ಬಂದಿಗೆ ಚುನಾವಣಾ ಕರ್ತವ್ಯ; ಹೈಕೋರ್ಟ್‌ ಹೇಳಿದ್ದೇನು

ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್‌ ಅವರು ವಾದ ಮಂಡಿಸುತ್ತಾ, ವೈದ್ಯರು, ನರ್ಸ್‌ ಗಳು, ಮತ್ತು ಮತ್ತಿತರ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಫಾರ್ಮಸಿ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ‌ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ. ಇದು ಕಾನೂನು ಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವೈದ್ಯರು, ನರ್ಸ್‌ಗಳ ಪರವಾಗಿರುವ ಈ ವಾದವನ್ನು ಒಪ್ಪಿಕೊಂಡ ನ್ಯಾಯಪೀಠವು ವೈದ್ಯರು, ನರ್ಸ್‌ಗಳು ಮತ್ತು ಎಎನ್‌ಎಂಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಚುನಾವಣಾ ಆಯೋಗವೇ ಆದೇಶ ಹೊರಡಿಸಿದೆ. ಆದ್ದರಿಂದ ಅವರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಅರ್ಜಿ ಸಲ್ಲಿಸಿದ್ದು ಯಾರು

ಬೆಂಗಳೂರಿನ ಯಶವಂತಪುರದ ಇಎಸ್‌ಐ ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್‌ ಮತ್ತಿತರರು ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿರುವಂಥದ್ದು. ಕರ್ನಾಟಕದಲ್ಲಿ ಈ ಹಿಂದೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ನಿಯಮ ಮೀರಿ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.

ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಕೈಪಿಡಿಗೆ ವಿರುದ್ಧವಾಗಿ ಬಿಬಿಎಂಪಿ ವೈದ್ಯಕೀಯ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಇದು ಸರಿಯಲ್ಲ. ಇದರಿಂದಾಗಿ ಆರೋಗ್ಯ ಕ್ಷೇತ್ರದ ತುರ್ತುಗಳಿಗೆ ಸ್ಪಂದಿಸುವವರ ಸಂಖ್ಯೆ ಕಡಿಮೆಯಾಗುವ ಆತಂಕ ಇದೆ. ಚುನಾವಣೆ ಎಂಬ ಕಾರಣ ಪೂರ್ಣಗಮನವನ್ನು ಅತ್ತ ಕೇಂದ್ರೀಕರಿಸಿದರೆ, ಆರೋಗ್ಯ ಕ್ಷೇತ್ರದ ತುರ್ತುಗಳನ್ನು ಎದುರಿಸುವುದಕ್ಕೆ ಸೂಕ್ತ ವ್ಯವಸ್ಥೆ ಇರಬೇಕು. ಅದಿಲ್ಲದೇ ಹೋದರೆ ಸಮಸ್ಯೆ ಅದೀತು ಎಂದು ವಾದ ಮಂಡಿಸಲಾಗಿತ್ತು.

ಈ ಪ್ರಕರಣದಲ್ಲಿ ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮು‌ಂದೂಡಿದೆ.

(ವರದಿ -ಎಚ್. ಮಾರುತಿ, ಬೆಂಗಳೂರು)

Whats_app_banner