ಬೆಂಗಳೂರು ಜಾಲಹಳ್ಳಿ ಡಿವಿಷನ್‌ನಲ್ಲಿ 6000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟು, ಮನೆಗಳಿಗೆ ವಿದ್ಯುತ್ ಇಲ್ಲ, ರಾತ್ರಿ ನಡೆದ ಅವಾಂತರ ಇದಕ್ಕೆ ಕಾರಣ
No Power Supply; ಬೆಂಗಳೂರು ಜಾಲಹಳ್ಳಿ ಡಿವಿಷನ್‌ನಲ್ಲಿ 6000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟು, ಮನೆಗಳಿಗೆ ವಿದ್ಯುತ್ ಇಲ್ಲ. ಅದಕ್ಕೆ ಕಾರಣವಾಗಿರುವುದು ರಾತ್ರಿ ನಡೆದ ಅವಾಂತರ. 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಸಮಸ್ಯೆ ಉಂಟಾಯಿತು.
ಬೆಂಗಳೂರು: ಚಿಕ್ಕಬಾಣಾವರ ಹಾಗೂ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ತಡರಾತ್ರಿ 35 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಜಾಲಹಳ್ಳಿ ಡಿವಿಷನ್‌ನಲ್ಲಿ 6000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟು, ಮನೆಗಳಿಗೆ ವಿದ್ಯುತ್ ಇಲ್ಲ. ರಾತ್ರಿ ವೇಳೆ ನಡೆದ ಅವಾಂತರ ಇದಕ್ಕೆ ಕಾರಣ ಎಂಬುದು ಬಳಿಕ ಎಲ್ಲರಿಗೂ ಮನವರಿಕೆಯಾಗಿದೆ.
ತಡ ರಾತ್ರಿ, ಶನಿವಾರ ತಡರಾತ್ರಿ ದಿಢೀರ್ ಕರೆಂಟ್ ಹೋದಾಗ ಇದೇನಾಯಿತು ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಮುಂಜಾನೆ ರಸ್ತೆಗೆ ಬಂದು ನೋಡಿದಾಗ ಸಾಲು ಸಾಲು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿರುವುದು ಗಮನಸೆಳೆದಿದೆ.
ಚಿಕ್ಕಬಾಣಾವರ ಹಾಗೂ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಈ ಅವಾಂತರ ಹೇಗಾಯಿತು
ಚಿಕ್ಕಬಾಣಾವರ ಹಾಗೂ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಎಂ ಸ್ಯಾಂಡ್ ತುಂಬಿಕೊಂಡಿದ್ದ ಟಿಪ್ಪರ್ ಲಾರಿಯನ್ನು ಚಾಲಕ ನಿದ್ದೆಯ ಮೂಡ್‌ನಲ್ಲಿ ಚಾಲನೆ ಮಾಡಿದಾಗ ಈ ಅವಾಂತರ ನಡೆದಿದೆ. ಟಿಪ್ಪರ್ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರಬಹುದು. ಆದರಿಂದಲೇ ಈ ಅವಘಡ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಎಂ ಸ್ಯಾಂಡ್ ತುಂಬಿದ ಲಾರಿಯ ಹಿಂಬದಿಗೆ ಕರೆಂಟ್ ಕಂಬದಲ್ಲಿ ನೇತಾಡುತ್ತಿದ್ದ ತಂತಿ ಸಿಲುಕಿಕೊಂಡಿತ್ತು. ಅದರ ಅರಿವು ಇಲ್ಲದ ಚಾಲಕ ಟಿಪ್ಪರ್ ಮುನ್ನಡೆಸಿದಾಗ ಕರೆಂಟ್ ಕಂಬಗಳು ಒಂದೊಂದಾಗಿ ಧರೆಗುರುಳಿವೆ. ಎಲ್‌ಟಿ (ಲೋ ಟೆನ್ಶನ್) ವಿದ್ಯುತ್ ಕಂಬಗಳಾಗಿದ್ದು, ಇವು ನೆಲಕ್ಕೆ ಬಿದ್ದ ಕೂಡಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದ ಲಾರಿ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಅಪಘಾತ ಸಂಭವಿಸಿದಾಗ ಚಾಲಕ ನಿದ್ರೆಗೆ ಜಾರಿದ್ದ ಎಂದು ಚಿಕ್ಕಬಾಣಾವರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಭಾರೀ ವಾಹನವನ್ನು ಸ್ಥಳಕ್ಕೆ ತಂದು ರಸ್ತೆಗೆ ಸುರಿದಿದ್ದ ಮರಳನ್ನು ತೆರವುಗೊಳಿಸಲಾಯಿತು.
ಜಾಲಹಳ್ಳಿ ಡಿವಿಷನ್‌ನಲ್ಲಿ 6000ಕ್ಕೂ ಹೆಚ್ಚು ಅಂಗಡಿ ಮುಂಗಟ್ಟು, ಮನೆಗಳಿಗೆ ವಿದ್ಯುತ್ ಇಲ್ಲ
ಟಿಪ್ಪರ್ ಚಾಲಕನ ಈ ಅವಾಂತರದ ಕಾರಣ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಯ ಜಾಲಹಳ್ಳಿ ಡಿವಿಷನ್‌ನಲ್ಲಿ ಚಿಕ್ಕಬಾಣಾವರ ವೃತ್ತದ ಬಳಿ ಜಾಲಹಳ್ಳಿ ಮತ್ತು ಸುತ್ತಮುತ್ತಲಿನ ಸುಮಾರು 6,000 ಅಂಗಡಿ ಮುಂಗಟ್ಟು ಮನೆಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ಚಿಕ್ಕಬಾಣಾವರ, ಹೆಸರಘಟ್ಟ, ಸೋಲದೇವನಹಳ್ಳಿ ಭಾಗಗಳಲ್ಲಿ ವಿದ್ಯುತ್ ಸರಬರಾಜಿಗೆ ತೊಂದರೆಯಾಗಿದೆ. ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ 2.20ರ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕ ಟಿಪ್ಪರ್‌ನ ಟ್ರೇಲರ್ ಅನ್ನು ಮೇಲೆತ್ತಿದ್ದು, ಆಗ ಮೇಲಿನ ತಂತಿ ಅದರಲ್ಲಿ ಸಿಕ್ಕಿಹಾಕಿಕೊಂಡಿದೆ. ನಂತರ ಚಿಕ್ಕಬಾಣಾವರ ವೃತ್ತದಿಂದ ಸಂತೆ ಬೀದಿಗೆ (ಸುಮಾರು ಅರ್ಧ ಕಿಲೋಮೀಟರ್) 35 ಕಂಬಗಳನ್ನು ಎಳೆದುಕೊಂಡು ಹೋಗಿದ್ದು, ಆಟೋರಿಕ್ಷಾ ಚಾಲಕ ಎಚ್ಚರಿಸುವವರೆಗೂ ಆ ಚಾಲಕನಿಗೆ ತಿಳಿದಿರಲಿಲ್ಲ”ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದ್ದಾಗಿ ವರದಿ ವಿವರಿಸಿದೆ.
ಈ ಅವಾಂತರದಲ್ಲಿ 34 ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದ್ದು, ಹಂತ ಹಂತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ರಾತ್ರಿ 8 ಗಂಟೆ ಒಳಗೆ ವಿದ್ಯುತ್ ಪೂರೈಕೆ ಪುನಸ್ಥಾಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾಗಿ ದ ಹಿಂದೂ ವರದಿ ಮಾಡಿದೆ.
ಈ ಸಮಯದಲ್ಲಿ ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಗೆ ಹಲವಾರು ದೂರುಗಳು ಬಂದಿವೆ. ಸಂಜೆ 6 ಗಂಟೆಯವರೆಗೆ ಬಂದಿರುವ ಎಲ್ಲಾ ದೂರುಗಳ ಪೈಕಿ 100 ಮಾತ್ರ ಬಾಕಿ ಉಳಿದಿದೆ. ಎಲ್ಲ ದೂರುಗಳನ್ನು ಇತ್ಯರ್ಥಗೊಳಿಸಿ, ವಿದ್ಯುತ್ ಪೂರೈಕೆ ಮರುಸ್ಥಾಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ.