Bengaluru News: ನೀರು ಸಿಗ್ತಾ ಇಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಿತು ಬೆಂಗಳೂರಿನ ಪ್ರಸಿದ್ದ ಅಪಾರ್ಟ್‌ಮೆಂಟ್
ಬೆಂಗಳೂರು ನೀರಿನ ಸಮಸ್ಯೆ ಈಗ ನಿತ್ಯದ ಮಾತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ನೀರಿಗಾಗಿ ಟ್ಯಾಂಕರ್ ಆಶ್ರಯಸಿದ್ದವರೂ ಈಗ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ, ಒಂದು ನೀರು ಸಿಗ್ತಾ ಇಲ್ಲ ಎಂದು ಬೆಂಗಳೂರಿನ ಪ್ರಸಿದ್ಧ ಅಪಾರ್ಟ್‌ಮೆಂಟ್ ತನ್ನ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು ಗಮನಸೆಳೆದಿದೆ.
ಬೆಂಗಳೂರು ನಗರವು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಬತ್ತಿಹೋಗಿರುವ ಕೊಳವೆ ಬಾವಿಗಳು, ಜಲಾಶಯಗಳ ನಡುವೆ ನೀರಿಗಾಗಿ ಟ್ಯಾಂಕರ್‌ನತ್ತ ಮುಖ ಮಾಡಿದ್ದಾರೆ ಬೆಂಗಳೂರು ನಿವಾಸಿಗಳು. ಆದರೆ, ಟ್ಯಾಂಕರ್ ನೋಂದಣಿ ಕಾರ್ಯ, ಇನ್ನೊಂದೆಡೆ ಅಕ್ರಮ ನೀರಿನ ಟ್ಯಾಂಕರ್‌ಗಳ ವಶಪಡಿಸಿಕೊಳ್ಳುವಿಕೆ ಮುಂದುವರಿದ ಕಾರಣ ಬೆಂಗಳೂರು ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೇಕಾದಷ್ಟು ಟ್ಯಾಂಕರ್ ನೀರು ಲಭ್ಯವಾಗದ ಕಾರಣ ಅಪಾರ್ಟ್‌ಮೆಂಟ್ ಸಂಕೀರ್ಣಗಳು ಮತ್ತು ಗೇಟೆಡ್ ಸಮುದಾಯಗಳು ನೀರಿನ ಬಳಕೆಗೆ ನಿಯಮಗಳನ್ನು ವಿಧಿಸುತ್ತಿವೆ. ನಿರ್ಬಂಧಗಳನ್ನು ಹೇರುತ್ತಿವೆ ಎಂದು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪ್ರಸಿದ್ಧ ಅಪಾರ್ಟ್‌ಮೆಂಟ್ ಸಂಕೀರ್ಣ ಪ್ರಕಟಿಸಿದ ನೋಟಿಸ್ ಕೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. “ನಮ್ಮ ನೀರು ಸರಬರಾಜಿಗೆ ಸಂಬಂಧಿಸಿದ ನಿರ್ಣಾಯಕ ಸಂಕಷ್ಟಮಯ ಪರಿಸ್ಥಿತಿಯ ಬಗ್ಗೆ ನಿಮಗೆ ತಿಳಿಸಲು ವಿಷಾದಿಸುತ್ತೇವೆ. ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಆರ್‌ಟಿಒ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು ಎಲ್ಲ ನೀರಿನ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ಸುದ್ದಿ ನಮಗೆ ಬಂದಿದೆ. ಈ ಅಭೂತಪೂರ್ವ ಕ್ರಮದ ಪರಿಣಾಮ ನಮ್ಮ ನೀರು ಸರಬರಾಜು ವ್ಯವಸ್ಥೆಯ ಮೇಲಾಗಿದೆ. ನೀರಿನ ಸಂಪುಗಳನ್ನು ಖಾಲಿಯಾಗಿವೆ. ಅವುಗಳಲ್ಲಿ ನೀರು ಶೇಖರಣೆ ಮಾಡುವುದು ಸಾಧ್ಯವಾಗಿಲ್ಲ. ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಮಾತ್ರ ನೀರು ಇದ್ದು, ಗರಿಷ್ಠ ಒಂದು ಗಂಟೆ ಮಾತ್ರವೇ ನೀರು ಲಭ್ಯವಿರಲಿದೆ. ಇದಾದ ಬಳಿಕ ನೀರು ಲಭ್ಯ ಇರುವುದಿಲ್ಲ” ಎಂಬ ಅಂಶ ಆ ನೋಟಿಸ್‌ನಲ್ಲಿದೆ.
ಬೆಂಗಳೂರು ನೀರಿನ ಟ್ಯಾಂಕರ್ ನೋಂದಣಿಗೆ ನಾಳೆ ಕೊನೇ ದಿನ
ಏತನ್ಮಧ್ಯೆ, ಮಾರ್ಚ್ 7 ರೊಳಗೆ ರಾಜ್ಯದ ನೀರಿನ ಟ್ಯಾಂಕರ್ ಮಾಲೀಕರು ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ನೋಂದಣಿ ಮಾಡಿಸಿಕೊಳ್ಳುವಲ್ಲಿ ವಿಫಲವಾದರೆ ಸರ್ಕಾರವು ಅಂತಹ ಟ್ಯಾಂಕರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರದಲ್ಲಿ ಒಟ್ಟು 3,500 ನೀರಿನ ಟ್ಯಾಂಕರ್ ಗಳಿದ್ದು, ಈ ಪೈಕಿ ಶೇ. 10 ರಷ್ಟು ಅಂದರೆ 219 ಟ್ಯಾಂಕರ್ ಗಳು ಮಾತ್ರ ನೋಂದಣಿ ಮಾಡಿಕೊಂಡಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಗಡುವಿನೊಳಗೆ ನೋಂದಣಿ ಮಾಡದಿದ್ದರೆ ಸರ್ಕಾರ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ' ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
"ನೀರು ಯಾವುದೇ ವ್ಯಕ್ತಿಯ ಆಸ್ತಿಯಲ್ಲ, ಆದರೆ ಅದು ಸರ್ಕಾರಕ್ಕೆ ಸೇರಿದ ಸಂಪನ್ಮೂಲವಾಗಿದೆ. ನೀರಿನ ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಹಕ್ಕು ಸರ್ಕಾರಕ್ಕೆ ಇದೆ. ಅಂತರ್ಜಲ ಹೇರಳವಾಗಿರುವ ಪ್ರದೇಶಗಳಿಂದ ನೀರು ಪೂರೈಸಲು ಸಿದ್ಧರಾಗುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಜಲಮಂಡಳಿ ಈಗಾಗಲೇ 210 ಟ್ಯಾಂಕರ್ ಗಳನ್ನು ಬಳಸಿ ನೀರು ಪೂರೈಸುತ್ತಿದೆ. ನೀರು ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ' ಎಂದು ಅವರು ಹೇಳಿದರು.
ವೃಷಭಾವತಿ ಏತ ನೀರಾವರಿ ಯೋಜನೆ ಬಗ್ಗೆ ಆಶಾಭಾವ
ನೆಲಮಂಗಲದ ವೃಷಭಾವತಿ ಏತ ನೀರಾವರಿ ಯೋಜನೆಯಿಂದ ನಗರದ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಸಿ ವ್ಯಾಲಿ ಮತ್ತು ಎಂಎನ್ ವ್ಯಾಲಿಗೆ 3000 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಈಗ ವೃಷಭಾವತಿ ಯೋಜನೆಗೆ 2240 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ಜನರ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಇದು ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಇದು ಎಲ್ಲಾ ನಾಲ್ಕು ಜಿಲ್ಲೆಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಲಿದೆ. ಪರಿಣಾಮ ಜನರ ಆರ್ಥಿಕ ಶಕ್ತಿಯೂ ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು.
(ಎಎನ್‌ಐ ಮಾಹಿತಿಯೊಂದಿಗೆ)
(This copy first appeared in Hindustan Times Kannada website. To read more like this please logon to kannada.hindustantimes.com)