ಬಿಜೆಪಿಯಲ್ಲಿ ಬದಲಾಗಲಿದ್ದಾರೆಯೇ ವಿಧಾನಸಭೆ ಪ್ರತಿಪಕ್ಷದ ನಾಯಕರು ಮತ್ತು ಪಕ್ಷದ ಅಧ್ಯಕ್ಷರು, ವಿಶ್ಲೇಷಣೆ
ಬಿಜೆಪಿಯಲ್ಲಿ ಬದಲಾಗಲಿದ್ದಾರೆಯೇ ವಿಧಾನಸಭೆ ಪ್ರತಿಪಕ್ಷದ ನಾಯಕರು ಮತ್ತು ಪಕ್ಷದ ಅಧ್ಯಕ್ಷರು? ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ, ಸುನೀಲ್ ಕುಮಾರ್, ಅಶೋಕ್, ಯತ್ನಾಳ್… ಯಾರಿಗೆ ಯಾವ ಹುದ್ದೆ? (ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಒಕ್ಕಲಿಗ ಸಮುದಾಯವಿರುವ ಜಿಲ್ಲೆಗಳಲ್ಲಿ ಪ್ರಾಬಲ್ಯವಿರುವ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ನಡುವೆಯೂ ಕರ್ನಾಟಕ ಬಿಜೆಪಿ 28 ರಲ್ಲಿ 17 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. 2019ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಎರಡಂಕಿ ದಾಟಲಿಲ್ಲ ಎಂದು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರೂ ಒಳೊಳಗೆ ಆಂತರಿಕ ಬೇಗುದಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.
ನಾಯಕತ್ವಕ್ಕಾಗಿ ಪಕ್ಷದಲ್ಲಿ ಒಕ್ಕಲಿಗ ಮುಖಂಡರ ನಡುವೆ ಪೈಪೋಟಿ ಬಿರುಸಾಗಿಯೇ ನಡೆಯುತ್ತಿರುವುದು ರಹಸ್ಯವೇನಲ್ಲ. ಆದರೆ ಬಹಿರಂಗವಾಗಿಲ್ಲ ಅಷ್ಟೇ. ಒಂದು ಕಡೆ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಆಂತರಿಕ ಭಿನ್ನಮತವನ್ನು ಎದುರಿಸುತ್ತಿದ್ದಾರೆ. ಪಕ್ಷದಲ್ಲಿ ಯಡಿಯೂರಪ್ಪ ಕುಟುಂಬವನ್ನು ವಿರೊಧಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಅದರಲ್ಲೂ ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರವಂತೂ ಈ ಆಂತರಿಕ ಬೇಗುದಿ ಮತ್ತಷ್ಟು ಕೊತ ಕೊತ ಕುದಿಯತೊಡಗಿದೆ. ಎನ್‌ಡಿಎ ಸರಕಾರದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರೇ ಒಕ್ಕಲಿಗ ಮುಖಂಡ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಎದುರಿಸಲು ಪಕ್ಷದೊಳಗೆ ಒಕ್ಕಲಿಗ ನಾಯಕತ್ವವನ್ನು ಹುಟ್ಟು ಹಾಕಬೇಕಿತ್ತು. ಆದರೆ ಈಗ ಮಿತ್ರಪಕ್ಷದ ಮುಖಂಡರನ್ನೇ ಒಕ್ಕಲಿಗರ ನಾಯಕ ಎಂದು ಒಪ್ಪಿಕೊಂಡಂತಂತಾಗಿದೆ ಎಂದು ಕೆಲವು ಮುಖಂಡರು ಅಭಿಪ್ರಾಯಪಡುತ್ತಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ
ಭಾನುವಾರ ಇಂಧನ ಬೆಲೆ ಏರಿಕೆ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಕ್ಷದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಈ ನಡೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇಂಬು ನೀಡುತ್ತದೆ. ರಾಜ್ಯ ನಾಯಕರಾಗಿದ್ದರೂ ರವಿ ಚಿಕ್ಕಮಗಳೂರಿನಲ್ಲಿ ಪ್ರತ್ಯೇಕ ಪ್ತತಿಭಟನೆ ನಡೆಸಿದ್ದಾರೆ. ರಾಜ್ಯಮಟ್ಟದ ಪ್ರತಿಭಟನೆ ಎಂದು ಬಿಜೆಪಿ ಪ್ರಕಟಿಸಿದ್ದರೂ ಅವರು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಆಗಮಿಸಲೇ ಇಲ್ಲ.
ಪಕ್ಷದೊಳಗೆ ವಿಜಯೇಂದ್ರ ಮತ್ತು ಅಶೋಕ್ ಇಬ್ಬರನ್ನೂ ಬದಲಾಯಿಸಿ ಬೇರೆಯವರನ್ನು ನೇಮಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಇವರ ಕಾರ್ಯವೈಖರಿಗೆ ಅನೇಕ ಶಾಸಕರು ಮತ್ತು ಮುಖಂಡರು ಅತೃಪ್ತಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಹೊರಗೆ ಮಾತ್ರ ಪಕ್ಷದಲ್ಲಿ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಈ ಮುಖಂಡರು ಹೊರಗೆ ನಡೆದುಕೊಳ್ಳುತ್ತಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ಅಶೋಕ್ ಅವರ ಬದಲಾವಣೆಗೆ ಒತ್ತಡಗಳು ಕೇಳಿ ಬಂದಿದ್ದವು. ಆದರೆ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಕೇಂದ್ರ ವರಿಷ್ಠರಿಗೆ ಪುರುಸೊತ್ತು ಇರಲಿಲ್ಲ. ಈಗ ಚುನಾವಣೆ ಮುಗಿದು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿಯಾಗಿದೆ. ಸಂಪುಟ ರಚನೆಯೂ ಆಗಿದೆ. ಇದೀಗ ರಾಜ್ಯದ ಸಮಸ್ಯೆಯತ್ತ ಗಮನ ಹರಿಸತೊಡಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೇಲ್ಮನೆ ಮತ್ತು ಕೆಳಮನೆಯಲ್ಲಿ ನಾಯಕರನ್ನು ಬದಲಾಯಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮೇಲ್ಮನೆ ವಿಪಕ್ಷ ನಾಯಕ ಯಾರು?
ಮೇಲ್ಮನೆಯಲ್ಲಿ ವಿಪಕ್ಷ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದು ಅವರ ಸ್ಥಾನ ಖಾಲಿ ಉಳಿದಿದೆ. ಈ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಎಂದರೆ ಸಿ.ಟಿ.ರವಿ. ಅವರಿಗೆ ಅವಕಾಶ ನೀಡಿದರೆ ಕೆಳಮನೆಯಲ್ಲಿ ನಾಯಕರಾಗಿರುವ ಒಕ್ಕಲಿಗ ಸಮುದಾಯದ ಅಶೋಕ್ ಅವರನ್ನು ಬದಲಾಯಿಸಬೇಕಾಗುತ್ತದೆ. ಈ ಸ್ಥಾನದ ಮೇಲೆ ಹಿಂದುಳಿದ ವರ್ಗದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಕಣ್ಣಿಟ್ಟಿದ್ದಾರೆ. ಸಿ.ಟಿ. ರವಿ ಸುನೀಲ್ ಕುಮಾರ್ ಒಂದೇ ಜಿಲ್ಲೆಗೆ ಸೇರಿದವರಾಗುತ್ತಾರೆ.
ಇದು ಮತ್ತೊಂದು ರೀತಿಯ ಸಮಸ್ಯೆಗೆ ನಾಂದಿ ಹಾಡುತ್ತದೆ. ಉತ್ತರ ಕರ್ನಾಟಕದ ಶಾಸಕರು ಅಸಮಾಧಾನಗೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರೂ ವಿಪಕ್ಷ ನಾಯಕ ಅಥವಾ ಪಕ್ಷದ ಅಧ್ಯಕ್ಷರಾಗಲು ಸರ್ವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಪಕ್ಷದಲ್ಲಿ ಒಕ್ಕಲಿಗ ಮುಖಂಡರಾಗಲು ಅಶ್ವತ್ಥನಾರಾಯಣ ಅವರೂ ಪ್ರಯತ್ನ ಮುಂದುವರಸಿದ್ದು, ವಿಪಕ್ಷ ನಾಯಕ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಡಾ.ಸುಧಾಕರ್ ಅವರೂ ಒಕ್ಕಲಿಗ ನಾಯಕರಾಗಲು ಆಸೆ ಹೊಂದಿದ್ದರು. ಅವರ ಗೆಲುವಿಗೆ ಕುಮಾರಸ್ವಾಮಿ ಅವರ ಕೊಡುಗೆ ಇರುವುದರಿಂದ ಅವರು ಅಂತಹ ಪ್ರಯ್ನಗಳನ್ನು ಮಾಡುವ ಗೋಜಿಗೆ ಹೋಗಲಾರರು. ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡಲು ಹೋಗಿ ಮತ್ತೆ ಯಡಿಯೂರಪ್ಪ ಅವರ ಕೋಪಕ್ಕೆ ತುತ್ತಾಗುವ ಪ್ರಯತ್ನವನ್ನು ಮಾಡುವ ಗೋಜಿಗೆ ಹೈಕಮಾಂಡ್ ಹೋಗುವುದಿಲ್ಲ. ಹೆಚ್ಚೆಂದರೆ ವಿಧಾನಸಭೆ ವಿಪಕ್ಷ ನಾಯಕರನ್ನು ಬದಲಾಯಿಸಬಹುದು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.