ಬೆಂಗಳೂರು ಟೆಕ್‌ ಕಾರಿಡಾರ್‌ನಲ್ಲಿ ಚರ್ಚೆಗೀಡಾಯಿತು ಹದಗೆಟ್ಟ ಹೊರ ವರ್ತುಲ ರಸ್ತೆ ವಿಚಾರ; ಡಿಸಿಎಂ ಕೊಟ್ಟ 100 ದಿನಗಳ ಗಡುವು ಎಂದೋ ಮುಗಿದಿದೆ!-bengaluru news orrca sounds alarm on outer ring road bengaluru s tech corridor in dire state 100 day deadline lapsed uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟೆಕ್‌ ಕಾರಿಡಾರ್‌ನಲ್ಲಿ ಚರ್ಚೆಗೀಡಾಯಿತು ಹದಗೆಟ್ಟ ಹೊರ ವರ್ತುಲ ರಸ್ತೆ ವಿಚಾರ; ಡಿಸಿಎಂ ಕೊಟ್ಟ 100 ದಿನಗಳ ಗಡುವು ಎಂದೋ ಮುಗಿದಿದೆ!

ಬೆಂಗಳೂರು ಟೆಕ್‌ ಕಾರಿಡಾರ್‌ನಲ್ಲಿ ಚರ್ಚೆಗೀಡಾಯಿತು ಹದಗೆಟ್ಟ ಹೊರ ವರ್ತುಲ ರಸ್ತೆ ವಿಚಾರ; ಡಿಸಿಎಂ ಕೊಟ್ಟ 100 ದಿನಗಳ ಗಡುವು ಎಂದೋ ಮುಗಿದಿದೆ!

ಬೆಂಗಳೂರು ಟೆಕ್ ಕಾರಿಡಾರ್‌ನಲ್ಲಿ ಹೊರವರ್ತುಲ ರಸ್ತೆ ಹದಗೆಟ್ಟು ಹೋಗಿರುವ ವಿಚಾರ ತೀವ್ರ ಚರ್ಚೆಗೆ ಒಳಗಾಗಿದ್ದು, ತುರ್ತು ಸ್ಪಂದಿಸುವಂತೆ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ನಿನ್ನೆ (ಆಗಸ್ಟ್ 29) ಸ್ಥಳೀಯಾಡಳಿತ ಸಂಸ್ಥೆ, ಸರ್ಕಾರಕ್ಕೆ ಮನವಿ ಮಾಡಿದೆ.

ಬೆಂಗಳೂರು ಹೊರವರ್ತುಲ ರಸ್ತೆಯ ನೋಟ
ಬೆಂಗಳೂರು ಹೊರವರ್ತುಲ ರಸ್ತೆಯ ನೋಟ (BTP)

ಬೆಂಗಳೂರು: ಕೆಆರ್ ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಟೆಕ್ ಕಾರಿಡಾರ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಬೆಂಗಳೂರಿನ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು ಆಗಸ್ಟ್ 29 ರಂದು ಸರ್ಕಾರವನ್ನು ಒತ್ತಾಯಿಸಿದೆ.

ಬೆಂಗಳೂರಿನ ವಿವಿಧೆಡೆ ನಿನ್ನೆ (ಆಗಸ್ಟ್ 29) ಸುರಿದ ಭಾರಿ ಮಳೆಗೆ ಹೊರವರ್ತುಲ ರಸ್ತೆಯ ವಿವಿಧೆಡೆ ರಸ್ತೆ ಜಲಾವೃತವಾಗಿತ್ತು. ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದು ಗಮನಸೆಳೆದಿತ್ತು. ರಸ್ತೆ ಸೇರಿ ವಿವಿಧ ಮೂಲಸೌಕರ್ಯಗಳ ಕೊರತೆ ಹೊರವರ್ತುಲ ರಸ್ತೆಯಲ್ಲಿರುವ ಟೆಕ್ ಕಾರಿಡಾರನ್ನು ಪದೇಪದೆ ಬಾಧಿಸುತ್ತಿದ್ದು, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (Outer Ring Road Companies Association (ORRCA)) ಈ ವಿಚಾರವಾಗಿ ನಿನ್ನೆ ಸರ್ಕಾರದ ಗಮನಸೆಳದಿದೆ.

ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು ಕೆಆರ್‌ ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ 17 ಕಿ.ಮೀ. ಉದ್ದದ ಟೆಕ್‌ ಕಾರಿಡಾರ್‌ನ ಐಟಿ ಮತ್ತು ಇತರೆ ತಂತ್ರಾಂಶ ಅಭಿವೃದ್ಧಿ, ಸಂಶೋಧನಾ ಸಂಸ್ಥೆಗಳ ಒಕ್ಕೂಟವಾಗಿದೆ.

ಹದಗೆಟ್ಟು ಹೋಗಿರುವ ಹೊರವರ್ತುಲ ರಸ್ತೆ

ತಾಜಾ ಉದಾಹರಣೆ ನೀಡುವುದಾದರೆ, ಗುರುವಾರ (ಆಗಸ್ಟ್ 29) ಸಂಜೆ, ಸಿಲ್ಕ್ ಬೋರ್ಡ್ ಮತ್ತು ಕಾರ್ತಿಕ್ ನಗರ ನಡುವಿನ ಹೊರ ವರ್ತುಲ ರಸ್ತೆಯ ಅನೇಕಕಡೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದ್ದು ಗಮನಸೆಳೆಯಿತು. ಇದು ರಸ್ತೆಯ ಎರಡೂ ಬದಿಗಳಲ್ಲಿ ನಿಧಾನವಾಗಿ ಚಲಿಸುವ ಸಂಚಾರಕ್ಕೆ ಕಾರಣವಾಯಿತು. ಪಾಣತ್ತೂರು ಅಂಡರ್ ಪಾಸ್ ಕೂಡ ಜಲಾವೃತಗೊಂಡಿತ್ತು.

ಬಿಬಿಎಂಪಿ ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಬಿಎಂಆರ್‌ಸಿಎಲ್‌ ಸೇರಿ ಸರ್ಕಾರಿ ಸಂಸ್ಥೆಗಳಿಗೆ ಪತ್ರಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ, ಕಳಪೆ ರಸ್ತೆ, ಜಲಾವೃತ್ತ ಪ್ರದೇಶ, ಫುಟ್‌ಪಾತ್‌, ಸರ್ವೀಸ್ ರಸ್ತೆಗಳ ನವೀಕರಣದ ಅಗತ್ಯ, ಮೇಲ್ಸೇತುವೆ, ಮೈಕ್ರೋ ಸರ್ಫೇಸಿಂಗ್‌, ರಸ್ತೆ ಮರುಸ್ಥಾಪನೆ, ಮಳೆ ನೀರು ಚರಂಡಿ ಸರಿ ಮಾಡುವುದು ಸೇರಿ ಹಲವು ವಿಚಾರಗಳ ಬಗ್ಗೆ ತುರ್ತು ಗಮನಹರಿಸುವಂತೆ ಮನವಿ ಮಾಡಿದೆ.

ಒಆರ್‌ಆರ್‌ ಟೆಕ್‌ ಕಾರಿಡಾರ್‌ನ ಕಂಪನಿಗಳು, ಸಂಸ್ಥೆಗಳ ಸಂಕಟಗಳಿವು

ಒಆರ್‌ಆರ್ ಅಥವಾ ಹೊರವರ್ತುಲ ರಸ್ತೆಯ ಉದ್ದಕ್ಕೂ ಇರುವ ಕಂಪನಿಗಳು, ಉದ್ಯೋಗಿಗಳು ಮತ್ತು ಪ್ರಯಾಣಿಕರು ನಿತ್ಯ ಅನುಭವಿಸುವ ಸಂಕಟಗಳಿವು. ಕಳಪೆ ರಸ್ತೆ, ಸಾರ್ವಜನಿಕ ಸಾರಿಗೆ ಆಯ್ಕೆಗಳ ಕೊರತೆ, ಅಸಮರ್ಪಕ ಫುಟ್‌ಪಾತ್‌, ಜಲಾವೃತ ಸಮಸ್ಯೆ ಮತ್ತು ಇತರ ಮೂಲಸೌಕರ್ಯ ಕೊರತೆಗಳ ಕಾರಣ ಪ್ರತಿದಿನ ಹೆಣಗಾಡುತ್ತಿದ್ದಾರೆ. ಈ ಸಮಸ್ಯೆಗಳು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಂಪನಿಗಳು, ಬಿಲ್ಡರ್‌ಗಳು, ಸಂಘಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೂ ಚಿರಪರಿಚಿತ. ಆದರೆ ಪರಿಹಾರ ಕನಸಾಗಿ ಉಳಿದುಕೊಂಡಿದೆ. ಇತ್ತೀಚೆಗೆ, ಸಂಘದ ಸದಸ್ಯರು ಮತ್ತು ಕಂಪನಿಯ ಪ್ರತಿನಿಧಿಗಳು ಈ ಕುರಿತಾದ ಕಾಳಜಿಯನ್ನು ಸರ್ಕಾರದ ಪ್ರತಿನಿ‍ಧಿಗಳೊಂದಿಗೆ ಹೆಚ್ಚೆಚ್ಚು ವ್ಯಕ್ತಪಡಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ ಎಂಬುದು ಅವರ ಅಳಲು.

ನಿನ್ನೆ ಈ ಕುರಿತು ಟ್ವೀಟ್ ಮಾಡಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು, ಹೊರ ವರ್ತುಲ ರಸ್ತೆ ಮೂಲಸೌಕರ್ಯ: ಸಹಕಾರಿ ಪ್ರಯತ್ನ ಅಗತ್ಯ ಎಂದು ಹೇಳಿದೆ.

ಅಲ್ಲದೆ, ಹೊರ ವರ್ತುಲ ರಸ್ತೆಗೆ ತುರ್ತು ಗಮನ ಅಗತ್ಯವಾಗಿದ್ದು, ರಸ್ತೆ ರಿಪೇರಿ, ಗುಂಡಿ ತುಂಬುವುದು, ನೀರು ನಿಲ್ಲುವ ಪರಿಹಾರಗಳು, ಫುಟ್‌ಪಾತ್ ಮತ್ತು ಸರ್ವಿಸ್ ರಸ್ತೆ ನಿರ್ವಹಣೆ, ಫ್ಲೈಓವರ್ ಮೈಕ್ರೋ-ಸರ್ಫೇಸಿಂಗ್ ಮತ್ತು ಮಳೆನೀರು ಡ್ರೈನ್ ತೆರವು ಸೇರಿದಂತೆ ಮೂಲಸೌಕರ್ಯ ನಿರ್ವಹಣೆ ಮತ್ತು ಉನ್ನತೀಕರಣ ಕಾರ್ಯಗಳಿಗೆ ಆದ್ಯತೆ ನೀಡುವಂತೆ ನಾವು ಎಲ್ಲ ಸಂಬಂಧಿತ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಉದ್ಯೋಗಿಗಳು, ಸಾರ್ವಜನಿಕರು ಮತ್ತು ವ್ಯವಹಾರಗಳಿಗೆ ಅನುಕೂಲವಾಗುವಂತೆ ಹೊರವರ್ತುಲ ರಸ್ತೆಯನ್ನು ಸುರಕ್ಷಿತ, ಸುಗಮ ಟೆಕ್ ಕಾರಿಡಾರ್ ಆಗಿ ಪರಿವರ್ತಿಸೋಣ ಎಂದು ಹೇಳಿದೆ.

ಕಳೆದ ವರ್ಷ 100 ದಿನಗಳಲ್ಲಿ ಹೊರ ವರ್ತುಲ ರಸ್ತೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದ ಡಿಸಿಎಂ

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಳೆದ ವರ್ಷ (2023) ಅಕ್ಟೋಬರ್ 7 ರಂದು ಹೊರ ವರ್ತುಲ ರಸ್ತೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಂದು ಅಲ್ಲಿ ಸಭೆ ನಡೆಸಿ, 100 ದಿನಗಳಲ್ಲಿ ಟ್ರಾಫಿಕ್ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆದಾಗ್ಯೂ, ಪರಿಹಾರವೇನೂ ಆಗಿಲ್ಲ.

ನಿನ್ನೆಯೂ ಬೆಂಗಳೂರು ಸಂಚಾರ ಪೊಲೀಸರು ಮಳೆಯಿಂದ ಜಲಾವೃತವಾದ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ವಹಣೆಗೆ ಹರಸಾಹಸ ಪಟ್ಟರು. ವಾಹನ ಸವಾರರು ಪರದಾಡಿದ್ದು ಕಂಡುಬಂತು.