ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸಿಲ್ಲವೇ, ಅವಧಿ ವಿಸ್ತರಣೆಯಾಗಿದೆ, ಆದರೆ ಹೆಚ್ಚು ದಿನವಿಲ್ಲ ಗಮನಿಸಿ
OTS for property tax; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಸುಸ್ತಿದಾರರ ಗಮನಕ್ಕೆ ಈ ಸುದ್ದಿ. ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸಿಲ್ಲವೇ, ಅವಧಿ ವಿಸ್ತರಣೆಯಾಗಿದೆ, ಆದರೆ ಹೆಚ್ಚು ದಿನವಿಲ್ಲ ಎಂಬುದನ್ನು ಗಮನಿಸಿ. ಪೂರ್ಣ ವಿವರ ಈ ವರದಿಯಲ್ಲಿದೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಅನುಕೂಲ ಮಾಡಿಕೊಡಲು ಘೋಷಿಸಿದ್ದ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಅದನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜುಲೈ 30 ಮತ್ತು ಜುಲೈ 31 ರಂದು, ಸಾವಿರಾರು ಡಿಫಾಲ್ಟರ್‌ಗಳು ಬಿಬಿಎಂಪಿ ಕಚೇರಿಗಳಿಗೆ ಧಾವಿಸಿದರು. ಇದರ ಪರಿಣಾಮ ಸರ್ವರ್ ಕ್ರ್ಯಾಶ್ ಆಗಿದ್ದು, ಅನೇಕರು ತಮ್ಮ ತೆರಿಗೆಗಳನ್ನು ಬಡ್ಡಿ ಮತ್ತು ದಂಡವಿಲ್ಲದೆ ಪಾವತಿಸುವ ಅವಕಾಶ ಕಳೆದುಕೊಂಡರು. ಹೀಗಾಗಿ ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಒನ್-ಟೈಮ್ ಸೆಟಲ್‌ಮೆಂಟ್ (OTS) ಯೋಜನೆಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿವರಿಸಿದರು.
ಕಳೆದ ಸಲಕ್ಕಿಂತ 750 ಕೋಟಿ ರೂ ಹೆಚ್ಚು ಸಂಗ್ರಹ
ಆಸ್ತಿ ತೆರಿಗೆ ಪಾವತಿದಾರರಿಗೆ ಜುಲೈ ಅಂತ್ಯದವರೆಗೆ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒನ್ ಟೈಮ್ ಸೆಟಲೆಂಟ್' (ಒಟಿಎಸ್) ಯೋಜನೆ ಜಾರಿಯಿಂದ ಕಳೆದ ವರ್ಷಕ್ಕಿಂತ 750 ಕೋಟಿ ರೂಪಾಯಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಫೆಬ್ರವರಿನಲ್ಲಿ ಜಾರಿಗೊಳಿಸಿದ ಈ ಉಪಕ್ರಮ ಜುಲೈ 31 ರಂದು ಕೊನೆಗೊಂಡಿತು.
ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾತನಾಡಿ, ಪಾವತಿಸಲು ಸಿದ್ಧರಿದ್ದರೂ, ತಾಂತ್ರಿಕ ದೋಷದಿಂದ ಪಾವತಿಸಲು ಸಾಧ್ಯವಾಗದಿರುವ ಸುಸ್ತಿದಾರರ ಸಂಖ್ಯೆ ಹೆಚ್ಚಾಗಿದ್ದು, ಆದ್ದರಿಂದ ರಾಜ್ಯ ಸರ್ಕಾರವು ಗಡುವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದರು.
"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಹೊಸ ಗಡುವಿನವರೆಗೆ ವಿಂಡೋವನ್ನು ತೆರೆದಿರುತ್ತದೆ. ಕಂದಾಯ ಇಲಾಖೆಗೆ ಬಡ್ಡಿ ರಹಿತ ಬಾಕಿಯನ್ನು ಪಾವತಿಸಲು ಸುಸ್ತಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು,” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಇನ್ನಷ್ಟು ತೆರಿಗೆ ಸಂಗ್ರಹಕ್ಕೆ ಅವಕಾಶ
ಕಳೆದ 2023 ಏಪ್ರಿಲ್‌ನಿಂದ ಜುಲೈ 31ಕ್ಕೆ 2,457 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ ಈ ಬಾರಿ 3,200 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದು ಕಳೆದ ಬಾರಿಗಿಂತ 750 ಕೋಟಿ ರೂಪಾಯಿ ಹೆಚ್ಚುವರಿ ಸಂಗ್ರಹ. ಈ ಬಾರಿ ಜುಲೈ ಅಂತ್ಯದವರೆಗೆ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟು ರಿಯಾಯಿತಿ ನೀಡಿದ್ದರಿಂದಾಗಿ 270-300 ಕೋಟಿ ರೂಪಾಯಿ ಹೆಚ್ಚುವರಿ ವಸೂಲಿ ಆಗಿದೆ. ಜತೆಗೆ ಒಟಿಎಸ್ ಯೋಜನೆ ಜಾರಿ ಫಲವಾಗಿ ಸುಮಾರು 400 ರಿಂದ 450 ಕೋಟಿ ರೂಪಾಯಿ ವಸೂಲಿ ಆಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಆರ್ಥಿಕ ವರ್ಷದ ಆರಂಭದಲ್ಲಿ 3.95 ಲಕ್ಷ ಆಸ್ತಿಗಳಿಂದ 733.71 ಕೋಟಿ ರೂಪಾಯಿ ಆಸ್ತಿ ತೆರಿಗೆ ಸುಸ್ತಿಯಾಗಿ ವಸೂಲಿ ಬಾಕಿ ಇತ್ತು. ಈ ಪೈಕಿ 1.07 ಲಕ್ಷ ಆಸ್ತಿ ಮಾಲೀಕರು 217 ಕೋಟಿ ರೂಪಾಯಿ ಬಾಕಿ ಪಾವತಿಸಿದ್ದಾರೆ. ಇದರಿಂದ ಸುಸ್ತಿದಾರರ ಸಂಖ್ಯೆ 2.14 ಲಕ್ಷಕ್ಕೆ ಇಳಿಕೆಯಾಗಿದ್ದು, 516 ಕೋಟಿ ವಸೂಲಿ ಬಾಕಿ ಉಳಿದಂತಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದರು.
ತೆರಿಗೆದಾರರಿಗೆ ನ್ಯಾಯಯುತ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಹೊಂದಾಣಿಕೆಗಳನ್ನು ಮಾಡಲಾಗುವುದು. ತೆರಿಗೆದಾರರು ಹೆಚ್ಚು ತೆರಿಗೆ ಪಾವತಿಸಿದ್ದರೆ, ಹೆಚ್ಚುವರಿ ಹಣವನ್ನು ಭವಿಷ್ಯದ ತೆರಿಗೆ ಪಾವತಿಗಳಿಗೆ ಹೊಂದಿಸಲಾಗುವುದು. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.