ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆ; ಮಾಲೀಕರು ಪತ್ತೆಯಾಗದಿದ್ದರೆ ಹರಾಜು ಪ್ರಕ್ರಿಯೆ
ಬೆಂಗಳೂರಿನಲ್ಲಿ 1,400 ಕ್ಕೂ ಹೆಚ್ಚು ಅನಾಥ ವಾಹನಗಳ ಪತ್ತೆಯಾಗಿದ್ದು, ಅವುಗಳ ಮಾಲೀಕರು ಪತ್ತೆಯಾಗದಿದ್ದರೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ಮೆಜೆಸ್ಟಿಕ್ ಬಳಿ ಖಾಸಗಿ ಬಸ್ ಬೆಂಕಿಗೆ ಭಸ್ಮವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ನಗರದಲ್ಲಿ ರಸ್ತೆಗಳ ಬದಿಯಲ್ಲಿ ಹಲವು ತಿಂಗಳಿಂದ ನಿಲುಗಡೆ ಮಾಡಿದ್ದ ಮಾಲೀಕರಿಲ್ಲದ 1,412 ಅನಾಥ ವಾಹನಗಳನ್ನು 50 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಮಾಡಲಾಗಿದೆ. ರಸ್ತೆಬದಿಯ ಇಕ್ಕೆಲಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಹಲವು ತಿಂಗಳಿಂದ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಯಾಗುತ್ತಿದೆ ಎಂದು ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ರೀತಿ ನಿಲ್ಲಿಸಲಾಗಿದ್ದ ವಾಹನಗಳನ್ನು ಪತ್ತೆ ಮಾಡಲು ಠಾಣಾ ಮಟ್ಟದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಬೆಂಗಳೂರು ನಗರದಲ್ಲಿ ಇಂತಹ ಅನಾಥ 1,412 ವಾಹನಗಳಿರುವುದನ್ನು ಪತ್ತೆ ಹಚ್ಚಿದೆ ಎಂದು ಅವರು ಮಾಹಿತಿ ನೀಡಿದರು. 521 ಬೈಕ್, 706 ಆಟೊ, 79 ಕಾರು, 6 ಭಾರಿ ವಾಹನಗಳು, 93 ಲಘು ಸರಕು ಸಾಗಾಣಿಕೆ ವಾಹನಗಳು ಹಾಗೂ ಇತರೆ 7 ವಾಹನಗಳು ಈ ಪಟ್ಟಿಯಲ್ಲಿವೆ. ಅದರಲ್ಲಿ 449 ಬೈಕ್‌ಗಳು, 350 ಆಟೊ, 48 ಕಾರು, 2 ಭಾರಿ ವಾಹನ, 68 ಲಘು ಸರಕು ಸಾಗಾಣಿಕೆ ವಾಹನಗಳು ಹಾಗೂ ಇತರೆ ಒಂದು ವಾಹನ ಸೇರಿ 918 ವಾಹನಗಳನ್ನು ಮಾಲೀಕರಿಗೆ ಒಪ್ಪಿಸಲಾಗಿದೆ. ವಾಹನದ ಮಾಲೀಕರನ್ನು ಪತ್ತೆಹಚ್ಚಿ, ಅವರಿಂದ ಸಂಚಾರ ನಿಯಮ ಉಲ್ಲಂಘನೆ ಆರೋಪ ದಾಖಲಿಸಿಕೊಂಡು ದಂಡ ಕಟ್ಟಿಸಿ ಕೊಳ್ಳಲಾಗಿದೆ. ಮಾಲೀಕರು ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಿದ್ದಾರೆ.
ಇತರೆ ವಾಹನಗಳ ಮಾಲೀಕರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಮಾಲೀಕರು ಪತ್ತೆ ಆಗದಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ನ್ಯಾಯಾಲಯದ ಅನುಮತಿ ಪಡೆದು ಹರಾಜು ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 494 ವಾಹನಗಳ ವಿಲೇವಾರಿ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಬಸ್ ಬೆಂಕಿಗೆ ಭಸ್ಮ
ಮೆಜೆಸ್ಟಿಕ್ ಬಳಿ ಬುಧವಾರ ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಬಸ್ ಬಹುತೇಕ ಭಸ್ಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್.ಜೆ.ಕಂಫರ್ಟ್ ಹೆಸರಿನ ಖಾಸಗಿ ಟ್ರಾವೆಲ್ಸ್ ಬಸ್ ಅನ್ನು ಚಾಲಕ ನಿಲುಗಡೆ ಮಾಡಿ ಹೊರ ಹೋಗಿದ್ದರು. ಆಗ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ. ಎರಡು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡಾಗ ಚಾಲಕ, ನಿರ್ವಾಹಕ ಮತ್ತು ಕ್ಲೀನರ್ ಒಳಗೆ ಇರಲಿಲ್ಲ. ಅದೃಷ್ಟವಶಾತ್ ಪ್ರಯಾಣಿಕರೂ ಇರಲಿಲ್ಲ ಎನ್ನಲಾಗಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ - ವರದಿ ಓದಿ
2) ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ- ಓದಲು ಇಲ್ಲಿ ಕ್ಲಿಕ್ ಮಾಡಿ
3) ಬೆಂಗಳೂರಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ, ಮೂವರು ಯುವಕರಿಂದ ದೂರು; ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಪೊಲೀಸರು- ಇಲ್ಲಿದೆ ವಿವರ
4) ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಫಾರಂ 12 ಕೊಡದ ಅಧಿಕಾರಿಗಳು, ಅವರಿಗೆ ಮತದಾನದ ಅವಕಾಶವಿಲ್ಲವೆ - ವಿವರ ವರದಿ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
