Bengaluru News: ಬೆಂಗಳೂರಲ್ಲಿ ಬೀದಿನಾಯಿ ಕಾಟ, ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ
ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ ತನಕ ಈ ಅಂಕಿ ಅಂಶದಲ್ಲಿ ಬಿಬಿಎಂಪಿಯ ಪೂರ್ವ ಮತ್ತು ಪಶ್ಚಿಮ ವಲಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳು ಬೆಂಗಳೂರು ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಕಂಡುಬಂದಿವೆ.
ಬೀದಿ ನಾಯಿ ಸಮಸ್ಯೆ ಬೆಂಗಳೂರಿಗರನ್ನು ವ್ಯಾಪಕವಾಗಿ ಕಾಡಿದ್ದು, ಈ ವರ್ಷದ ಸೆಪ್ಟೆಂಬರ್ ಅಂತ್ಯದ ತನಕ 15,285ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ ಬಿಬಿಎಂಪಿ ವ್ಯಾಪ್ತಿಯಲ್ಲಿ ದಾಖಲಾಗಿದೆ. ಕಳೆದ ವರ್ಷ 19,770 ಕೇಸ್, 2021-22ರಲ್ಲಿ 17, 610 ನಾಯಿ ಕಡಿತದ ಕೇಸ್‌ಗಳು ದಾಖಲಾಗಿದ್ದವು.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಾಯಿ ಕಡಿತದ ಪ್ರಕರಣದಲ್ಲಿ ಹೇಳಿಕೊಳ್ಳಬಲ್ಲ ಗಣನೀಯ ಪ್ರಮಾಣದ ಏರಿಕೆ ಅಥವಾ ಇಳಿಕೆ ಆಗಿಲ್ಲ ಎಂದು ಬಿಬಿಎಂಪಿ ಮೂಲಗಳು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ವಿವರಿಸಿದೆ.
ಬೆಂಗಳೂರಿನಲ್ಲಿ ಈ ವರ್ಷದ ಸೆಪ್ಟೆಂಬರ್ ತನಕ ಬಿಬಿಎಂಪಿಯ ಪೂರ್ವ ವಲಯದಲ್ಲಿ 4,109 ನಾಯಿ ಕಡಿತ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಇದೇ ರೀತಿ ಬಿಬಿಎಂಪಿಯ ಪಶ್ಚಿಮ ವಲಯದಿಂದ 3,654 ಕೇಸ್‌ಗಳು ದಾಖಲಾಗಿವೆ. ಇನ್ನುಳಿದಂತೆ ದಾಸರಹಳ್ಳಿಯಲ್ಲಿ 659 ನಾಯಿ ಕಡಿತ ಪ್ರಕರಣ, ಆರ್ ಆರ್ ನಗರದಲ್ಲಿ 871 ನಾಯಿ ಕಡಿತ ಪ್ರಕರಣ ದಾಖಲಾಗಿವೆ.
ಬಿಬಿಎಂಪಿ ದಾಖಲೆ ಸೇರಿದ ಎಲ್ಲ ನಾಯಿ ಕಡಿತದ ಪ್ರಕರಣಗಳ ವಿವರವು ಬಿಬಿಎಂಪಿ ವ್ಯಾಪ್ತಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರದ್ದು. ವಾಸ್ತವದಲ್ಲಿ ನಾಯಿ ಕಡಿತ ಪ್ರಕರಣ ಇನ್ನೂ ಹೆಚ್ಚು ಇದೆ ಎಂದು ವರದಿ ವಿವರಿಸಿದೆ.
ಇನ್ನು ಬೀದಿ ನಾಯಿಗಳ ವಿಚಾರಕ್ಕೆ ಬಂದರೆ ಬಿಬಿಎಂಪಿ ಇತ್ತೀಚೆಗೆ ಅಂದರೆ ಸೆಪ್ಟೆಂಬರ್ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಪಾಲಿಕೆಯ 8 ವಲಯಗಳಲ್ಲಿ ಒಟ್ಟು 2,79,335 ಬೀದಿನಾಯಿಗಳು ಪತ್ತೆಯಾಗಿದ್ದವು. 2019ರಲ್ಲಿ 3.10 ಲಕ್ಷ ಬೀದಿನಾಯಿಗಳು ಇರುವುದಾಗಿ ಅಂದಾಜಿಸಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 10ರಷ್ಟು ಬೀದಿನಾಯಿಗಳ ಸಂಖ್ಯೆ ಇಳಿಕೆಯಾಗಿದೆ. ಈ ಪೈಕಿ ಶೇ 51.16ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆದಿರುವುದಾಗಿ ಬಿಬಿಎಂಪಿ ಈ ಹಿಂದೆ ತಿಳಿಸಿತ್ತು.
ಈ ಸಮೀಕ್ಷೆಯಲ್ಲಿ ಒಟ್ಟು ಶೇ 71.85 ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಿದ್ದು, ಒಟ್ಟಾರೆಯಾಗಿ ಶೇ. 20 ಸಂತಾನಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ.
ಬಿಬಿಎಂಪಿಯ ವಲಯವಾರು ಬೀದಿ ನಾಯಿಗಳ ಸಂಖ್ಯೆ ಗಮನಿಸಿದರೆ, ಪೂರ್ವ ವಲಯದಲ್ಲಿ 37,685, ಪಶ್ಚಿಮ ವಲಯದಲ್ಲಿ 22,025, ದಕ್ಷಿಣ ವಲಯದಲ್ಲಿ 23,241, ದಾಸರಹಳ್ಳಿಯಲ್ಲಿ 21,221, ಆರ್.ಆರ್.ನಗರ ವ್ಯಾಪ್ತಿಯಲ್ಲಿ 41,266, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 39,183, ಯಲಹಂಕ ವ್ಯಾಪ್ತಿಯಲ್ಲಿ 36,343 ಮತ್ತು ಮಹದೇವಪುರ ವ್ಯಾಪ್ತಿಯಲ್ಲಿ 58,371 ಬೀದಿ ನಾಯಿಗಳು ಪತ್ತೆಯಾಗಿವೆ.