ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನ ವಶ, ಥಾಯ್, ಎಮಿರೇಟ್ಸ್‌ ವಿಮಾನದಲ್ಲಿತ್ತು 6 ಕೋಟಿ ರೂ ಬಂಗಾರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನ ವಶ, ಥಾಯ್, ಎಮಿರೇಟ್ಸ್‌ ವಿಮಾನದಲ್ಲಿತ್ತು 6 ಕೋಟಿ ರೂ ಬಂಗಾರ

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನ ವಶ, ಥಾಯ್, ಎಮಿರೇಟ್ಸ್‌ ವಿಮಾನದಲ್ಲಿತ್ತು 6 ಕೋಟಿ ರೂ ಬಂಗಾರ

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನವನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳವಾರ (ಜೂನ್ 4) ಬ್ಯಾಂಕಾಕ್‌ನಿಂದ ಬಂದ ಥಾಯ್ ವಿಮಾನ, ದುಬೈನಿಂದ ಬಂದ ಎಮಿರೇಟ್ಸ್‌ ವಿಮಾನದಲ್ಲಿತ್ತು ಒಟ್ಟು 6 ಕೋಟಿ ರೂಪಾಯಿ ಮೌಲ್ಯದ ಬಂಗಾರ. ಈ ಕಳ್ಳಸಾಗಣೆಯ ವಿವರ ಸುದ್ದಿ ಇಲ್ಲಿದೆ.

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನವನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ವಿಮಾನ ನಿಲ್ಧಾಣದಲ್ಲಿ 9 ಕಿಲೋಗೂ ಅಧಿಕ ಚಿನ್ನವನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬ್ಯಾಂಕಾಕ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ (Bengaluru airport)ಕ್ಕೆ ಆಗಮಿಸಿದ ವಿಮಾನದಲ್ಲಿ ಅಕ್ರಮವಾಗಿ ಸಾಗಿಸಿ ತಂದ 9 ಕಿಲೋಗಿಂತ ಹೆಚ್ಚು ಚಿನ್ನವನ್ನು ಕಂದಾಯ ಗುಪ್ತಚರ ಇಲಾಖೆ (Department of Revenue Intelligence) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಮಂಗಳವಾರ (ಜೂನ್ 4) ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದರು. ವಿಮಾನದಲ್ಲಿ 9 ಕಿಲೋಕ್ಕಿಂತ ಹೆಚ್ಚು ಚಿನ್ನ ಇತ್ತು. ಅದರ ಮೌಲ್ಯ 6.29 ಕೋಟಿ ರೂಪಾಯಿಗೂ ಅಧಿಕ ಎಂದು ಕಂದಾಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಇದಕ್ಕೂ ಮೊದಲು ಪತ್ತೆಯಾದ ಪ್ರಕರಣದ ಆರೋಪಿಗಳು ವಿಚಾರಣೆ ವೇಳೆ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇದರಂತೆ, ಮೊದಲ ಪ್ರಕರಣದಲ್ಲಿ, ಕಳ್ಳಸಾಗಣೆ ಮಾಡುವ ಗುಂಪು ವಿಮಾನದೊಳಗೆ ಚಿನ್ನವನ್ನು ಬಚ್ಚಿಡುತ್ತಾರೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಡಿಆರ್‌ಐ ಅಧಿಕಾರಿಗಳು ಪಡೆದಿದ್ದರು.

ಥಾಯ್‌ ವಿಮಾನದೊಳಗೆ ಇತ್ತು 6.834 ಕಿಲೋ ಚಿನ್ನ

ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ಇಲಾಖೆಯ ಬೆಂಗಳೂರಿನ ಅಧಿಕಾರಿಗಳ ತಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಬ್ಯಾಂಕಾಕ್‌ನಿಂದ ಥಾಯ್ ಏರ್‌ವೇಸ್‌ ವಿಮಾನ (Thai Airways flight) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ, ಈ ಅಧಿಕಾರಿಗಳ ತಂಡ ವಿಮಾನದ ಮೇಲೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಇದೇ ವೇಳೆ ವಿಮಾನದಲ್ಲಿ ಅನಾಥವಾಗಿದ್ದ ಬ್ಯಾಗ್‌ಗಳಲ್ಲಿ ಗಟ್ಟಿ ಮತ್ತು ಪೇಸ್ಟ್‌ನ ರೂಪದಲ್ಲಿ ಚಿನ್ನ ಪತ್ತೆಯಾಗಿತ್ತು. ಇದು 6.834 ಕಿಲೋ ಇತ್ತು ಎಂದು ಕಂದಾಯ ಗುಪ್ತಚರ ಇಲಾಖೆ ಪ್ರಕಟಣೆ ತಿಳಿಸಿದೆ.

ಹ್ಯಾಂಡ್‌ ಬ್ಯಾಗ್‌ಗಳಲ್ಲಿ ಸಿಕ್ಕ ದಾಖಲೆ ಪತ್ರಗಳು ಮತ್ತು ವಿಮಾನ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ಪ್ರಯಾಣಿಕರನ್ನು ಗುರುತಿಸಿದರು. ಅವರು ಬ್ಯಾಗ್‌ಗಳನ್ನು ಅಲ್ಲೇ ಬಿಟ್ಟು ಹೋಗಿದ್ದರು. ಅವರನ್ನು ಕೂಡಲೇ ತಡೆದು ನಿಲ್ಲಿಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ಚಿನ್ನ ಕಳ್ಳಸಾಗಣೆ ವಿಚಾರವನ್ನು ಒಪ್ಪಿಕೊಂಡರು. ಈ ಚಿನ್ನದ ಮೌಲ್ಯ 4.77 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆ ಪ್ರಯಾಣಿಕರಿಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಪ್ರಗತಿಯಲ್ಲಿದೆ ಎಂದು ಡಿಆರ್‌ಐ ತಿಳಿಸಿದೆ.

ಎಮಿರೇಟ್ಸ್ ವಿಮಾನದಲ್ಲಿತ್ತು 2.18 ಕಿಲೋ ಚಿನ್ನ

ಮೊದಲ ಪ್ರಕರಣ ನಡೆದು ಕೆಲವೇ ಗಂಟೆಗಳ ಬಳಿಕ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಮಿರೇಟ್ಸ್‌ ವಿಮಾನದ ಮೇಲೆ ಕೂಡ ಡಿಆರ್‌ಐ ಅಧಿಕಾರಿಗಳ ತಂಡ ದಾಳಿ ಮಾಡಿ ಶೋಧ ನಡೆಸಿತ್ತು. ಈ ವಿಮಾನದಲ್ಲಿ 2.18 ಕಿಲೋ ಚಿನ್ನ ಗಟ್ಟಿ ರೂಪದಲ್ಲಿ ಸಿಕ್ಕಿತ್ತು. ಇದರ ಮೌಲ್ಯ 1.52 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಈ ಚಿನ್ನದ ಗಟ್ಟಿ ಬ್ಯಾಗ್‌ ವಿಮಾನದ ಮುಂಭಾಗದಲ್ಲಿರುವ ಶೌಚಗೃಹದ ಹತ್ತಿರ ಇತ್ತು ಎಂದು ಡಿಆರ್‌ಐ ತಿಳಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner