ಕನ್ನಡ ಸುದ್ದಿ  /  ಕರ್ನಾಟಕ  /  ನೇರಳೆ ಮೆಟ್ರೋ ಮಾರ್ಗದಲ್ಲಿ ಹೊಸ ರಗಳೆ, ಪೀಕ್‌ ಅವರ್‌ನಲ್ಲೇ ನಡು ದಾರಿಯಲ್ಲಿ ಇಳಿಸಿ ಬೇರೆ ರೈಲಲ್ಲಿ ಹೋಗಿ ಅಂತಾರೆ- ಪ್ರಯಾಣಿಕರ ಆಕ್ರೋಶ

ನೇರಳೆ ಮೆಟ್ರೋ ಮಾರ್ಗದಲ್ಲಿ ಹೊಸ ರಗಳೆ, ಪೀಕ್‌ ಅವರ್‌ನಲ್ಲೇ ನಡು ದಾರಿಯಲ್ಲಿ ಇಳಿಸಿ ಬೇರೆ ರೈಲಲ್ಲಿ ಹೋಗಿ ಅಂತಾರೆ- ಪ್ರಯಾಣಿಕರ ಆಕ್ರೋಶ

ಬೆಂಗಳೂರಿನ ನಮ್ಮ ಮೆಟ್ರೊದ ನೇರಳೆ ಮಾರ್ಗದಲ್ಲಿ ಪ್ರಯಾಣಿಕರು ಸಾಕಷ್ಟ ತೊಂದರೆ ಅನುಭವಿಸುತ್ತಿದ್ದಾರೆ. ಮಾರ್ಗ ಮಧ್ಯದಲ್ಲೇ ರೈಲು ಕೊನೆಗೊಳ್ಳುತ್ತದೆ. ಗರುಡಾಚಾರ್‌ಪಾಳ್ಯದಿಂದ ಮತ್ತೊಂದು ಟ್ರೈನ್‌ ಹಿಡಿದು ಹೋಗಬೇಕಾಗಿದೆ. ಪೀಕ್‌ ಅವರ್‌ನಲ್ಲೇ ಈ ರೀತಿ ಆಗುತ್ತಿರುರುವುದು ಆಕ್ರೋಶಕ್ಕೆ ಕಾರಣವಾಗಿದೆ. (ಬರಹ: ಪ್ರಿಯಾಂಕ ಗೌಡ)

ಪೀಕ್‌ ಅವರ್‌ನಲ್ಲಿ ಮಾರ್ಗ ಮಧ್ಯದಲ್ಲೇ ಕೊನೆಗೊಳ್ಳುವ ಮೆಟ್ರೊ ರೈಲು; ಪ್ರಯಾಣಿಕರ ಆಕ್ರೋಶ
ಪೀಕ್‌ ಅವರ್‌ನಲ್ಲಿ ಮಾರ್ಗ ಮಧ್ಯದಲ್ಲೇ ಕೊನೆಗೊಳ್ಳುವ ಮೆಟ್ರೊ ರೈಲು; ಪ್ರಯಾಣಿಕರ ಆಕ್ರೋಶ

ಬೆಂಗಳೂರು: ಮೆಟ್ರೊ ಸದ್ಯ ಬೆಂಗಳೂರು ಜನರ ಜೀವನಾಡಿಯಾಗಿದೆ. ಬೆಂಗಳೂರು ಟ್ರಾಫಿಕ್‌ನ ಒತ್ತಡಕ್ಕೆ ಸಿಲುಕಿದ ಜನರಿಗೆ ಮೆಟ್ರೊ ಪ್ರಯಾಣ ವರದಾನವಾಗಿದ್ದು ಸುಳ್ಳಲ್ಲ. ಇದೀಗ ಬಹುತೇಕ ಕಡೆಗಳಿಗೆ ಮೆಟ್ರೊ ಸಂಚಾರವಿದೆ. ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ರೈಲಿನಲ್ಲಿ ಸಾಕಷ್ಟು ಜನ ಸಂಚರಿಸುತ್ತಿದ್ದಾರೆ. ಈ ಮಾರ್ಗವು ಹಲವು ಪ್ರಯಾಣಿಕರಿಗೆ ಅನುಕೂಲವಾಗಿದೆ. ಪೀಕ್ ಅವರ್ ಮಾತ್ರವಲ್ಲ ದಿನದ ಬೇರೆ ಸಮಯಗಳಲ್ಲೂ ಈ ಮೆಟ್ರೋದಲ್ಲಿ ಜನರು ತುಂಬಿರುತ್ತಾರೆ. ಆದರೀಗ ವೈಟ್‌ಫೀಲ್ಡ್ ನಿಲ್ದಾಣಕ್ಕೆ ಪೀಕ್ ಅವರ್‌ನಲ್ಲಿ ನೇರ ಮೆಟ್ರೋ ರೈಲು ಪಡೆಯಲು ಸಾಧ್ಯವಾಗದೇ ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಪೀಕ್ ಅವರ್‌ ಸಮಯದಲ್ಲಿ ನೇರಳೆ ಮಾರ್ಗದಲ್ಲಿ ಬಹುತೇಕ ರೈಲುಗಳು ಗರುಡಾಚಾರ್‌ಪಾಳ್ಯ ತನಕ ಮಾತ್ರ ಸಂಚರಿಸುತ್ತಿವೆ. ಈ ನಿಲ್ದಾಣದಲ್ಲಿ ರೈಲುಗಳು ಕೊನೆಗೊಳ್ಳುತ್ತಿವೆ. ವೈಟ್‌ಫೀಲ್ಡ್‌ ನಿಲ್ದಾಣಕ್ಕೆ ತೆರಳಬೇಕೆಂದರೆ ಮತ್ತೊಂದು ರೈಲಿನಲ್ಲಿ ತೆರಳಬೇಕಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ರೀತಿ ಮಾಡುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸೋಷಿಯಲ್‌ ಮಿಡಿಯಾ ಪೋಸ್ಟ್‌ ವೈರಲ್‌

ಈ ಬಗ್ಗೆ ಶಶಿ ಎಂಬುವವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ʼಗರುಡಾಚಾರ್‌ಪಾಳ್ಯದವರೆಗೆ ಮಾತ್ರ ರೈಲುಗಳು ಸಂಚರಿಸುತ್ತಿದ್ದು, ಅಲ್ಲಿಯೇ ಕೊನೆಗೊಳಿಸಲಾಗುತ್ತದೆ. ವೈಟ್‌ಫೀಲ್ಡ್‌ ನಿಲ್ದಾಣಕ್ಕೆ ತೆರಳಬೇಕೆಂದರೆ ಇನ್ನೊಂದು ರೈಲು ಬರುವ ತನಕ ಕಾದು ಅದರಲ್ಲಿ ಹೋಗಬೇಕಾಗಿದೆ. ಈ ರೀತಿ ಮಾಡುವುದು ಏತಕ್ಕಾಗಿ?ʼ ಎಂದು ಪ್ರಶ್ನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇನ್ನು ಶಶಿ ಎಂಬುವವರು ಹಂಚಿಕೊಂಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕೆಲವು ಬಳಕೆದಾರರು, ಕೆಆರ್ ಪುರಂ, ಇಂದಿರಾನಗರ ಮತ್ತು ಮೆಜೆಸ್ಟಿಕ್‌ನಂತಹ ಪ್ರಮುಖ ನಿಲ್ದಾಣಗಳಲ್ಲಿ ಭಾರಿ ರಶ್ ಆಗುತ್ತಿದೆ. ಇದನ್ನು ಪೂರೈಸುವುದಕ್ಕಾಗಿ ನಮ್ಮ ಮೆಟ್ರೊ ಈ ರೀತಿ ಮಾಡುತ್ತಿದೆ ಎಂದು ಹೇಳಿದ್ದಾರೆ.

“ಮೆಜೆಸ್ಟಿಕ್‌ನಲ್ಲಿ ಜನಸಂದಣಿ ತೆರವುಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ, ಜನಸಂಖ್ಯೆ ಮತ್ತಷ್ಟು ಹೆಚ್ಚಾಗಿ ಕಷ್ಟಕರವಾಗುತ್ತದೆ. ಹೀಗಾಗಿ ಗರುಡಾಚಾರ್‌ಪಾಳ್ಯ ತನಕ ಚಲಿಸಿ ಅಲ್ಲಿಂದ ಹಿಂತಿರುಗುತ್ತದೆ. ಹೆಚ್ಚು ಜನಸಂದಣಿ ಇರುವ ಎಂ.ಜಿ.ರೋಡ್, ಇಂದಿರಾ ನಗರ, ಕೆ.ಆರ್.ಪುರ ದಂತಹ ಪ್ರಮುಖ ನಿಲ್ದಾಣಗಳಿಗೆ ಸೇವೆ ಸಲ್ಲಿಸುತ್ತದೆ. ಗರುಡಾಚಾರ್‌ಪಾಳ್ಯದಿಂದ ಮುಂದೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಈ ರೀತಿ ಮಾಡುವುದು ಅನಿವಾರ್ಯವಾಗುತ್ತದೆʼ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇನ್ನು, ಈ ಸಮಸ್ಯೆಯನ್ನು ಪರಿಹರಿಸುವಂತೆ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಕೂಡ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಗೆ ಪ್ರಯಾಣಿಕರ ಪರವಾಗಿ ಒತ್ತಾಯಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಿ.ಸಿ. ಮೋಹನ್, ʼಮೆಜೆಸ್ಟಿಕ್‌ನಿಂದ ನಮ್ಮ ಮೆಟ್ರೊದ ನೇರಳೆ ಮಾರ್ಗದಲ್ಲಿ 15 ಲೂಪ್ ರೈಲುಗಳ ಹೊರತಾಗಿಯೂ, ಗರುಡಾಚಾರ್ ಪಾಳ್ಯದಲ್ಲಿ ಕೆಲವು ರೈಲುಗಳು ಕೊನೆಗೊಳ್ಳುತ್ತಿವೆ. ಇದರಿಂದ ವೈಟ್‌ಫೀಲ್ಡ್‌ಗೆ ತೆರಳಬೇಕಿರುವ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ವೈಟ್‌ಫೀಲ್ಡ್‌ಗೆ ಪ್ರಯಾಣಿಸುವ ಪ್ರಯಾಣಿಕರು ಗರುಡಾಚಾರ್ ಪಾಳ್ಯದಲ್ಲಿ ಇಳಿದು ಮತ್ತೊಂದು ಜನನಿಬಿಡ ರೈಲಿಗಾಗಿ ಕಾಯಬೇಕಾಗಿದೆ. BMRCL ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆʼ ಸಂಸದರು ಒತ್ತಾಯಿಸಿದರು.

ನೇರಳೆ ಮಾರ್ಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ

ನೇರಳೆ ಮಾರ್ಗದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇಂಟರ್ ಚೇಂಜ್ ಮಾರ್ಗವಾದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವುದನ್ನು ಕಂಡ ಮೆಟ್ರೋ ಅಧಿಕಾರಿಗಳು ಪ್ರಯಾಣಿಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 15 ರೈಲುಗಳನ್ನು ಹೆಚ್ಚಿಸಲಾಗಿದೆ. ಜೂನ್ 6 ರಿಂದ ರೈಲುಗಳ ಆವರ್ತನವನ್ನು ಹೆಚ್ಚಿಸಲಾಯಿತು. ಬೆಳಿಗ್ಗೆ ಸಮಯದಲ್ಲಿ ರೈಲುಗಳು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ 8.48, 8.58, 9.08, 9.18, 9.29, 9.39, 9.39 ಕ್ಕೆ ಹೊರಡುತ್ತವೆ. ಪ್ರತಿ 3.5 ನಿಮಿಷಗಳಿಗೊಮ್ಮೆ ಹೆಚ್ಚುವರಿ ರೈಲುಗಳು ಮೆಜೆಸ್ಟಿಕ್‌ನಿಂದ ಸಂಚರಿಸುತ್ತವೆ. ಇಷ್ಟಿದ್ದರೂ ವೈಟ್‌ಫೀಲ್ಡ್‌ಗೆ ತೆರಳುವ ಪ್ರಯಾಣಿಕರು ಅನಾನುಕೂಲ ಎದುರಿಸುತ್ತಿರುವುದು ಕಂಡುಬಂದಿದೆ.