ಕನ್ನಡ ಸುದ್ದಿ  /  Karnataka  /  Bengaluru News Phone In Program Every Friday For 2 Months From Bwssb Aerator Installation Date Extended Mrt

ಜಲಮಂಡಳಿಯಿಂದ 2 ತಿಂಗಳು ಪ್ರತಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮ; ಏರಿಯೇಟರ್ ಅಳವಡಿಕೆ ಗಡುವು ಏಪ್ರಿಲ್ 7 ವರೆಗೆ ವಿಸ್ತರಣೆ

Bengaluru News: ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯ ಭಾಗವಾಗಿ ಜಲಮಂಡಳಿ ಸೂಚಿಸಿರುವ ಏರಿಯೇಟರ್ ಅವಳಡಿಕೆಗೆ ನೀಡಿರುವ ಗಡುವುವನ್ನು ಏಪ್ರಿಲ್ 7ರ ವರೆಗೆ ವಿಸ್ತರಿಸಲಾಗಿದೆ. ಫೋನ್ ಕಾರ್ಯಕ್ರಮಕ್ಕೂ ಮುಂದಾಗಿದೆ. (ವರದಿ: ಎಚ್‌ ಮಾರುತಿ)

ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ಹಲವು ಕ್ರಮಗಳನ್ನು ಕೈಗೊಂಡಿದೆ. (AFP)

ಬೆಂಗಳೂರು: ಸಾರ್ವಜನಿಕರ ಹಿತದೃಷ್ಟಿಯಿಂದ ಜಲಮಂಡಳಿ ವತಿಯಿಂದ ಬೇಸಿಗೆ ಕಾಲ ಮುಗಿಯುವವರೆಗೂ ಮುಂದಿನ ಎರಡು (ಏಪ್ರಿಲ್, ಮೇ) ತಿಂಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಪ್ರತಿ ಶುಕ್ರವಾರ ಬೆಳಗ್ಗೆ 9:30 ರಿಂದ 10:30 ರವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರೇ ಕರೆಗಳನ್ನು ಸ್ವೀಕರಿಸಿ ಪರಿಹಾರ ನೀಡಲಿದ್ದಾರೆ.

ಈ ಫೋನ್ ಇನ್ ಕಾರ್ಯಕ್ರಮದ ಮುಖಾಂತರ ಬೆಂಗಳೂರು ನಗರದ ನಾಗರಿಕರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನೀರು ಹಾಗೂ ಒಳಚರಂಡಿ ಸಮಸ್ಯೆಗಳನ್ನು ಕುರಿತು ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶವನ್ನು ಜಲಮಂಡಳಿ ನೀಡಿದೆ.

ಏರಿಯೇಟರ್ ಅಳವಡಿಕೆಯ ಗಡುವು ಏಪ್ರಿಲ್ 7 ತನಕ ವಿಸ್ತರಣೆ

ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ವಾಣಿಜ್ಯ ಕಟ್ಟಡ, ಕೈಗಾರಿಕಾ ಪ್ರದೇಶ, ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ ಹಾಗೂ ಫ್ಲೋ ಕಂಟ್ರೋಲರ್‌ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನು ಏಪ್ರಿಲ್ 7 ರ ವರೆಗೆ ವಿಸ್ತರಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.

ಏರಿಯೇಟರ್ ಅಳವಡಿಕೆಗೆ ಮಾರ್ಚ್ 31 ರ ವರೆಗೆ ಗಡುವು ನೀಡಲಾಗಿತ್ತು. ಈಗಾಗಲೇ ಬಹಳಷ್ಟು ಕಡೆ ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ. ಮತ್ತಷ್ಟು ಕಾಲಾವಕಾಶ ನೀಡುವಂತೆ ಬೇಡಿಕೆ ಬಂದಿದ್ದರಿಂದ ಏಪ್ರಿಲ್ 7 ರ ವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನೀರಿನ ಉಳಿತಾಯ ಮಾಡಲು ಸಾರ್ವಜನಿಕರ ಸಹಭಾಗಿತ್ವವೂ ಬಹಳ ಮುಖ್ಯವಾಗಿರುತ್ತದೆ. ಅವರ ಪಾಲುದಾರಿಕೆಯಿಂದ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ. ಸಾರ್ವಜನಿಕರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಸಮಯಾವಕಾಶ ವಿಸ್ತರಿಸಲಾಗಿದೆ. ಈ ಗಡುವಿನ ಅವಧಿಯಲ್ಲಿ ಏರಿಯೇಟರ್ ಅಳವಡಿಸಿಕೊಳ್ಳುವಂತೆ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಸಮಸ್ಯೆಯನ್ನು ಬಗೆಹರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರಿನಲ್ಲಿ ನೀರಿಲ್ಲದೆ ಪರಿತಪಿಸುತ್ತಿರುವಾಗ ವಾಹನಗಳನ್ನು ತೊಳೆಯಲು ಕಾವೇರಿ ನೀರು ಬಳಸಿ ವ್ಯರ್ಥ ಮಾಡಬೇಡಿ ಎಂದು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪರಿಪರಿಯಾಗಿ ಬೇಡಿಕೊಂಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ರೀತಿ ನೀರನ್ನು ಪೋಲು ಮಾಡಿದರೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ. ಆದರೆ ನೀರಿನ ಮಹತ್ವವನ್ನು ಅರಿಯದ ಕೆಲವು ಬುದ್ದಿಗೇಡಿಗಳು ವಾಹನಗಳನ್ನು ಸ್ವಚ್ಚಗೊಳಿಸಲು ಕಾವೇರಿ ನಿರನ್ನು ಬಳಸುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕಾರನ್ನು ತೊಳೆಯಲು ಕಾವೇರಿ ನೀರನ್ನು ಬಳಸಿದ ಕೆಲವರಿಗೆ ತಲಾ 5000 ರೂಪಾಯಿ ದಂಡವನ್ನು ವಿಧಿಸಲಾಗಿದೆ. (ವರದಿ: ಎಚ್‌ ಮಾರುತಿ)