ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರು ಕೋರ್ಟ್‌ ಸಮನ್ಸ್, ಜುಲೈ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ

ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರು ಕೋರ್ಟ್‌ ಸಮನ್ಸ್, ಜುಲೈ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ

ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರು ಕೋರ್ಟ್‌ ಸಮನ್ಸ್ ಜಾರಿಗೊಳಿಸಿದ್ದು, ಜುಲೈ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಯಡಿಯೂರಪ್ಪ ಮೇಲಿದೆ.

ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರು ಕೋರ್ಟ್‌ ಸಮನ್ಸ್, ಜುಲೈ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ. (ಕಡತ ಚಿತ್ರ)
ಪೋಕ್ಸೊ ಪ್ರಕರಣ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬೆಂಗಳೂರು ಕೋರ್ಟ್‌ ಸಮನ್ಸ್, ಜುಲೈ 15ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚನೆ. (ಕಡತ ಚಿತ್ರ)

ಬೆಂಗಳೂರು: ಪೋಕ್ಸೊ ಪ್ರಕರಣ ಸಂಬಂಧ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಗಳೂರಿನ 1ನೇ ತ್ವರಿತ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು, ಜುಲೈ 15 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಆದೇಶಿಸಿದೆ.

ಬೆಂಗಳೂರು ಕೋರ್ಟ್ ಗುರುವಾರ (ಜುಲೈ 4) ಈ ಸಮನ್ಸ್ ಜಾರಿಗೊಳಿಸಿದೆ. ಬಿಜೆಪಿಯ ಹಿರಿಯ ನಾಯಕನ ವಿರುದ್ಧ ಸಿಐಡಿ ಜೂನ್ 27 ರಂದು ಫಾಸ್ಟ್ ಟ್ರ್ಯಾಕ್ ಕೋರ್ಟ್ 1 ರಲ್ಲಿ ಪೋಕ್ಸೋ ಕಾಯ್ದೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿತ್ತು.

ಒಂದು ದಿನದ ನಂತರ, ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿತ್ತು. ಅದಾಗಿ ಹೈಕೋರ್ಟ್, ಅವರನ್ನು ಬಂಧಿಸದಂತೆ ಸಿಐಡಿಗೆ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ಅಲ್ಲದೆ, ಮುಂದಿನ ವಿಚಾರಣೆಯನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಿತು.

ಟ್ರೆಂಡಿಂಗ್​ ಸುದ್ದಿ

ಪೋಕ್ಸೊ ಪ್ರಕರಣ; ಬಿಎಸ್‌ ಯಡಿಯೂರಪ್ಪ ವಿರುದ್ಧದ ಆರೋಪಗಳೇನು

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯಡಿಯೂರಪ್ಪ ವಿರುದ್ಧ ಸಿಐಡಿ ತನಿಖೆ ನಡೆಸುತ್ತಿದೆ. ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮೌನವಾಗಿರುವಂತೆ ಹೇಳಿ ಬಿಎಸ್ ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳು ಹಣ ಪಾವತಿಸಿದ್ದಾರೆ ಎಂದು ಕೋರ್ಟ್‌ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ಮಾಜಿ ಮುಖ್ಯಮಂತ್ರಿ 81 ವರ್ಷದ ಯಡಿಯೂರಪ್ಪ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (ಪೋಕ್ಸೊ) ಕಾಯ್ದೆಯ ಪ್ರಕಾರ ದಾಖಲಾದ ಆರೋಪಗಳಿವು.

1) ಸೆಕ್ಷನ್ 8 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ)

2) ಸೆಕ್ಷನ್ 354 ಎ (ಲೈಂಗಿಕ ಕಿರುಕುಳ)

3) ಸೆಕ್ಷನ್ 204 (ಪುರಾವೆಯಾಗಿ ಸಲ್ಲಿಸಬೇಕಾಗಿದ್ದ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆ ನಾಶಪಡಿಸುವುದು)

4) ಭಾರತೀಯ ದಂಡ ಸಂಹಿತೆಯ (IPC) 214 (ಅಪರಾಧ ಮರೆಮಾಚಲು ಆಸ್ತಿ ಉಡುಗೊರೆ ಅಥವಾ ಆಸ್ತಿ ಮತ್ತೆ ಒದಗಿಸುವುದು )

ಬಿಎಸ್ ಯಡಿಯೂರಪ್ಪ ಸಹಚರರಾದ ಅರುಣ್ ವೈ ಎಂ, ರುದ್ರೇಶ್ ಎಂ, ಜಿ ಮರಿಸ್ವಾಮಿ ವಿರುದ್ಧವೂ ಚಾರ್ಚ್‌ ಶೀಟ್‌ನಲ್ಲಿ ಐಪಿಸಿ ಸೆಕ್ಷನ್ 204 ಮತ್ತು 214 ಪ್ರಕಾರ ಆರೋಪ ಹೊರಿಸಲಾಗಿದೆ.

ಬಿಎಸ್ ಯಡಿಯೂರಪ್ಪ ವಿರುದ್ಧದ ಪ್ರಕರಣದ ವಿವರ

2024ರ ಫೆಬ್ರವರಿ 2 - ನ್ಯಾಯ ಒದಗಿಸಲು ಸಹಾಯ ಮಾಡುವಂತೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರ ಮನೆಗೆ ತೆರಳಿದ್ದರು. ಅದಾಗಿ, ಮಾರ್ಚ್‌ 3 ರಂದು ಸಂತ್ರಸ್ತೆಯ ತಾಯಿ ತಮ್ಮ ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಮುಂದೆ, ಮಾರ್ಚ್ 14 ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿತ್ತು. ಸರಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅದಾಗಿ, ಏಪ್ರಿಲ್‌ 12 ರಂದು ಯಡಿಯೂರಪ್ಪ ಅವರ ಧ್ವನಿಯ ಮಾದರಿಯನ್ನು ಸಂಗ್ರಹಿಸಿದ್ದರು. ಏಪ್ರಿಲ್‌ 17 ರಂದು ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದರು. ಮತ್ತೆ ಸಂತ್ರಸ್ತೆಯ ಸಹೋದರ ದೂರು ಸಲ್ಲಿಸಿದ್ದರು.

ಕಳೆದ ತಿಂಗಳು ಜೂನ್‌ 12 ರಂದು ಯಡಿಯೂರಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಲಾಗಿತ್ತು. ಜೂನ್‌ 14 ರಂದು ಬಿಎಸ್‌ ವೈ ಅವರನ್ನು ಬಂಧಿಸದಂತೆ ಹೈಕೋರ್ಟ್‌ ಸೂಚಿಸಿತ್ತು. ಜೂನ್‌ 17 ರಂದು ಯಡಿಯೂರಪ್ಪ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.