ಕನ್ನಡ ಸುದ್ದಿ  /  Karnataka  /  Bengaluru News Poland Google Techie Says 1st Bad Experience In Bangalore Uber Driver Made Him Get Off Cab Uks

ಪೋಲೆಂಡ್ ಟೆಕ್ಕಿಗೆ ಬೆಂಗಳೂರಲ್ಲಿ ಮೊದಲ ಕೆಟ್ಟ ಅನುಭವ; ಟ್ಯಾಕ್ಸಿ ಚಾಲಕನ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ ಉಬರ್

ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರ ವರ್ತನೆ ಟೀಕೆಗೆ ಒಳಗಾಗುವುದು, ಪೊಲೀಸ್ ದೂರಿಗೂ ಕಾರಣವಾಗುವುದು ಹೊಸದಲ್ಲ. ಫೋಲೆಂಡ್‌ ಟೆಕ್ಕಿ ತನಗಾದ ಮೊದಲ ಕೆಟ್ಟ ಅನುಭವವನ್ನು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಅದರ ವಿವರ ಇಲ್ಲಿದೆ.

ಉಬರ್ ಟ್ಯಾಕ್ಸಿ ಪ್ರಯಾಣದ ಅನುಭವ (ಸಾಂಕೇತಿಕ ಚಿತ್ರ)
ಉಬರ್ ಟ್ಯಾಕ್ಸಿ ಪ್ರಯಾಣದ ಅನುಭವ (ಸಾಂಕೇತಿಕ ಚಿತ್ರ) (Reuters)

ಬೆಂಗಳೂರು: ಚಾಲಕರ ಜೊತೆಗಿನ ಕೆಟ್ಟ ಅನುಭವಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಾಗುತ್ತವೆ. ಇದು ಕೂಡ ಅಂಥದ್ದೇ ಒಂದು ವಿಷಯವಾದರೂ, ಕಾರಣ ಸ್ವಲ್ಪ ಭಿನ್ನವಾದುದು. ಸಂಚಾರ ನಿಯಮ ಮತ್ತು ಸಾರ್ವಜನಿಕ ಸೌಜನ್ಯದ ವರ್ತನೆಯ ವಿಚಾರ ಇದರ ಮೂಲ ಕಾರಣ.

ಬೆಂಗಳೂರಿನಲ್ಲಿ ಮೊದಲ ಕೆಟ್ಟ ಅನುಭವ ಎಂಬ ವಾಕ್ಯದೊಂದಿಗೆ ಪೋಲಂಡ್‌ನಿಂದ ಬಂದ ಗೂಗಲ್‌ ಟೆಕ್ಕಿಯೊಬ್ಬರು ಉಬರ್ ಚಾಲಕನ ದುರ್ವರ್ತನೆಯನ್ನು ವಿವರಿಸಿದ್ದು, ಉಬರ್ ಸ್ಪಂದಿಸಿರುವುದನ್ನೂ ಬರೆದುಕೊಂಡಿದ್ದಾರೆ.

ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದದ್ದ ಗೂಗಲ್‌ನ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಅವರ ಸ್ನೇಹಿತನನ್ನು ದಾರಿ ಮಧ್ಯೆ ಇಳಿಸಿ ಹೋದ ಉಬರ್ ಕಾರು ಚಾಲಕನ ವರ್ತನೆ, ಆ ಘಟನೆ ಯಾಕಾಯಿತು ಎಂಬುದನ್ನು ಎಕ್ಸ್‌ನಲ್ಲಿ ಅವರು ವಿವರಿಸಿದ್ದಾರೆ.

ಗೂಗಲ್ ಉದ್ಯೋಗಿ ಬರೆದುಕೊಂಡಿರುವುದೇನು

ಗೂಗಲ್ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ತಮ್ಮ ಮೊದಲ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದು, ಉಬರ್ ಚಾಲಕ ತನ್ನನ್ನು "ಕಾರಿನಿಂದ ಇಳಿಯುವಂತೆ" ಕೇಳಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಟೆಕ್ಕಿಯ ಹೆಸರು ಸ್ಟ್ರೈವರ್. ಈ ವ್ಯಕ್ತಿ ತನ್ನ ಪರಿಚಯದಲ್ಲಿ ತಾನು ಗೂಗಲ್ ಎಂಜಿನಿಯರ್ ಎಂದು ಉಲ್ಲೇಖಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವುದು ಇಷ್ಟು-

"ಬೆಂಗಳೂರಿನಲ್ಲಿ ಮೊದಲ ಕೆಟ್ಟ ಅನುಭವ. ಉಬರ್ ಕ್ಯಾಬ್‌ ಬುಕ್ ಮಾಡಿದೆ. ಪ್ರಯಾಣದ ಅವಧಿ 1.5 ಗಂಟೆ ತೋರಿಸ್ತಾ ಇತ್ತು. ಮೊದಲ 30 ನಿಇಷದ ಪ್ರಯಾಣದಲ್ಲಿ ಕ್ಯಾಬ್ ಚಾಲಕ ತನ್ನ ಫೋನ್‌ನ ಲೌಡ್‌ಸ್ಪೀಕರ್ ಆನ್‌ ಮಾಡಿಕೊಂಡು ನಿರಂತರ ಮಾತನಾಡುತ್ತ ಚಾಲನೆ ಮಾಡಿದ.

ನನಗೆ ಮತ್ತು ನನ್ನ ಸ್ನೇಹಿತನಿಗೆ ಸ್ವಲ್ಪ ಹೊತ್ತಿನಲ್ಲಿ ತಲೆ ನೋವು ಶುರುವಾಯಿತು. ಸೌಜನ್ಯದೊಂದಿಗೆ ಹೆಡ್‌ಫೋನ್ ಬಳಸುವಂತೆ ಮನವಿ ಮಾಡಿದೆವು. ಅಥವಾ ಪ್ರಯಾಣ ಮುಗಿದ ಬಳಿಕ ಮಾತನಾಡುವಂತೆ ವಿನಂತಿಸಿದೆವು. ಮುಂದೇನಾಯಿತು ಅಂತ ಊಹಿಸಿಕೊಳ್ಳಿ.

ನಮ್ಮನ್ನು ಆತ ಬೈಯಲು ಶುರುಮಾಡಿದ. ಬಳಿಕ ನಿಮ್ಕೊಂದಿಗೆ ಪ್ರಯಾಣಿಸುವುದು ಕಷ್ಟವೆನಿಸಿದೆ ಎನ್ನುತ್ತ ನಮ್ಮನ್ನು ಅಲ್ಲೇ ಇಳಿಸಿದ"

ಸ್ಕ್ರೈವರ್ ಅವರ ಈ ಟ್ವೀಟ್‌ಗೆ ಉಬರ್ ಇಂಡಿಯಾ ಸ್ಪಂದಿಸಿದ್ದು, ಚಾಲಕರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಪ್ರಯಾಣದ ವಿವರವನ್ನು ನೇರವಾಗಿ ಹಂಚಿಕೊಳ್ಳುವಂತೆ ಹೇಳಿತು.

ಇದಕ್ಕೆ ಪೂರಕವಾದ ಮತ್ತೊಂದು ಪೋಸ್ಟ್‌ನಲ್ಲಿ ಸ್ಕ್ರೈವರ್, ನನ್ನನ್ನು ಸಂಪರ್ಕಿಸಿದ್ದಕ್ಕೆ ಮತ್ತು ಕ್ರಮದ ಭರವಸೆ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಕ್ರಮ ತೆಗೆದುಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುವುದೋ ಗೊತ್ತಿಲ್ಲ. ಆದರೆ ಬೋಟ್ ಸಂದೇಶದ ಬದಲು ಕರೆ ಮಾಡಿ ಗ್ರಾಹಕ ಸಮಸ್ಯೆ ಆಲಿಸಿದ್ದು ಖುಷಿ ನೀಡಿದೆ" ಎಂದು ಬರೆದುಕೊಂಡಿದ್ದಾರೆ.

ಸ್ಕ್ರೈವರ್ ಟ್ವೀಟ್‌ಗೆ ಹಲವರ ಪ್ರತಿಕ್ರಿಯೆ

ಗೂಗಲ್‌ ಉದ್ಯೋಗಿ ಸ್ಕ್ರೈವರ್ ಮಾಡಿರುವ ಟ್ವೀಟ್‌ನಲ್ಲಿ ಅವರು ಪ್ರಯಾಣಿಸಿದ್ದ ಉಬರ್ ಟ್ಯಾಕ್ಸಿಯ ನಂಬರ್ ಪ್ಲೇಟ್ ಫೋಟೋ ಹಾಕಿದ್ದರು. ಇದಕ್ಕೆ ಉತ್ತರಿಸಿದ ಇನೊಬ್ಬರು, ಆ ಟ್ಯಾಕ್ಸಿ ಚಾಲಕನ ಫೋಟೋವನ್ನೂ ಶೇರ್ ಮಾಡಿದ್ದಾರೆ.

ಈ ಟ್ವೀಟ್‌ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 350ಕ್ಕೂ ಹೆಚ್ಚು ಪ್ರತಿಕ್ರಿಯೆ ಹೊಂದಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಉಬರ್‌ ಇಂಡಿಯಾಗೆ ನೂರಾರೂ ದೂರುಗಳು ವ್ಯಕ್ತವಾಗಿವೆ.

ಕೆಲವರು ಉಬರ್ ಹೊರತುಪಡಿಸಿದ ಟ್ಯಾಕ್ಸಿ ಬುಕ್ಕಿಂಗ್ ಅನುಭವವನ್ನೂ ಹಂಚಿಕೊಂಡಿದ್ದಾರೆ. ಇನ್ನೂ ವಿಶೇಷ ಎಂದರೆ ಕಂಪನಿಗಳ ಬೋಟ್‌ ಸಂದೇಶದ ಬಗ್ಗೆ ಬೇಸರ ವ್ಯಕ್ತವಾಗಿರುವುದು. ಗ್ರಾಹಕ ಸಂತೋಷದಲ್ಲಿ ನೇರ ಕರೆ, ಸ್ಪಂದನೆಯನ್ನು ಬಯಸುತ್ತಿರುವುದು ಕಂಡುಬಂದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)