ಬೆಂಗಳೂರು: 20 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿ ನಿರ್ದೇಶಕನ ಬಂಧನ; ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಡೆಲಿವರಿ ಬಾಯ್ ಪೊಲೀಸರ ವಶಕ್ಕೆ
ಬೆಂಗಳೂರು ಅಪರಾಧ ಸುದ್ದಿ; 20 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಡೆಲಿವರಿ ಬಾಯ್ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ವಿಲ್ಸನ್ ಗಾರ್ಡನ್ ನಲ್ಲಿ 20 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 46 ವರ್ಷದ ಗಜೇಂದ್ರ ಆಲಿಯಾಸ್ ಗಜಾ ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಚಲನಚಿತ್ರ ನಿರ್ದೇಶಕ ಎಂದು ಹೇಳಿಕೊಂಡಿದ್ದಾನೆ. 2004ರಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಾರಾಮಾರಿಯಲ್ಲಿ ಕೊತ್ತ ರವಿ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಪ್ರಕಣದ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಗಜೇಂದ್ರ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ನಡೆದ ನಂತರ ಗಜೇಂದ್ರ ತಮಿಳುನಾಡಿನ ವೆಲ್ಲೂರಿಗೆ ತೆರಳಿ ತಲೆ ಮರೆಸಿಕೊಂಡಿದ್ದ. ಮೂರು ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಹಿಂತಿರುಗಿದ್ದ ಗಜೇಂದ್ರ ಸದ್ದಗುಂಟೆ ಪಾಳ್ಯದಲ್ಲಿ ಮನೆ ಬಾಡಿಗೆ ಪಡೆದುಕೊಂಡು ವಾಸವಾಗಿದ್ದ. ಮನೆ ಮಾಲೀಕರಿಗೆ ಚಿತ್ರ ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದ. ಪೊಲೀಸರು ಪ್ರಕರಣವನ್ನು ಮರೆತಿರುತ್ತಾರೆ.
ತನ್ನನ್ನು ಬಂಧಿಸುವುದಿಲ್ಲ ಎಂದು ಭಾವಿಸಿ ಬೆಂಗಳೂರಿನಲ್ಲಿ ಆರೋಪಿ ಗಜೇಂದ್ರ ಓಡಾಡಿಕೊಂಡಿದ್ದ. ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊತ್ತ ರವಿ ಪ್ರಕರಣದಲ್ಲಿ ಗಜೇಂದ್ರ 18 ನೇ ಆರೋಪಿಯಾಗಿದ್ದ. ಈತನಿಗಾಗಿ ಪೊಲೀಸರು ಭಾರಿ ಹುಡುಕಾಟ ನಡೆಸಿದ್ದರು.ಗಜೇಂದ್ರ ಪುಟಾಣಿ ಪವರ್ ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದ ಮತ್ತು ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಡೆಲಿವರಿ ಬಾಯ್
ತಂಗಿಯ ಮದುವೆ ಮಾಡಲು ಮಾಡಿಕೊಂಡಿದ್ದ ಸಾಲವನ್ನು ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಫುಡ್ ಡೆಲಿವರಿ ಬಾಯ್ ವೊಬ್ಬನನ್ನು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಡಿಪಾಳ್ಯದ ನಿವಾಸಿ 32 ವರ್ಷದ ಸಂಜೀವ್ ಕುಮಾರ್ ಬಂಧಿತ ಆರೋಪಿ.
ಈತ ಕಳವುಮಾಡಿದ್ದ 7 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಗ್ರಾಮದ ಸಂಜೀವ್ ಪತ್ನಿ ಜೊತೆ ಕೋಡಿಪಾಳ್ಯದಲ್ಲಿ ನೆಲೆಸಿದ್ದ. ಜೀವನ ನಿರ್ವಹಣೆಗೆ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ವರ್ಷದ ಹಿಂದೆ 5 ಲಕ್ಷ ರೂ. ಸಾಲ ಮಾಡಿ ಸಹೋದರಿಯ ವಿವಾಹ ಮಾಡಿದ್ದ. ಆದರೆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಆದ್ದರಿಂದ ಸರ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೋಡಿಪಾಳ್ಯದಲ್ಲಿ ಮಹಿಳೆಯೊಬ್ಬರು ತಮ್ಮ ಪುತ್ರಿಯನ್ನು ಶಾಲಾ ಬಸ್‌ಗೆ ಹತ್ತಿಸಿ ಮರಳುತ್ತಿರುವಾಗ ಸಂಜೀವ್ ಆಕೆಯ ಸರ ಕಸಿದುಕೊಂಡು ಪರಾರಿಯಾಗಿದ್ದ. ಮಹಿಳೆ ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಕೆಂಗೇರಿ, ಕುಂಬಳಗೋಡು ಮತ್ತು ಆರ್. ಆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಡಿದ್ದ 3 ಸರ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.