ಕನ್ನಡ ಸುದ್ದಿ  /  Karnataka  /  Bengaluru News Pro Pakistan Slogan Bail Granted For Accused Murder Of A Foreign Woman And Other Crime News Mrt

Bengaluru Crime: ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ, ಆರೋಪಿಗಳಿಗೆ ಜಾಮೀನು; ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆ ಕೊಲೆ

Bengaluru Crime: ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇನ್ನೊಂದು ಪ್ರಕರಣದಲ್ಲಿ ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆ ಕೊಲೆಯಾಗಿದೆ. ಲಂಚಕ್ಕೆ ಬೇಡಿಕೆ ಇನ್‌ಸ್ಪೆಕ್ಟರ್ ಮತ್ತು ಪಿಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ಎಲ್ಲ ಸುದ್ದಿಗಳ ರೌಂಡ್‌ ಅಪ್‌ ಇಲ್ಲಿದೆ. (ವರದಿ- ಎಚ್. ಮಾರುತಿ,ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ನಗರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್ (ಎಸಿಎಂಎಂ) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಬಂಧಿತ ಆರೋಪಿಗಳಾದ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ದೆಹಲಿಯ ಕಿಶನ್‌ ಗಂಜ್‌ನ ಮೊಹಮ್ಮದ್ ಇಲ್ತಾಜ್ ಮತ್ತು ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌.ಮುನಾವರ್ ಅಹ್ಮದ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಇವರ ಜಾಮೀನು ಅರ್ಜಿಯನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ.ವಿಜೇತ್‌ ಅಂಗೀಕರಿಸಿದ್ದಾರೆ.

ಆರೋಪಿಗಳು ರೂ. 1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು ಮತ್ತು ಆರೋಪಿಗಳು ದೇಶ ಬಿಟ್ಟು ಹೋಗಬಾರದು, ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು ಮತ್ತು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಕೂಡದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಮಂಡಿಸಿದ, ಪೊಲೀಸರು ಪ್ರಕರಣ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆದಿಲ್ಲ. ಆರೋಪಿಗಳಿಗೆ ಸಿಆರ್‌ಪಿಸಿ ಕಲಂ 41ರ ಅನ್ವಯ ನೋಟಿಸ್‌ ನೀಡಿಲ್ಲ. ಹಾಗೆಯೇ ಆರೋಪಿತರ ಘೋಷಣೆಯ ಮಾದರಿಯನ್ನು ಧ್ವನಿ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಗಾಗಿ ಇದು ಮೇಲ್ನೋಟಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣ ಎನ್ನುವುದು ಸಾಬೀತಾಗುತ್ತದೆ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಫೆಬ್ರವರಿ 27ರಂದು ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಗೆ ಮತದಾನ ನಡೆದಿತ್ತು. ಫಲಿತಾಂಶ ಪ್ರಕಟವಾದ ನಂತರ ನಡೆದ ವಿಜಯೋತ್ಸವದಲ್ಲಿ ಜಯಗಳಿಸಿದ ಅಭ್ಯರ್ಥಿ ನಾಸಿರ್‌ ಹುಸೇನ್‌ ಪರವಾಗಿ ಆಗಮಿಸಿದ್ದ ಆರೋಪಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂದು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಲಂಚಕ್ಕೆ ಬೇಡಿಕೆ ಇನ್‌ಸ್ಪೆಕ್ಟರ್ ಮತ್ತು ಪಿಎಸ್‌ಐ ಲೋಕಾಯುಕ್ತ ಬಲೆಗೆ

ವಂಚನೆ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ ಆರೋಪಿಯನ್ನು ಬಿಡುಗಡೆ ಮಾಡಲು ರೂ. 3 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿಯಲ್ಲಿ ಕೆ.ಆರ್.ಪುರ ಠಾಣೆಯ ಇನ್‌ಸ್ಪೆಕ್ಟರ್ ಕೆ. ವಜ್ರಮುನಿ ಹಾಗೂ ಪಿಎಸ್‌ಐ ಎನ್‌. ರಮ್ಯಾ ಲೋಕಾಯಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆಆರ್‌ ಪುರ ಪೊಲೀಸ್ ಠಾಣೆಯಲ್ಲಿ ಈ ವಂಚನೆಗೆ ಸಂಬಂಧಿಸಿ ಇತ್ತೀಚೆಗೆ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಆರೋಪಿ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಇದರ ವಿಚಾರಣೆ ಬಾಕಿ ಇದೆ. ಹೀಗಿರುವಾಗಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದರೆಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಠಾಣೆಯಿಂದ ಆರೋಪಿಯನ್ನು ಬಿಟ್ಟು ಕಳುಹಿಸಲು 3 ಲಕ್ಷ ರೂಪಾಯಿ ನೀಡುವಂತೆ ಪಿಎಸ್‌ಐ ಮೂಲಕ ಇನ್‌ಸ್ಪೆಕ್ಟರ್ ಬೇಡಿಕೆ ಇಟ್ಟಿದ್ದರು. ಇದು ಗೊತ್ತಾಗುತ್ತಿದ್ದಂತೆ ಆರೋಪಿ ಪರ ವಕೀಲ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮಹಿಳಾ ಪಿಎಸ್‌ಐ ರಮ್ಯಾ ಹಾಗೂ ಇನ್‌ಸ್ಪೆಕ್ಟರ್ ವಜ್ರಮುನಿ ಅವರು ತಲಾ 50 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಈ 50 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ದಾಳಿ ಮಾಡಲಾಗಿದೆ. ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರವಾಸಕ್ಕೆ ಆಗಮಿಸಿದ್ದ ವಿದೇಶಿ ಮಹಿಳೆ ಕೊಲೆ

ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಆಗಮಿಸಿದ್ದ ವಿದೇಶಿ ಮಹಿಳೆ ಜರೀನಾ ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಉಜ್ಬೇಕಿಸ್ತಾನ್‌ನ ಜರೀನಾ, ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪಂಚತಾರಾ ಹೋಟೆಲ್‌ ನಲ್ಲಿ ಆನ್‌ಲೈನ್ ಮೂಲಕ ರೂಂ ಕಾಯ್ದಿರಿಸಿ ಉಳಿದುಕೊಂಡಿದ್ದರು. ಇವರ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಶೇಷಾದ್ರಿಪುರ ಪೊಲೀಸ್ ಠಾಣೆ ಪೊಲೀಸರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ಮಹಿಳೆ, ಒಂಟಿಯಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ನಗರದ ಪ್ರವಾಸ ಮುಗಿಸಿ, ಸಂಜೆ ವೇಳೆಗೆ ತಮ್ಮ ರೂಮ್‌ಗೆ ಹಿಂತಿರುಗುತ್ತಿದ್ದರು. ಆದರೆ, ಈ ಮಹಿಳೆ ಬುಧವಾರ ಬೆಳಿಗ್ಗೆ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೂ ಮಹಿಳೆ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಹೋಟೆಲ್ ಸಿಬ್ಬಂದಿ, ಬೆಲ್ ಮಾಡಿದ್ದಾಗಲೂ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಹೋಟೆಲ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಬುಧವಾರ ತಡರಾತ್ರಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು, ಕೊಠಡಿಗೆ ನುಗ್ಗಿ ಇವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಜರೀನಾ ಅವರನ್ನು ಉಸಿರುಗಟ್ಟಿಸಿ ಕೊಂದು ಪರಾರಿಯಾಗಿರಬಹುದು ಎಂಬ ಅನುಮಾನವಿದೆ. ಆರೋಪಿಗಳು ಹೊರಗಿನಿಂದ ಬಾಗಿಲು ಲಾಕ್‌ ಮಾಡಿಕೊಂಡು ಪರಾರಿಯಾಗಿದ್ದಾರೆ. ಹೋಟೆಲ್‌ ನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಸಂದರ್ಶಕರ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)