ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ, ಕನ್ನಡಿಗರಿಗೂ ಅವಮಾನ
ರಾಮನಗರದ ಬಿಡದಿ ಬಳಿ ಇರುವ ಪ್ರತಿಷ್ಠಿತ ಕಂಪನಿಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಘೋಷಣೆ ಬರೆದಿರುವುದು ಮಾತ್ರವಲ್ಲ ಕನ್ನಡಿಗರನ್ನು ನಿಂದಿಸಿಲಾಗಿದೆ. ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದು ಇನ್ನೂ ಬಯಲಾಗಿಲ್ಲ. ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ.

ಬೆಂಗಳೂರು: ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಪರ ಘೋಷಣೆಗಳು ಬರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯವನ್ನು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪಾಕಿಸ್ತಾನ ಪರ ಘೋಷಣೆ ಬರೆದಿರುವ ಜೊತೆಗೆ ಕನ್ನಡಿಗರನ್ನೂ ನಿಂದಿಸಿದ್ದಾರೆ. ಇದು ಆಗ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ ಈ ವಿಚಾರ ಸದನದಲ್ಲೂ ಚರ್ಚೆಯಾಗಿದೆ. ಕೃತ್ಯಕ್ಕೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿದ ಕಂಪನಿ, ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನಕ್ಕೆ ಜೈ ಎಂಬ ಬರಹ
‘ಪಾಕಿಸ್ತಾನಕ್ಕೆ ಜೈ‘ ಎಂದು ಬರೆದಿರುವ ಜೊತೆಗೆ ಅವಾಚ್ಯ ಶಬ್ದಗಳಿಂದ ಕನ್ನಡಿಗರನ್ನು ನಿಂದಿಸಿದ್ದಾರೆ. ಇದನ್ನು ಯಾರು ಯಾವಾಗ ಬರೆದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಿಡದಿಯ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಬರೆದಿರುವ ಈ ಕೃತ್ಯವು ಮಾರ್ಚ್ 15 ರಂದು ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಂಪನಿಯು ಸುತ್ತೋಲೆ ಹೊರಡಿಸಿದ್ದು, ಈ ಕೃತ್ಯವನ್ನು ಯಾರೇ ಮಾಡಿದ್ದಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
‘ಈ ರೀತಿಯ ಬರವಣಿಗೆಗಳು ಅಶಾಂತಿ ಸೃಷ್ಟಿಸುವ ಜೊತೆಗೆ ಸಂಸ್ಥೆಯಲ್ಲಿ ತೀವ್ರ ಆಶಿಸ್ತಿನ ಬೆಳವಣೆಗೆಗೂ ಕಾರಣವಾಗುತ್ತದೆ. ಈ ರೀತಿಯ ಬರವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ ದೇಶದ್ರೋಹಿ ಅಪರಾಧಗಳಡಿ ಬರುತ್ತದೆ. ಈ ರೀತಿ ಕೃತ್ಯಗಳು ಮುಂದುವರಿದರೆ ಪೊಲೀಸರ ಗಮನಕ್ಕೆ ತಂದು ಘಟನೆಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲಾಗುವುದು. ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ಗಮನಕ್ಕೆ ತಂದು ಈ ಕೃತ್ಯ ಎಸಗಿದವರನ್ನು ಕಂಡುಹಿಡಿದು ಕಠಿಣ ಶಿಕ್ಷೆ ಕೊಡಿಸಲಾಗುವುದು ಎಂದು ಆಡಳಿತ ಮಂಡಳಿಯು ಎಚ್ಚರಿಸುವ ಮೂಲಕ ಸುತ್ತೋಲೆ ಹೊರಡಿಸಿದೆ.
