Punjab CM Bhagwant Mann: ಕರ್ನಾಟಕ ರಾಜ್ಯಕ್ಕೆ ಹೊಸ ಇಂಜಿನ್ ಸರ್ಕಾರದ ಅವಶ್ಯಕತೆಯಿದೆ; ಬೆಂಗಳೂರಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್
Bhagwant Mann in Bengaluru: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್ ರಾಥೋಡ್ ಪರ ಭರ್ಜರಿ ರೋಡ್ ಶೋ ನಡೆಸಿದರು.
ಬೆಂಗಳೂರು: ಕರ್ನಾಟಕ ರಾಜ್ಯದ ಜನರು ಡಬಲ್ ಇಂಜಿನ್ ಸರ್ಕಾರದ (Double Engine Govt) ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸುವ ಶಾಸಕರು ಚುನಾವಣೆಯ ನಂತರ ತಮ್ಮನ್ನ ಮಾರಿಕೊಳ್ಳುವ ಪರಿಪಾಠವನ್ನು ಬೆಳಸಿಕೊಂಡಿದ್ದಾರೆ. ಆದ್ದರಿಂದ, ಕರ್ನಾಟಕ ರಾಜ್ಯಕ್ಕೆ ಶುದ್ದ ಆಡಳಿತ ನೀಡುವ ಹೊಸ ಇಂಜಿನ್ ಸರಕಾರದ ಅವಶ್ಯಕತೆ ಹೆಚ್ಚಾಗಿದ್ದು, ಆಮ್ ಆದ್ಮಿ ಪಕ್ಷವನ್ನು (Aam Aadmi Party) ಬೆಂಬಲಿಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Punjab CM Bhagwant Mann) ಅವರು ಹೇಳಿದರು.
ಇಂದು ( ಏ 20, ಭಾನುವಾರ) ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್ ರಾಥೋಡ್ ಪರ ಭರ್ಜರಿ ರೋಡ್ ಶೋ ನಡೆಸಿ ಮಾತಾನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು. 20 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಕಿತ್ತೊಗೆದ ಡಬಲ್ ಇಂಜಿನ್ ಬಿಜೆಪಿ ಸರಕಾರ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣವನ್ನು ಡಬಲ್ ಮಾಡಿದೆ. ಇಂತಹ ದುರಾಡಳಿತದ ವಿರುದ್ದ ಜನರು ದೆಹಲಿ ಹಾಗೂ ಪಂಜಾಬ್‌ನಲ್ಲಿ ಮತ ನೀಡಿದ್ದಾರೆ. ಈ ಮೂಲಕ ಅತ್ಯುತ್ತಮ ಭ್ರಷ್ಟಾಚಾರ ರಹಿತ ಆಡಳಿತವನ್ನು ಕಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಶುದ್ದ ಆಡಳಿತ ನೀಡಲು ಆಪ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಕಚೇರಿಯ ಮುಂದೆ ಶಾಸಕರ ಎಕ್ಸಚೇಂಜ್ ಕೇಂದ್ರ ಎಂದು ಬೋರ್ಡ್ ಹಾಕುವ ಸಂದರ್ಭ ಬಂದಿದೆ. ದೇಶದಾದ್ಯಂತ ಕಾಂಗ್ರೆಸ್ ನಿಂದ ಗೆಲವು ಸಾಧಿಸುವ ಶಾಸಕರು ಚುನಾವಣೆಯ ನಂತರ ತಮ್ಮನ್ನು ತಾವು ಮಾರಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಪುಲಕೇಶಿನಗರದ ಜನರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಸುರೇಶ್ ರಾಥೋಡ್ ರನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.
ಜನತೆ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಇದೆ. ಶೂನ್ಯ ಕಮಿಷನ್ ಸರ್ಕಾರ ಬಂದಲ್ಲಿ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದ್ದು ದೇಶ ಅಭಿವೃದ್ಧಿ ಪಥದೊಡೆಗೆ ಸಾಗಬೇಕೆಂದರೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸ ಬೇಕಾದ್ದು ಅನಿವಾರ್ಯ ಎಂದು ಹೇಳಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಶ್ ರಾಥೋಡ್ ಮಾತನಾಡಿ, ಪುಲಕೇಶಿನಗರದ ಜನರು ಹಿಂದಿನ ಶಾಸಕರುಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ಅಭಿವೃದ್ದಿ ಪರ ಒಲವನ್ನು ತೋರಿದ್ದು, ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಟ್ಯಾನರಿ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ವಿಧಾನಸಭಾಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿತು. ರೋಡ್ ಶೋ ನಲ್ಲಿ ಸಾವಿರಾರು ಜನರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.