ಮಳೆಗಾಲದಲ್ಲಿ ಜಲಾವೃತವಾಗುವ ಬೆಂಗಳೂರಿನ ಪ್ರಮುಖ 5 ಪ್ರದೇಶಗಳು; ಹನುಮನ ಬಾಲದಂತಿವೆ ಸಮಸ್ಯೆಗಳು ಪಟ್ಟಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಳೆಗಾಲದಲ್ಲಿ ಜಲಾವೃತವಾಗುವ ಬೆಂಗಳೂರಿನ ಪ್ರಮುಖ 5 ಪ್ರದೇಶಗಳು; ಹನುಮನ ಬಾಲದಂತಿವೆ ಸಮಸ್ಯೆಗಳು ಪಟ್ಟಿ

ಮಳೆಗಾಲದಲ್ಲಿ ಜಲಾವೃತವಾಗುವ ಬೆಂಗಳೂರಿನ ಪ್ರಮುಖ 5 ಪ್ರದೇಶಗಳು; ಹನುಮನ ಬಾಲದಂತಿವೆ ಸಮಸ್ಯೆಗಳು ಪಟ್ಟಿ

Bengaluru Rains: ಮಳೆಗಾಲ ಬಂದಾಗ ಬೆಂಗಳೂರಿನ ಈ ಭಾಗಗಳ ಪರಿಸ್ಥಿತಿ ಏಗಿರುತ್ತದೆ? ಸಿಲಿಕಾನ್​ ಸಿಟಿಯಲ್ಲಿ ಜಲಾವೃತಗೊಳ್ಳುವ ಪ್ರದೇಶಗಳ ಪರಿಸ್ಥಿತಿ ಹೇಗಿರುತ್ತದೆ? ನೋಡೋಣ ಬನ್ನಿ. (ವರದಿ: ಎಚ್.ಮಾರುತಿ)

ಮಳೆಗಾಲದಲ್ಲಿ ಜಲಾವೃತವಾಗುವ ಬೆಂಗಳೂರಿನ ಪ್ರಮುಖ 5 ಪ್ರದೇಶಗಳು; ಹನುಮನ ಬಾಲದಂತಿವೆ ಸಮಸ್ಯೆಗಳು ಪಟ್ಟಿ
ಮಳೆಗಾಲದಲ್ಲಿ ಜಲಾವೃತವಾಗುವ ಬೆಂಗಳೂರಿನ ಪ್ರಮುಖ 5 ಪ್ರದೇಶಗಳು; ಹನುಮನ ಬಾಲದಂತಿವೆ ಸಮಸ್ಯೆಗಳು ಪಟ್ಟಿ

ಬೆಂಗಳೂರು: ರಾಜ್ಯ ರಾಜಧಾನಿ, ನಿವೃತ್ತರ ಸ್ವರ್ಗ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಮಳೆಗಾಲ ಅರಂಭವಾಯಿತೆಂದರೆ ನಾಲ್ಕೂ ದಿಕ್ಕಿನ ಅನೇಕ ಭಾಗಗಳು ಜಲಾವೃತಗೊಳ್ಳುತ್ತವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಅನುಭವಿಸುವ ಯಾತನೆ ಅಪಾರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಜಲಾವೃತದಿಂದ ಉಂಟಾಗುವ ಸಂಚಾರ ದಟ್ಟಣೆ ಕುಖ್ಯಾತಿ ಪಡೆದಿದೆ.

ಪ್ರತಿ ಮಳೆಗಾಲದಲ್ಲೂ ಸಾರ್ವಜನಿಕರು ಈ ಸಮಸ್ಯೆ ಬಗಹರಿಸುವಂತೆ ದಶಕಗಳಿಂದ ಬೇಡಿಕೊಳ್ಳುತ್ತಲೇ ಇದ್ದಾರೆ. ಎಲ್ಲ ಸರ್ಕಾರಗಳೂ ಇಂದು, ನಾಳೆ ಎಂದು ಭರವಸೆ ನೀಡುತ್ತಾ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತವೆ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತದೆ. ಆಡಳಿತ ಪಕ್ಷ ವಿಪಕ್ಷದ ಸಾಲಿನಲ್ಲಿ ಕುಳಿತಾಗ ಮಾತ್ರ ಸಮಸ್ಯೆಯ ಬಗ್ಗೆ ಎಲ್ಲಿಲ್ಲದ ಮೊಸಳೆ ಕಣ್ಣೀರು ಸುರಿಸುತ್ತದೆ.

ಈ ವರ್ಷ ಬೆಂಗಳೂರನ್ನು ಡೆಂಗ್ಯೂ ಕಾಡುತ್ತಿದೆ. ಜಲಾವೃತಗೊಂಸಡು ನೀರು ನಿಲ್ಲುವುದರಿಂದ ಡೆಂಗ್ಯೂ ಸುಲಭವಾಗಿ ಹರಡುತ್ತದೆ. ಹಾಗಾದರೆ ಬೆಂಗಳೂರಿನಲ್ಲಿ ಜಲಾವೃತಗೊಳ್ಳುವ ಪ್ರಮುಖ ಪ್ರದೇಶಗಳು ಯಾವುವು ಎಂದು ನೋಡೋಣ

ಮಾರತ್‌ ಹಳ್ಳಿ-ಬೆಳ್ಳಂದೂರು ವಿಭಾಗ

ನಗರದ ಹೊರ ವರ್ತುಲ ರಸ್ತೆಯ ಸಮಸ್ಯೆಗಳು ಹನುಮಂತನ ಬಾಲದ ಹಾಗೆ. ಕುಡಿಯುವ ನೀರು ಒಳ ಚರಂಡಿ ಸೇರಿದಂತೆ ಸಂಚಾರ ದಟ್ಟಣೆವರೆಗೆ ಎಲ್ಲ ಸಮಸ್ಯೆಗಳೂ ಇಲ್ಲಿ ಮೇಳೈಸಿವೆ. ಈ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆ ಬಂದರೂ ಸಾರ್ವಜನಿಕರು ಬೆಟ್ಟದಷ್ಟು ಗಾತ್ರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರತಿ ಮಳೆಗೂ ಇಲ್ಲಿನ ಕಾಡುಬೀಸನಹಳ್ಳಿ ಅಂಡರ್‌ ಪಾಸ್​ನಲ್ಲಿ ಮೊಣಕಾಲು ಉದ್ದ ನೀರು ನಿಂತುಕೊಂಡು ಸಾರ್ವಜನಿಕರಿಗೆ ವಾಹನ ಸವಾರರಿಗೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ.

ಬೆಳತ್ತೂರು-ಕಾಡುಗೋಡಿ ವಿಭಾಗ

ಈ ಭಾಗದಲ್ಲಿ ಮಳೆಯಾದಾಗಲೆಲ್ಲಾ ಸಾರ್ವಜನಿಕರು ಮತ್ತು ವಾಹನ ಸವಾರರು ನರಕ ಯಾತನೆ ಅನುಭವಿಸಿದ ಅನುಭವ ಪಡೆಯುವುದಂತೂ ಸುಳ್ಳಲ್ಲ. ಸಾರ್ವಜನಿಕ ಸ್ನೇಹಿ ಅಲ್ಲದೆ ಮೂಲಭೂತ ಸೌಕರ್ಯಗಳು ಜನರನ್ನು ಹೈರಾಣಾಗಿಸಿವೆ. ಅದೇಕೋ ಈ ಭಾಗ ಸರ್ಕಾರದ ಅವಕೃಪೆಗೆ ಪಾತ್ರವಾಗಿದ್ದು, ಜನರು ಮಾತ್ರ ಹಿಡಿಶಾಪ ಹಾಕುವುದು ನಿಂತಿಲ್ಲ.

ಕೋರಮಂಗಲ

ದೇಶದ ಮಾಹಿತಿ ತಂತ್ರಜ್ಞಾನ ಹಬ್‌ ಎಂದೇ ಖ್ಯಾತಿ ಪಡೆದಿರುವ ಕೋರಮಂಗಲದಲ್ಲಿ ಅನೇಕ ಸ್ಟಾರ್ಟ್‌ ಅಪ್‌ ಗಳು ತಲೆ ಎತ್ತಿವೆ. ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿವೆ. ಆದರೆ ಒಮ್ಮೆ ಮಳೆ ಬಂತೆಂದರೆ ಜನ ಮಿಸುಕಾಡುವ ಹಾಗಿಲ್ಲ. ದಿನದ 24 ಗಂಟೆ ಕಾಲವೂ ಜನಜಂಗುಳಿ ಇರುವ ಈ ಪ್ರದೇಶ ಮಳೆ ಬಂತೆಂದರೆ ಸ್ತಬ್ಧವಾಗಿ ಬಿಡುತ್ತದೆ.

ಯಮಲೂರು

ಎ‌ಚ್​​ಎಎಲ್‌ ಮತ್ತು ಇಂದಿರಾನಗರ ಮಧ್ಯೆ ಇರುವ ಯಮಲೂರಿನಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಬಹುತೇಕ ಐಟಿ ಉದ್ಯೋಗಿಗಳು ಮನೆ ಮಾಡಿಕೊಂಡು ನೆಲೆಸಿರುವ ತಾಣ ಇದು. ಆದರೂ ಮಳೆಗಾಲ ಬಂದಾಗ ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಗೂ ಮೋರಿಗೂ ವ್ಯತ್ಯಾಸವೇ ಇರುವುದಿಲ್ಲ.‌ ಇಲ್ಲಿನ ನಿವಾಸಿಗಳ ಪರಿಸ್ಥಿತಿ ಹೇಗಿರಬೇಡ ನೀವೇ ಊಹಿಸಿ.

ಕೊಡಿಗೆಹಳ್ಳಿ-ಹೆಬ್ಬಾಳ-ನಾಗಾವಾರ ರಸ್ತೆ

ಬೆಂಗಳೂರು ಉತ್ತರ ಭಾಗದ ಈ ಭಾಗದಲ್ಲಿ ನಾಗರಿಕ ಸಮಸ್ಯೆಗಳು ಅಪಾರ. ಏನಿಲ್ಲ ಎಂದು ಪಟ್ಟಿ ಮಾಡುವುದಕ್ಕಿಂತ ಏನಿದೆ ಎಂದು ಪಟ್ಟಿ ಮಾಡುವುದು ಸುಲಭ ಎನ್ನುವಷ್ಟು ಅವ್ಯವಸ್ಥೆಯ ಆಗರವಾಗಿದೆ. ಹಲವು ಜಿಲ್ಲೆಗಳ ಭಾಗದ ಜನರು ಈ ಭಾಗದ ಮೂಲಕವೇ ಬೆಂಗಳೂರು ಪ್ರವೇಶಿಸಬೇಕು. ಆದರೆ ಮಳೆ ಬಂದಾಗ ಮಾತ್ರ ಸಂಚಾರ ಕಷ್ಟ ಸಾಧ್ಯ. ಮಳೆ ಇಲ್ಲದಾಗಲೇ ಈ ಭಾಗದಲ್ಲಿ ಇರುವೆಗಳಂತೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.

ಮಳೆ ಬಂದಾಗ ವಿಮಾನ ನಿಲ್ದಾಣಕ್ಕೆ ಹೋಗುವವರ ಪರಿಸ್ಥಿತಿ ಅನುಭವಿಸಿದವರಿಗೆ ಮಾತ್ರ ಗೊತ್ತು. ನಿಜ ಹೇಳಬೇಕೆಂದರೆ ಕ್ಯಾಬ್‌ ಚಾಲಕರು ರಸ್ತೆಯಲ್ಲಿ ನೀರು ಕಡಿಮೆ ಆಗುವವರೆಗೂ ವಾಹನಗಳನ್ನು ಪಕ್ಕಕ್ಕೆ ನಿಲ್ಲಿಸಿ ಬಿಡುತ್ತಾರೆ. ಪರಿಹಾರ ಸಾಧ್ಯವೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪರಿಹಾರ ರೂಪಿಸಲು ಸಾಧ್ಯವಾಗುತ್ತಿಲ್ಲ.

(ವರದಿ: ಎಚ್.ಮಾರುತಿ)

Whats_app_banner