ರಾಜಾಕಾಲುವೆ ಒತ್ತುವರಿ ಕೇಸ್‌ಗೆ ಮರುಜೀವ, ದರ್ಶನ್ ಮನೆ ತೂಗುದೀಪಕ್ಕೂ ಸಂಚಕಾರ ಸಾಧ್ಯತೆ, ತೂಗುಯ್ಯಾಲೆಯಲ್ಲಿದೆ 67 ಕಟ್ಟಡಗಳ ಭವಿಷ್ಯ
ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನದಲ್ಲಿರುವ ನಟ ದರ್ಶನ್ ಅವರ ಮನೆ ತೂಗುದೀಪಕ್ಕೂ ಸಂಚಕಾರ ಉಂಟಾಗುವ ಲಕ್ಷಣ ಗೋಚರಿಸಿದೆ. ರಾಜಕಾಲುವೆ ಮೇಲೆ ನಿರ್ಮಿಸಿರುವ ಅವರ ನಿವಾಸವನ್ನು ತೆರವುಗೊಳಿಸುವ ಕಡತಕ್ಕೆ ಮರುಜೀವ ನೀಡಲು ಬಿಬಿಎಂಪಿ ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಹಿಂಸೆ ಮತ್ತು ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಾತ್ರ ಸಂಕಷ್ಟ ಬಂದಿಲ್ಲ, ಅವರು ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಬಂಗಲೆಗೂ ಸಂಚಕಾರ ಬಂದಿರುವ ಹಾಗಿದೆ. ಅಂತಹುದೊಂದು ಸುದ್ದಿ ವಿಧಾನಸೌಧ, ಬಿಬಿಎಂಪಿ ಪಡಶಾಲೆಗಳಲ್ಲಿ ಹರಿದಾಡುತ್ತಿದೆ.
ಬೆಂಗಳೂರಿನಲ್ಲಿ 2016ರ ಬೃಹತ್ ಮಳೆಗೆ ನೀರು ಬಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸರಕಾರ ಮತ್ತು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ತೀರ್ಮಾನಿಸಿದ್ದವು.
ರಾಜಾಕಾಲುವೆ ಒತ್ತುವರಿ ಮಾಡಿಕೊಂಡ 67 ಕಟ್ಟಡಗಳು
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಹಣ ಮತ್ತು ಅಧಿಕಾರದ ಪ್ರಭಾವದಿಂದಾಗಿ ಇವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಉಳಿಸಿಕೊಂಡಿದ್ದರು. ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರಲು ಇವರಿಗೆ ಸರಕಾರವೇ ಪರೋಕ್ಷವಾಗಿ ನೆರವಾಗಿತ್ತು. ಇವರು ತಡೆಯಾಜ್ಞೆ ತಂದು 8 ವರ್ಷಗಳಾಗಿದ್ದು ಇದುವರೆಗೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಇದೀಗ ಬಿಬಿಎಂಪಿ ದರ್ಶನ್ ಸೇರಿದಂತೆ ಅನೇಕ ಮಂದಿ ಹೈಕೋರ್ಟ್ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ. ಇದುವರೆಗೂ ತಡೆಯಾಜ್ಞೆ ನೀಡಿದ್ದ ಅವಧಿ ಎಷ್ಟು ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಮತ್ತೆ ಪರಿಶೀಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಬಿಬಿಎಂಪಿ ಪ್ರಯತ್ನ ನಡೆಸಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ತಡೆಯಾಜ್ಞೆ ತಂದಿದ್ದ ದರ್ಶನ್ ತೂಗುದೀಪ
2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಪ್ರಾಥಮಿಕ ಕಾಲುವೆ, ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಕಟ್ಟಡಗಳ ಪಟ್ಟಿ ಮಾಡಿಕೊಂಡಿತ್ತು. ಸರಕಾರದ ಭೂ ದಾಖಲೆಗಳ ಪ್ರಕಾರ ಆರ್ ಆರ್ ನಗರದ ದರ್ಶನ್ ಅವರ ನಿವಾಸ ಪ್ರಾಥಮಿಕ ಕಾಲುವೆಯ ಬಫರ್ ಝೋನ್ ಮೇಲೆ ನಿರ್ಮಿಸಿರುವುದು ಪತ್ತೆಯಾಗಿತ್ತು.
ಐಡಿಯಲ್ ಹೋಮ್ಸ್, ದರ್ಶನ್, ಶಾಮನೂರು ಅವರ ಆಸ್ಪತ್ರೆ ಸೇರಿದಂತೆ 67 ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸರ್ಕಾರ ನೋಟಿಸ್ ನೀಡುತ್ತಿದ್ದಂತೆ ದರ್ಶನ್ ಮತ್ತಿತರರು ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ನಂತರ 2016 ಅಕ್ಟೋಬರ್ ನಲ್ಲಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ಅಲ್ಲಿಗೆ ಮಳೆಗಾಲವೂ ಮುಗಿದಿತ್ತು. ಸರಕಾರ ಮತ್ತು ಸಾರ್ವಜನಿಕರೆಲ್ಲರೂ ಈ ವಿಷಯವನ್ನು ಮರೆತೇ ಬಿಟ್ಟಿದ್ದರು. ಆದರೆ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಇದೇ ರೀತಿ ನಿರ್ಮಿಸಲಾಗಿದ್ದ ಬಡ ಮಧ್ಯಮ ವರ್ಗದ ಜನರ ಮನೆಗಳನ್ನು ನಿರ್ದಾಕ್ಷಿಣಾಗಿ ಕೆಡವಲಾಗಿತ್ತು. ಸರ್ಕಾರದ ಈ ಧೋರಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಂತರದ ವರ್ಷಗಳಲ್ಲಿ ಅತಿಯಾದ ಮಳೆಯೂ ಸುರಿಯಲಿಲ್ಲ. ಕೆಲವು ವರ್ಷ ಬರಗಾಲ ಆವರಿಸಿತ್ತು. ಹಾಗಾಗಿ ಇವರೆಲ್ಲರೂ ಬಚಾವ್ ಆಗಿದ್ದರು.
ಮೂಲಗಳ ಪ್ರಕಾರ ದರ್ಶನ್ ಅವರ ಮನೆ ಪ್ರಾಥಮಿಕ ಕಾಲುವೆಗಳಿಂದ ಕೇವಲ 7 ಅಡಿ ದೂರದಲ್ಲಿ ನಿರ್ಮಿಸಲಾಗಿದೆ. ಕಾನೂನು ಪ್ರಕಾರ ಪ್ರಾಥಮಿಕ ಕಾಲುವೆಯಿಂದ 150 ಮೀಟರ್ ದೂರದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವಂತಿಲ್ಲ. ಆದರೆ ದರ್ಶನ್ ಮತ್ತು ಶಾಮನೂರು ಶಿವಶಂಕರಪ್ಪ ಸರಿದಂತೆ 67 ಮಂದಿ ಈ ರಸ್ತೆಯಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಈ ಕಟ್ಟಡಗಳೆಲ್ಲವೂ ರಾಜಕಾಲುವೆ ಮೇಲೆ ನಿರ್ಮಿಸಿರುವುದು ಸ್ಪಷ್ಟವಾಗಿದ್ದು, ಇದೀಗ ಅಂತಹ ಕಟ್ಟಡಗಳನ್ನು ಸರಕಾರ ತೆರವುಗೊಳಿಸಲು ಮುಂದಾಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುವದೇ ಎಂದು ಕಾದು ನೋಡಬೇಕಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.