ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ರೋಚಕ ತಿರುವು; ಮತ್ತೊಬ್ಬ ಶಂಕಿತ ಉಗ್ರನ ಬಂಧನ -Rameshwaram Cafe Blast
ಮಾರ್ಚ್ 1 ರಂದು ಬೆಂಗಳೂರಿನ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಎನ್‌ಐಎ ಬಂಧಿಸಿದೆ.
ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ (Rameshwaram Cafe Blast Case) ರೋಚಕ ತಿರುವು ಸಿಕ್ಕಿದ್ದು, ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಡಿಯಲ್ಲಿ 26 ವರ್ಷದ ಮಾಝ್ ಮುನೀರ್ ಅಹಮದ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ. ಎಂಜಿನಿಯರಿಂಗ್ ಪದವೀಧರನಾದ ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಫಿಶ್ ಮಾರ್ಕೆಟ್ ರಸ್ತೆಯ ನಿವಾಸಿ. ಈತ ಕಚ್ಚಾ ಬಾಂಬ್ (ಐಇಡಿ) ತಯಾರಿಸುವಲ್ಲಿ ಪರಿಣಿತಿ ಹೊಂದಿದ್ದು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಲು ಸಹಾಯ ಮಾಡಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಈ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಚಿಕ್ಕಮಗಳೂರಿನ ಶಂಕಿತ ಮುಜಮೀಲ್ ಶರೀಫ್ ನೀಡಿದ ಮಾಹಿತಿಯನ್ನು ಆಧರಿಸಿ ಮಾಝ್ ನನ್ನು ಬಂಧಿಸಲಾಗಿದೆ.
ಮಾಝ್ ಮುನೀರ್ ಹಳೆಯ ಆರೋಪಿ
ಮಂಗಳೂರಿನಲ್ಲಿ ಭಯೋತ್ಪಾದನಾ ಸಂಘಟನೆಗಳ ಪರವಾಗಿ ಗೋಡೆ ಬರಹ ಬರೆದಿದ್ದ ಪ್ರಕರಣದಲ್ಲಿ ಮಾಝ್ ಹೆಸರು ಕೇಳಿ ಬಂದಿತ್ತು. ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಕಚ್ಚಾ ಬಾಂಬ್‌ಗಳನ್ನು ಪರೀಕ್ಷಾರ್ಥವಾಗಿ ಸ್ಫೋಟಿಸಿದ್ದ ಪ್ರಕರಣದಲ್ಲಿಯೂ ಮಾಝ್ ಭಾಗಿಯಾಗಿದ್ದ. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನನ್ನು ಈ ಹಿಂದೆ ಬಂಧಿಸಲಾಗಿತ್ತು. ಸದ್ಯಕ್ಕೆ ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಮಾಝ್‌ನನ್ನು ಎನ್‌ಐಎ ವಶಕ್ಕೆ ಪಡೆದಿತ್ತು. ಆದರೆ ಈತನ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿರಲಿಲ್ಲ. ಆದ್ದರಿಂದ ಈತನನ್ನು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಮರಳಿಸಲಾಗಿತ್ತು. ಕೆಲವು ದಿನಗಳ ಹಿಂದೆ ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ 18 ಸ್ಥಳಗಳಲ್ಲಿ ದಾಳಿ ನಡೆಸಿದಾಗ, ಮುಜಮೀಲ್ ಶರೀಫ್ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಸುಳಿವು ಲಭ್ಯವಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ಈತ ಮಾಝ್ ಮುನೀರ್ ಅಹಮದ್ ಹೆಸರನ್ನು ಪ್ರಸ್ತಾಪಿಸಿದ್ದ. ಮುಜಮೀಲ್ ನೀಡಿದ ಮಾಹಿತಿ ಮತ್ತು ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಮಾಝ್‌ನನ್ನು ಮತ್ತೆ ಬಂಧಿಸಲಾಗಿದೆ.
ಮಾಝ್ ಮತ್ತಿತರ ಶಂಕಿತ ಆರೋಪಿಗಳು ಚರ್ಚೆ ನಡೆಸಲು ಮೊಬೈಲ್ ಬಳಸುತ್ತಿರಲಿಲ್ಲ. ಬದಲಾಗಿ ಆಪ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಂ ಯುವಕರನ್ನು ಸಂಪರ್ಕಿಸಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪ್ರೇರೇಪಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮಾಝ್ ಮೊದಲ ಆರೋಪಿ
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ದೂರನ್ನು ದಾಖಲಿಸಿ ಕೊಳ್ಳಲಾಗಿದೆ. ಈ ದೂರಿನನ್ವಯ ಮಾಝ್ ಮುನೀರ್‌ನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ ಎನ್ನಲಾದ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಎರಡನೇ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮೂರನೇ ಆರೋಪಿಯಾಗಿದ್ದರೆ. ಮುಜಮೀಲ್ ಶರೀಫ್ ನಾಲ್ಕನೇ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಈ ಸ್ಫೋಟ ಪ್ರಕರಣದಲ್ಲಿ ಈ ನಾಲ್ವರ ಜೊತೆಗೆ ಇನ್ನಷ್ಟು ಆರೋಪಿಗಳು ಭಾಗಿಯಾಗಿರಬಹುದು ಎಂದು ಎನ್ ಐ ಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಝ್ ಹಾಗೂ ಅಬ್ದುಲ್ ಮಥೀನ್ ಇಬ್ಬರೂ ಕಚ್ಚಾ ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದು, ಇತರರಿಗೂ ತರಬೇತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಮಾಝ್ ಮುನೀರ್ ಅಹ್ಮದ್ ಇಸ್ಲಾಮಿಕ್ ಸ್ಟೇಟ್ (ಐಎಸ್ ) ನ ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ. ಅವರ ನಿರ್ದೇಶನದಂತೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದ್ದ ಮತ್ತು ಇತರರಿಗೆ ಪ್ರೇರೇಪಣೆ ನೀಡುತ್ತಿದ್ದ. ದಿ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಈತನೇ ಮಾಸ್ಟರ್ ಮೈಂಡ್ ಎಂದು ಅಂದಾಜು ಮಾಡಲಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಮೊಹಮ್ಮದ್ ಶಾರೀಕ್ ಹಾಗೂ ಅರಾಫತ್ ಅವರಿಗೆ ತರಬೇತಿ ನೀಡಿರುವ ಮಾಹಿತಿ ಲಭ್ಯವಾಗಿದೆ. ಮಾಝ್ ಬಂಧನದ ನಂತರ ಅವರ ತಂದೆ ಮಾನಸಿಕವಾಗಿ ನೊಂದಿದ್ದರು. ಮಗನ ಮೇಲಿನ ಆರೋಪಗಳಿಂದ ನೊಂದು ಆತನ ತಂದೆ ಮುನೀರ್ ಅಹಮದ್ ಹೃದಯಾಘಾತದಿಂದ ಮೃತಪಟ್ಟಿದ್ದರು.