ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಬಂಧನ; ಮುಂದುವರಿದ ತನಿಖೆ -Rameshwaram Cafe Blast
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಬಂಧನ; ಮುಂದುವರಿದ ತನಿಖೆ -Rameshwaram Cafe Blast

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಬಂಧನ; ಮುಂದುವರಿದ ತನಿಖೆ -Rameshwaram Cafe Blast

Rameshwaram Cafe Blast: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಸ್ಫೋಟ ಸಂಭವಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ಆರೋಪಿಯನ್ನ ಬಂಧಿಸಿರುವ ವರದಿಯಾಗಿದೆ.
ಸ್ಫೋಟ ಸಂಭವಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ಆರೋಪಿಯನ್ನ ಬಂಧಿಸಿರುವ ವರದಿಯಾಗಿದೆ. (HT)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶಂಕಿತ ಆರೋಪಿ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು ವಶಕ್ಕೆ ಪಡೆದಿದೆ. 26 ವರ್ಷದ ಈತನ ವಿಚಾರಣೆಯನ್ನು ಎನ್‌ಐಎ ತೀವ್ರಗೊಳಿಸಿದೆ. ಬಳ್ಳಾರಿ ನಗರದ ಕೌಲ್ ಬಜಾರ್‌ ನಿವಾಸಿ ಮಿನಾಜ್‌, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ ಎಂದು ತಿಳಿದು ಬಂದಿದ್ದು, ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ. ಈತ ಬೆಂಗಳೂರು ಸೇರಿದಂತೆ ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಈ ಹಿಂದೆ 2023ರ ಡಿಸೆಂಬರ್ 18ರಂದು ಮಿನಾಜ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಈತನನ್ನು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕುರಿತು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದ ಎನ್‌ಐಎ ಅಧಿಕಾರಿಗಳು, ಮಿನಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಲಭ್ಯವಾದ ಮಾಹಿತಿ ಆಧಾರದಲ್ಲಿ, ಮಿನಾಜ್‌ನನ್ನು ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.

ಎನ್‌ಐಎ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಮಿನಾಜ್‌ನನ್ನು ಮಾರ್ಚ್ 9ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಮಾರ್ಚ್ 6 ಬುಧವಾರದಂದೇ ಮಿನಾಜ್‌ನನ್ನು ಕಸ್ಟಡಿಗೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟದಲ್ಲಿ ಈತನ ಪಾತ್ರವೇನು ಬಾಂಬ್‌ ಇಟ್ಟವನಿಗೂ ಈತನಿಗೂ ಸಂಬಂಧ ಇರಬಹುದೇ ‌ಎನ್ನುವುದು ವಿಚಾರಣೆಯಿಂದ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಶಂಕಿತ, ಬೆಂಗಳೂರಿನಿಂದ ಬಸ್‌ನಲ್ಲಿ ತುಮಕೂರು, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ ಸುತ್ತಾಡಿದ್ದಾನೆ. ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲೆಂದೇ ಈತ ಈ ರೀತಿ ಮಾಡಿದ್ದಾನೆ. ಈತನ ಬಗ್ಗೆಯೂ ಸುಳಿವು ಸಿಕ್ಕಿದ್ದು ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಮಿನಾಜ್ ಯಾರು ?

ಶಂಕಿತ ಉಗ್ರ ಮಿನಾಜ್, ಬಳ್ಳಾರಿ ಕೌಲ್‌ಬಜಾರ್‌ನಲ್ಲಿ ಬಟ್ಟೆ ಮಾರಾಟ ಮಳಿಗೆ ನಡೆಸುತ್ತಿದ್ದಾನೆ. ಐಎಸ್‌ ಮುಖ್ಯಸ್ಥರ ಜೊತೆ ಸಂಪರ್ಕ ಹೊಂದಿದ್ದ ಈತ, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಧರ್ಮದ ಹೆಸರಿನಲ್ಲಿ ಯುವಕರನ್ನು ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದಿಸುತ್ತಿದ್ದ. ವಿಶೇಷವಾಗಿ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಎಂದು ಮೂಲಗಳು ಹೇಳಿವೆ.

ಮಿನಾಜ್ ಐಎಸ್‌ ಬಳ್ಳಾರಿ ಘಟಕದ ಮುಖ್ಯಸ್ಥನಾಗಿದ್ದ. ಈತ ಕಚ್ಚಾ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದ ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಯುವಕರನ್ನು ಪ್ರಚೋದಿಸುತ್ತಿದ್ದ ಎಂಬ ಸುಳಿವು ಲಭ್ಯವಾಗಿದೆ. ಈ ಹಿಂದೆ 2023ರ ಡಿಸೆಂಬರ್ 18ರಂದು ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ 19 ಸ್ಥಳಗಳಲ್ಲಿ ಉಗ್ರರ ದಾಳಿ ನಡೆದಿತ್ತು. ಆಗ ಮಿನಾಜ್ ಸೇರಿ 8 ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.

ಈ ಉಗ್ರರು ಕಚ್ಚಾ ಬಾಂಬ್ (ಐಇಡಿ) ತಯಾರಿಸಲು ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಗನ್ ಪೌಡರ್, ಇದ್ದಿಲು, ಎಥೆನಾಲ್, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ವಾಚ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದೇ ರೀತಿಯ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಸಿ ರಾಮೇಶ್ವರಂ ಕೆಫೆಯಲ್ಲಿ ಇರಿಸಿರಬಹುದು ಎಂದು ಎನ್‌ಐಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. 10 ಸಂಖ್ಯೆ ಬರೆದಿದ್ದ ಕ್ಯಾಪ್ ಅನ್ನು ಶಂಕಿತ ಆರೋಪಿ ಧರಿಸಿದ್ದ. 10 ಸಂಖ್ಯೆ ಏನನ್ನು ಸೂಚಿಸುತ್ತದೆ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡುತ್ತಿವೆ.

ಶಂಕಿತನ ರೇಖಾಚಿತ್ರ ಬಿಡಿಸಿದ್ದ ಕಲಾವಿದ ಹರ್ಷ ಕಾಳೆ

ಹೈದರಾಬಾದ್‌ ಮೂಲದ ಕಲಾವಿದ ಹರ್ಷ ಕಾಳೆ ಶಂಕಿತ ಆರೋಪಿಯ ರೇಖಾಚಿತ್ರ ಬಿಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಸ್ಫೋಟಕ್ಕೂ ಮುನ್ನ ಹಾಗೂ ಸ್ಫೋಟದ ನಂತರ ಈತ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದೇ ದೃಶ್ಯಗಳನ್ನು ಆಧರಿಸಿ ಹರ್ಷ ಅವರು ರೇಖಾಚಿತ್ರ ಬಿಡಿಸಿದ್ದಾರೆ. ಎನ್‌ಐಎ ಅಧಿಕಾರಿಗಳಿಗೆ ಇದು ನೆರವಿಗೆ ಬಂದಿದೆ. ಕ್ಯಾಪ್ ಧರಿಸಿರುವ ಶಂಕಿತನ ಮೂರು ಪ್ರತ್ಯೇಕ ಮುಖಚಹರೆಗಳುಳ್ಳ ಚಿತ್ರಗಳನ್ನು ಇವರು ಬಿಡಿಸಿದ್ದಾರೆ. ಇದೇ ರೇಖಾಚಿತ್ರಗಳನ್ನು ಎನ್‌ಐಎ ಬಳಸಿಕೊಳ್ಳುತ್ತಿದೆ.

ಶಂಕಿತ ಆರೋಪಿ ಬಟ್ಟೆ ಬದಲಾಯಿಸಿ ಕರ್ನಾಟಕದ ತುಮಕೂರಿಗೆ ಬಸ್ ಹತ್ತಿರಬಹುದು

ಶಂಕಿತ ಬಾಂಬರ್ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ ನಂತರ ಬಟ್ಟೆ ಬದಲಾಯಿಸಿ ಕರ್ನಾಟಕದ ತುಮಕೂರಿಗೆ ಬಸ್ ಹತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಘಟನೆ ನಡೆದ ದಿನ ಬೆಳಿಗ್ಗೆ ಕೆಫೆಯನ್ನು ತಲುಪಲು ಬಾಂಬರ್ ಅನೇಕ ಸಾರ್ವಜನಿಕ ಬಸ್ಸುಗಳನ್ನು ಬಳಸಿದ್ದಾನೆ. ತಲೆಗೆ ಕ್ಯಾಪ್‌, ಕೈಗೆ ಕಪ್ಪು ವಾಚ್‌, ಫುಲ್‌ ಶರ್ಟ್, ಟೋಪಿ, ಫೇಸ್‌ಮಾಸ್ಕ್ ಮತ್ತು ಕನ್ನಡಕವನ್ನು ಧರಿಸಿ ಬಸ್‌ನಲ್ಲಿ ಚಲಿಸುತ್ತಿರುವ ಶಂಕಿತನ ಹೊಸ ವಿಡಿಯೊ ತುಣುಕನ್ನು ಪರಿಶೀಲಿಸಲಾಗುತ್ತಿದೆ. ಬಸ್ಸಿನಲ್ಲಿದ್ದ ಕ್ಯಾಮೆರಾವನ್ನು ಗಮನಿಸಿದ ನಂತರ, ಅವರು ಕಾಣಿಸದ ದಿಕ್ಕಿನಲ್ಲಿ ಚಲಿಸಿದ್ದಾರೆ ಎಂದು ತೋರುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಶಂಕಿತ ಆರೋಪಿ ಟಿ-ಶರ್ಟ್ ಧರಿಸಿ, ಫೇಸ್‌ಮಾಸ್ಕ್, ಟೋಪಿ ಮತ್ತು ಕನ್ನಡಕವಿಲ್ಲದೆ ಮತ್ತೊಂದು ಬಸ್ ಒಳಗೆ ಕುಳಿತಿರುವುದನ್ನು ಸ್ಪಷ್ಟಪಡಿಸುವ ಫೋಟೊವೊಂದು ಹೊರಬಂದಿದೆ. ಘಟನೆಯ ನಂತರ ಪ್ರಮುಖ ಆರೋಪಿ ತನ್ನ ಬಟ್ಟೆಗಳನ್ನು ಬದಲಾಯಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಗುರುವಾರ (ಮಾರ್ಚ್ 7) ಹೇಳಿದ್ದರು. ಸ್ಫೋಟದ ನಂತರ ಶಂಕಿತನು ಜಿಲ್ಲಾ ಕೇಂದ್ರ ಪಟ್ಟಣವಾದ ತುಮಕೂರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಮತ್ತು ಬಳ್ಳಾರಿಯವರೆಗೆ ಅವನ ಚಲನವಲನಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಜನಪ್ರಿಯ ರೆಸ್ಟೋರೆಂಟ್ ದಿ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನು ವಹಿಸಿಕೊಂಡಿರುವ ಎನ್‌ಐಎ ಬುಧವಾರ (ಮಾರ್ಚ್ 6) ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿತ್ತು.

ಇಸ್ಲಾಮಿಕ್ ಸ್ಟೇಟ್ ಸದಸ್ಯರ ಪಾತ್ರ ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳಿಂದಲೂ ಎನ್ಐಎ ತನಿಖೆ ನಡೆಸುತ್ತಿದೆ. ಪ್ರಾಥಮಿಕ ವಿಶ್ಲೇಷಣೆಯ ಆಧಾರದ ಮೇಲೆ, ತನಿಖಾಧಿಕಾರಿಗಳು ಮಾರ್ಚ್ 1 ರಂದು ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಮತ್ತು ನೆರೆಯ ತಮಿಳುನಾಡಿನ ಕೊಯಮತ್ತೂರಿನ ದೇವಾಲಯದಲ್ಲಿ ಅಕ್ಟೋಬರ್ 2022 ರ ಸ್ಫೋಟದ ನಡುವೆ ಹೋಲಿಕೆಗಳನ್ನು ಗುರುತಿಸಿದ್ದಾರೆ. ಎನ್ಐಎ ತನಿಖೆ ನಡೆಸುತ್ತಿರುವ ಕೊಯಮತ್ತೂರು ಸ್ಫೋಟವನ್ನು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತ ಜಮೀಶಾ ಮುಬೀನ್ ನಡೆಸಿದ್ದಾನೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner