ಬೆಂಗಳೂರು ಕೆಫೆ ಸ್ಫೋಟ; ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತನ ಇನ್ನೆರಡು ವಿಡಿಯೋ ಹಂಚಿಕೊಂಡ ಎನ್ಐಎ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೆಫೆ ಸ್ಫೋಟ; ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತನ ಇನ್ನೆರಡು ವಿಡಿಯೋ ಹಂಚಿಕೊಂಡ ಎನ್ಐಎ

ಬೆಂಗಳೂರು ಕೆಫೆ ಸ್ಫೋಟ; ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತನ ಇನ್ನೆರಡು ವಿಡಿಯೋ ಹಂಚಿಕೊಂಡ ಎನ್ಐಎ

ಬೆಂಗಳೂರು ಕೆಫೆ ಸ್ಫೋಟದ ಶಂಕಿತನ ಪತ್ತೆಗೆ ಎನ್‌ಐಎ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತನ ಇನ್ನೆರಡು ವಿಡಿಯೋ ಹಂಚಿಕೊಂಡಿರುವ ಎನ್‌ಐಎ, ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ದಿ ರಾಮೇಶ್ವರಂ ಕೆಫೆ (ಎಡ ಚಿತ್ರ); ಬಾಂಬ್ ಸ್ಫೋಟದ ಶಂಕಿತ ಆರೋಪಿ (ಬಲ ಚಿತ್ರ)
ದಿ ರಾಮೇಶ್ವರಂ ಕೆಫೆ (ಎಡ ಚಿತ್ರ); ಬಾಂಬ್ ಸ್ಫೋಟದ ಶಂಕಿತ ಆರೋಪಿ (ಬಲ ಚಿತ್ರ)

ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿರುವ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗೆ ಸಂಬಂಧಿಸಿದ ಮತ್ತೆ ಎರಡು ವಿಡಿಯೋಗಳನ್ನು ಹಂಚಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಈತನ ಪತ್ತೆಗೆ ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದೆ. ಎಕ್ಸ್ ಖಾತೆಯಲ್ಲಿ ಈತನ ಚಲನವಲನಗಳ ವಿಡಿಯೋಗಳನ್ನು ಹಂಚಿಕೊಂಡಿರುವ ಎನ್‌ಐಎ ಬಾಂಬರ್ ನ ಗುರುತು ಕಂಡು ಬಂದರೆ ಮಾಹಿತಿ ನೀಡುವಂತೆ ಕೋರಿದೆ.

ಶಂಕಿತ ಆರೋಪಿಯ ಗುರುತು ತಿಳಿದು ಬಂದರೆ 08029510900, 8904241100 ಅಥವಾ ಈ ಮೇಲ್ info.blr.nia@gov.in ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದೆ. ಅತ್ತ ಆರೋಪಿಯ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ಇಂದು ಶನಿವಾರ ಮತ್ತೆ ಕಲಬುರಗಿಗೆ ದೌಡಾಯಿಸಿದ್ದಾರೆ. ಕಲಬುರಗಿಯಲ್ಲಿ ಎಲ್ಲ ಆಯಾಮಗಳಿಂದಲೂ ಆರೋಪಿಯ ಶೋಧಕಾರ್ಯ ನಡೆಸಿದ್ದಾರೆ.

ದಿ ರಾಮೇಶ್ವರಂ ಕೆಫೆ ಸ್ಫೋಟ; ಎನ್‌ಐಎ ಟ್ವೀಟ್‌

ಬೆಂಗಳೂರು ಕೆಫೆ ಸ್ಫೋಟ ಪ್ರಕರಣ; ಮೂವರು ಶಂಕಿತರ ವಿಚಾರಣೆ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅನುಮಾನದ ಮೇರೆಗೆ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು ವಶಕ್ಕೆ ಪಡೆದಿದ್ದ ಎನ್‌ಐಎ ಅಧಿಕಾರಿಗಳು, ಮತ್ತೆ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಶಂಕಿತ ಆರೋಪಿಗಳು ಮತ್ತೊಂದು ಸ್ಫೋಟಕ್ಕೆ ಸಂಚು ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಎನ್‌ಐಎ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ತನಿಖಾ ಸಂಸ್ಥೆಗಳು ಪೊಲೀಸರಿಗೆ ಮಾಹಿತಿ ನೀಡಿವೆ. ಈಗಾಗಲೇ ಬಂಧಿಸಲ್ಪಟ್ಟಿರುವ ಶಂಕಿತರನ್ನು ಬಳ್ಳಾರಿಗೆ ಕರೆದೊಯ್ದಿರುವ ಎನ್‌ಐಎ ವಿಶೇಷ ತಂಡ, ಹೋಟೆಲ್ ನಲ್ಲಿ ಬಾಂಬ್ ಇಟ್ಟವನ ಪತ್ತೆಗಾಗಿ ಹುಡುಕಾಟ ನಡೆಸಿದೆ.

ಎನ್‌ಐಎ ಶೇರ್ ಮಾಡಿದ ವಿಡಿಯೋಗಳಿವು

ಮಿನಾಜ್‌ ಮತ್ತು ಸೈಯದ್ ಸಮೀರ್ ಬಳ್ಳಾರಿಯಲ್ಲಿ ಸಂಚಾರ ನಡೆಸಿದ್ದ ಎಲ್ಲ ಸ್ಥಳಗಳು ಹಾಗೂ ಮಳಿಗೆಗಳಲ್ಲಿ ಶೋಧ ಕೈಗೊಂಡಿದೆ. ಅವರು ಓಡಾಟ ನಡೆಸಿದ್ದ ಸ್ಥಳಗಳಿಗೆ ಏಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ಕಲೆಹಾಕುತ್ತಿದೆ. ಎನ್‌ಐಎ ಅಧಿಕಾರಿಗಳು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner