Rapido: ಬೆಂಗಳೂರಿನಲ್ಲಿ ಶೀಘ್ರವೇ ಶುರುವಾಗಲಿದೆ ರಾಪಿಡೋ ಕ್ಯಾಬ್ ಸರ್ವೀಸ್‌
ಕನ್ನಡ ಸುದ್ದಿ  /  ಕರ್ನಾಟಕ  /  Rapido: ಬೆಂಗಳೂರಿನಲ್ಲಿ ಶೀಘ್ರವೇ ಶುರುವಾಗಲಿದೆ ರಾಪಿಡೋ ಕ್ಯಾಬ್ ಸರ್ವೀಸ್‌

Rapido: ಬೆಂಗಳೂರಿನಲ್ಲಿ ಶೀಘ್ರವೇ ಶುರುವಾಗಲಿದೆ ರಾಪಿಡೋ ಕ್ಯಾಬ್ ಸರ್ವೀಸ್‌

ಬೆಂಗಳೂರು ಮಹಾನಗರದಲ್ಲಿ ಜನರಿಗೆ ಕ್ಯಾಬ್ ಸೇವೆ ಒದಗಿಸುವುದಕ್ಕೆ ರಾಪಿಡೋ ಮುಂದಾಗಿದೆ. ಹೀಗಾಗಿ ಈ ಸೇವೆ ಒದಗಿಸಲು ಪರವಾನಗಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ರಾಪಿಡೋ ಬೆಂಗಳೂರಿನಲ್ಲಿ ಆಟೋ ಪ್ಲಸ್ ಸೇವೆಯನ್ನು ಪರಿಚಯಿಸಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಸೇವೆ ಒದಗಿಸುವುದಕ್ಕೆ ಪರವಾನಗಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದೆ ರಾಪಿಡ್. (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ಕ್ಯಾಬ್ ಸೇವೆ ಒದಗಿಸುವುದಕ್ಕೆ ಪರವಾನಗಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದೆ ರಾಪಿಡ್. (ಸಾಂಕೇತಿಕ ಚಿತ್ರ)

ಬೆಂಗಳೂರು: ಹೈದರಾಬಾದ್‌ನಲ್ಲಿ ಕ್ಯಾಬ್ ಸೇವೆಗಳನ್ನು ಯಶಸ್ವಿಯಾಗಿ ಪರಿಚಯಿಸಿದ ಬಳಿಕ ಬೆಂಗಳೂರಿನಲ್ಲಿ ಕ್ಯಾಬ್ ಅಗ್ರಿಗೇಟರ್ ಆಗಿ ಕಾರ್ಯಾಚರಣೆ ಶುರುಮಾಡಲು ರಾಪಿಡೋ (Rapido) ಸಿದ್ಧವಾಗಿದೆ ಎಂದು ರೈಡ್-ಹೇಲಿಂಗ್ ಅಪ್ಲಿಕೇಶನ್ ಪ್ರಕಟಿಸಿದೆ.

ಬೆಂಗಳೂರು ಮಹಾನಗರದಲ್ಲಿ ಕ್ಯಾಬ್ ಸೇವೆಗಳನ್ನು ನಡೆಸಲು ಪರವಾನಗಿಗಾಗಿ ಈ ಕಂಪನಿ ಅರ್ಜಿ ಸಲ್ಲಿಸಿದೆ. ಪರವಾನಗಿ ನೀಡಲು ಕನಿಷ್ಠ ಒಂದು ತಿಂಗಳು ಬೇಕು ಎಂದು ಕರ್ನಾಟಕ ಸಾರಿಗೆ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳನ್ನು ನಡೆಸಲು ಅನುಮತಿ ಕೇಳಿ ರಾಪಿಡೋ ಅರ್ಜಿ ಸಲ್ಲಿಸಿದೆ. ಪ್ಯಾನಿಕ್ ಬಟನ್‌ಗಳು, ಕಂಟ್ರೋಲ್ ರೂಮ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಮತ್ತು ಇತರ ಸುರಕ್ಷತಾ ಕ್ರಮಗಳ ಸ್ಥಾಪನೆಯನ್ನು ಪರಿಶೀಲಿಸಿದ ನಂತರವೇ ಪರವಾನಗಿಯನ್ನು ನೀಡಬಹುದು. ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಪಿಡೋ ಆಟೋ ಪ್ಲಸ್ ಸೇವೆ

ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಇತ್ತೀಚಿಗೆ ಹಿನ್ನಡೆ ಅನುಭವಿಸಿದ ರಾಪಿಡೋ, ಮಹಾನಗರದಲ್ಲಿ 'ಆಟೋ ಪ್ಲಸ್' ಎಂಬ ಸೇವೆಯನ್ನು ಆರಂಭಿಸಿದೆ. ಇದು ಯಾವುದೇ ರದ್ದತಿಗಳಿಲ್ಲದೆ ಸವಾರಿಗಳನ್ನು ಖಾತರಿಪಡಿಸುತ್ತದೆ. ಪ್ರಯಾಣಿಕರಿಗೆ ವಿಶ್ವಾಸಾರ್ಹತೆ ಮತ್ತು ಅದರ ಕ್ಯಾಪ್ಟನ್‌ಗಳಿಗೆ (ಚಾಲಕರು) ಆದಾಯ ಸ್ಥಿರತೆಯನ್ನು ಈ ಸೇವೆಯು ಖಾತ್ರಿಗೊಳಿಸುತ್ತದೆ.

ಈ ಹೊಸ ಫೀಚರ್‌ನ ಶುಲ್ಕ ಅಪ್ಲಿಕೇಶನ್‌ನಲ್ಲಿ ಸಾಮಾನ್ಯ ಆಟೋ ರೈಡ್ ದರಗಳಿಗಿಂತ 25 ರಿಂದ 30 ಪ್ರತಿಶತ ಹೆಚ್ಚಿವೆ ಎಂದು ವರದಿಯಾಗಿದೆ. ರಾಪಿಡೊ ತನ್ನ ನಿಯತ ಆಟೋ ಸೇವೆಗೆ ಕನಿಷ್ಠ ದರ 46 ರೂಪಾಯಿ ವಿಧಿಸುತ್ತಿದೆ. ಈ ಪೈಕಿ ಮುಖ್ಯ ಪ್ರಯಾಣದ ದರ 36 ರೂಪಾಯಿ ಆದರೆ, ಪಿಕಪ್ ಶುಲ್ಕ 10 ರೂಪಾಯಿ.

ಬೆಂಗಳೂರಿನಲ್ಲಿ ರಾಪಿಡ್ ಹೊರತಾಗಿ ಇರುವ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು

ಕ್ಯಾಬ್ ಅಗ್ರಿಗೇಟರ್ ಸಂಸ್ಥೆ ಓಲಾ ಕೂಡ ಸೆಪ್ಟೆಂಬರ್‌ನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಓಲಾ ಈ ಹಿಂದೆ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಿದೆ, ಆದರೆ ಭಾರತೀಯ ಕ್ಯಾಬ್ ಅಗ್ರಿಗೇಟರ್ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುವುದು ಇದೇ ಮೊದಲು. ಓಲಾದ S1 ಎಲೆಕ್ಟ್ರಿಕ್ ಸ್ಕೂಟರ್‌ಗಳು ಕರ್ನಾಟಕದ ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿಗಳಾಗಿ ರಸ್ತೆಗಿಳಿಯಲಿವೆ.

Whats_app_banner