ಅದ್ಭುತ ಸೇವೆ ಕೊಡುವ ನಮ್ಮ ಮೆಟ್ರೋ; ಅಪರೂಪಕ್ಕೆ ಉಂಟಾಗುವ ತಾಂತ್ರಿಕ ಸಮಸ್ಯೆಯನ್ನ ಭೂಕಂಪವಾದಂತೆ ತೋರಿಸುವ ಚಾನಲ್‌ಗಳು - ರೇಣುಕಾ ಮಂಜುನಾಥ್
Namma Metro: ಲಕ್ಷಾಂತರ ಜನರಿಗೆ ಉಪಕಾರಿಯಾಗಿರುವ ಬೆಂಗಳೂರು ಮೆಟ್ರೋದಲ್ಲಿ ಆಗೊಮ್ಮೆ ಈಗೊಮ್ಮೆ ತಾಂತ್ರಿಕ ಸಮಸ್ಯೆ ಉಂಟಾದರೆ ಅದನ್ನು ಭೂಕಂಪವಾದಂತೆ ಸುದ್ದಿ ಚಾನಲ್‌ಗಳು ತೋರಿಸುತ್ತವೆ ಎಂದು ಡಿಜಿಟಲ್ ಕ್ರಿಯೇಟರ್ ರೇಣುಕಾ ಮಂಜುನಾಥ್ ಪೋಸ್ಟ್ ಮಾಡಿದ ಫೇಸ್ಬುಕ್ ಬರಹವನ್ನು ಎಚ್ಟಿ ಕನ್ನಡದಲ್ಲಿ ಮರುಪ್ರಕಟಿಸಲಾಗಿದೆ.
"ನಮ್ಮ ಬೆಂಗಳೂರಿನಲ್ಲಿ 'ಮೆಟ್ರೋ' ಕೊಡುತ್ತಿರುವ ಸೇವೆ ಅದ್ಭುತವಾಗಿದೆ! ಇದು ಜನರಿಗೆ ಬೆಂಗಳೂರಿನ ಭೂಗೋಳದ ಅಂತರವನ್ನು ಕಡಿಮೆಮಾಡಿದೆ. ಮೊದಲು ಬೆಂಗಳೂರು ಉತ್ತರದವರಿಗೆ ದಕ್ಷಿಣಕ್ಕೆ ಹೋಗುವುದು ಬಹಳ ಪ್ರಯಾಸವಾಗುತ್ತಿತ್ತು. ಈಗ ಮೆಟ್ರೋದಿಂದಾಗಿ, ಬೆಂಗಳೂರು ಉತ್ತರದಲ್ಲಿ ರಿಯಲ್ ಎಸ್ಟೇಟ್ ದರಗಳೂ ಹೆಚ್ಚುತ್ತಿವೆ, ಇಲ್ಲಿನ ಬಾಡಿಗೆ ಸಹಾ ಹೆಚ್ಚಿದೆ. ಐಟಿ ಉದ್ಯೋಗಿಗಳಿಗಂತೂ ಎಲ್ಲಿ ಬೇಕಾದರೂ ಮನೆ ಮಾಡಿಕೊಂಡಿರುವಂತಾಗಿದೆ. ಏರ್‌ಪೋರ್ಟ್ ಮೆಟ್ರೋ ಕೆಲಸ ಮುಗಿದರೆ ಆ ಭಾಗದ ಚಿತ್ರಣವೇ ಬದಲಾಗುತ್ತೆ..
ಇಷ್ಟೆಲ್ಲಾ ಇರುವಾಗ ಆಗೊಮ್ಮೆ ಈಗೊಮ್ಮೆ ಉಂಟಾಗುವ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಗಂಟೆಗಳ ವ್ಯತ್ಯಯವನ್ನು ನಮ್ಮ ಚಾನಲ್‌ಗಳು ಭೂಕಂಪವಾದಂತೆ ತೋರಿಸುತ್ತಿರುತ್ತಾರೆ!! ಅಲ್ಲಿ ನಿಂತಿರುವವರ ಬಳಿ ಹೋಗಿ "ಹೇಳಿ, ಹೇಳಿ ನಿಮಗೆಷ್ಟು ಸಮಸ್ಯೆ... " ಅನ್ನುತ್ತಾರೆ! ಅವರೇ ಕೂಲ್ ಆಗಿದ್ದರೆ ಇವರಿಗಾಗುವ ನಿರಾಶೆ ನೋಡಬೇಕು..ಮತ್ತಷ್ಟು ಕೆದಕುವರು!
ಈಗ ಸ್ಲಂಗಳ ಅಕ್ಕಪಕ್ಕ ಒಳಚರಂಡಿ ಅಧ್ವಾನ, ನೀರಿನ ಸಮಸ್ಯೆ, ಆಸ್ಪತ್ರೆಗಳಲ್ಲಿನ ಸಮಸ್ಯೆ, ಶಾಲೆಗಳ ಸಮಸ್ಯೆ, ತರಕಾರಿ ಮಾರ್ಕೆಟ್‌ಗಳ ಸಮಸ್ಯೆ, ಕಳ್ಳರ ಸಮಸ್ಯೆ ಹೀಗೆ ಬಹಳಷ್ಟಿದೆ.. ಆರ್‌ಟಿಒ, ಸಬ್ ರಿಜಿಸ್ಟ್ರಾರ್ ಕಛೇರಿ ಮುಂತಾದ ಕಡೆ ಇರುವ ಈ ದಲ್ಲಾಳಿಗಳ ಶೋಷಣೆ ಬಗ್ಗೆ ತೋರಿಸಿ.. ಅಲ್ಲೆಲ್ಲಾ ಹೋಗಿ ಸಮಸ್ಯೆ ಬಿಂಬಿಸಿದರೆ ಸಾಕು..
ಈ ಮೆಟ್ರೋ ಸಮಸ್ಯೆ , ವಿಶ್ವದ ಅತೀ ಪುರಾತನವೆನಿಸಿಕೊಂಡ ಲಂಡನ್‌ನಲ್ಲಿ ಇಲ್ಲಿಗಿಂತಾ ಹೆಚ್ಚಾಗಿದೆ. ಬಹಳಷ್ಟು ಸಾರಿ ಅಲ್ಲಿ ಮೆಟ್ರೊ ರೈಲುಗಳೇ ಕ್ಯಾನ್ಸಲ್ ಆಗಿಬಿಡುತ್ತವೆ! ಕೆಲವೊಮ್ಮೆ ಅಲ್ಲಿಪ್ರಾಮಾಣಿಕವಾಗಿ ಬೋರ್ಡ್ ಹಾಕಿದ್ದನ್ನು ನೋಡಿದ್ದೇನೆ! ವ್ಯತ್ಯಯಕ್ಕೆ ಕಾರಣ staff shortage !!
ಸ್ವಚ್ಛತೆ , ಶಿಸ್ತು ಮೊದಲ್ಗೊಂಡು ಅನೇಕ ವಿಷಯಗಳಲ್ಲಿ ನಮ್ಮ ಮೆಟ್ರೋ ಅಲ್ಲಿಗಿಂತಾ ಚಂದವಾಗಿದೆ. ಆರಂಭವಾಗಿ ಕೆಲವೇ ವರ್ಷಗಳಾಗಿದೆ. ನಮ್ಮದೂ ಅವರಷ್ಟೇ ವಿಭಿನ್ನ ಸೇವೆ ಒದಗಿಸುವ ಹಂತ ತಲುಪುವುದರಲ್ಲಿ ಸಂಶಯವೇ ಇಲ್ಲ. ಮುಖ್ಯವಾಗಿ ನಮ್ಮ ಮೆಟ್ರೋ, ಸಿಲಿಕಾನ್ ವಿಷಯಕ್ಕೆ ಮತ್ತೊಂದಕ್ಕೆ ಒಂದೇ ಕಡೆ ಕೇಂದ್ರಿತಗೊಂಡಿದ್ದ ವಸತಿ ವಾಸ್ತವ್ಯಗಳು ವಿಕೇಂದ್ರಿತಗೊಂಡು ನಗರದ ಜನಜೀವನದ ಸಾಂದ್ರತೆ ನಗರದಾದ್ಯಂತ ಹರಡಿಕೊಳ್ಳುತ್ತಿದೆ. ಇದು ಮೆಟ್ರೊ ತಂದ ಮೌನ ಕ್ರಾಂತಿ! ಮೀಡಿಯಾದವರು ತಮ್ಮೆಲ್ಲಾ ಶಕ್ತಿಸಾಮರ್ಥ್ಯವನ್ನು ಇಂತಹಾ ಕಡೆ ವ್ಯಯಿಸುವುದನ್ನು ಬಿಟ್ಟು, ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡಬೇಕಿದೆ.."
-ರೇಣುಕಾ ಮಂಜುನಾಥ್
ರೇಣುಕಾ ಮಂಜುನಾಥ್ ಪೋಸ್ಟ್ಗೆ ಫೇಸ್ಬುಕ್ ಬಳಕೆದಾರರ ಪ್ರತಿಕ್ರಿಯೆ
“ನಿಜ ಮೇಡಂ ಈಗಿನ ಚಾನಲ್ಗಳಿಗೆ ಬ್ರೇಕಿಂಗ್ನ್ ನ್ಯೂಸ್ ಬೇಕು, ಅದಕ್ಕೆ ಕಡ್ಡಿಯೆನ್ನೇ ಗುಡ್ಡ ಮಾಡುತ್ತಾರೆ. ಅನೇಕ ಜ್ವಲಂತ ಸಮಸ್ಯೆಗಳು ಇವೆ ಅದರ ಬಗ್ಗೆ ಅವರ ಕಾಳಜಿ ಇಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತ ನಾವೆಲ್ಲರೂ US, UK ಬಗ್ಗೆ ನಮಗಿಂತ ಅಲ್ಲಿ ಸೌಕರ್ಯ ತುಂಬಾ ಚೆನ್ನಾಗಿದೆ ಎಂದು ತಿಳಿದಿರುತ್ತೇವೆ. ನಿಮ್ಮ ಈ ಪುಟ್ಟ ಲೇಖನ ಎಲ್ಲರ ಕಣ್ತೆರೆಸುವ ರೀತಿ ಇದೆ ಧನ್ಯವಾದಗಳು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಹೌದು. .. ಇಲ್ಲಿ ಹೇಳಿರುವುದು ಸೆನ್ಸಿಬಲ್.. ವಿಕೇಂದ್ರೀಕರಣದ ಅಂಶ ನಿಜವಾಗಿಯೂ ಬಹುತೇಕ ಅನ್ವಯವಾಗುತ್ತಿದೆ.. ಯಾರು ಕೇಳಿದ್ರೂ ಮೆಟ್ರೋ ಲಿಂಕ್ ಹತ್ತಿರವೇ ಇದೆ ಅನ್ನುತ್ತಾ ದೂರದ ಕೊರಗನ್ನು ಮಾಯಗೊಳಿಸಿ ಹತ್ತಿರ ಮಾಡುತ್ತಾರೆ” ಎಂದು ಮತ್ತೊಬ್ಬರು ಹೇಳಿದ್ದಾರೆ.