Train Restaurant: ಬೆಂಗಳೂರಿನ ರೈಲು ರೆಸ್ಟೋರೆಂಟ್‌ ತಿಂಗಳ ಕೊನೆಗೆ ಲೋಕಾರ್ಪಣೆ; 5 ತಿಂಗಳು ವಿಳಂಬಕ್ಕಿದುವೇ ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  Train Restaurant: ಬೆಂಗಳೂರಿನ ರೈಲು ರೆಸ್ಟೋರೆಂಟ್‌ ತಿಂಗಳ ಕೊನೆಗೆ ಲೋಕಾರ್ಪಣೆ; 5 ತಿಂಗಳು ವಿಳಂಬಕ್ಕಿದುವೇ ಕಾರಣ

Train Restaurant: ಬೆಂಗಳೂರಿನ ರೈಲು ರೆಸ್ಟೋರೆಂಟ್‌ ತಿಂಗಳ ಕೊನೆಗೆ ಲೋಕಾರ್ಪಣೆ; 5 ತಿಂಗಳು ವಿಳಂಬಕ್ಕಿದುವೇ ಕಾರಣ

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ರೈಲು ರೆಸ್ಟೋರೆಂಟ್ ಶುರುವಾಗುವುದು 5 ತಿಂಗಳು ತಡವಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ರೈಲು ರೆಸ್ಟೋರೆಂಟ್ ಈ ತಿಂಗಳ ಕೊನೆಯಲ್ಲಿ ಕಾರ್ಯಾರಂಭ ಮಾಡಲಿದೆ. ಏನಿದರ ವಿಶೇಷ- ಇಲ್ಲಿದೆ ವಿವರ.

ರೈಲು ರೆಸ್ಟೋರೆಂಟ್‌ (ಸಾಂಕೇತಿಕ ಚಿತ್ರ)
ರೈಲು ರೆಸ್ಟೋರೆಂಟ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಾ ಊಟ, ತಿಂಡಿ, ಚಹಾ, ಕಾಫಿ ಕುಡಿಯುತ್ತಾ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆನಂದಿಸುತ್ತಾರೆ. ಇದರ ಜೊತೆಗೆ ಬೆಂಗಳೂರಿನ ಜನತೆಗೆ ರೈಲು ನಿಲ್ದಾಣದ ಆವರಣದಲ್ಲೇ ರೈಲು ರೆಸ್ಟೋರೆಂಟ್ ಪರಿಚಯಿಸಲು ರೈಲ್ವೇ ಇಲಾಖೆ ಮುಂದಾಗಿತ್ತು. ಈ ತಿಂಗಳು ಆರಂಭದಲ್ಲೇ ಶುರುವಾಗಬೇಕಾಗಿದ್ದ ವಿಶಿಷ್ಟ ರೆಸ್ಟೋರೆಂಟ್, ತಿಂಗಳ ಕೊನೆಗೆ ಕಾರ್ಯಾರಂಭ ಮಾಡಲಿವೆ.

ಕಳೆದ ವರ್ಷ ಅಕ್ಟೋಬರ್ ವೇಳೆಗೆ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ರೈಲ್ವೇ ವಿಭಾಗವು ಈ ಹಿಂದೆ ಘೋಷಿಸಿತ್ತು. ನಂತರ ಗಡುವನ್ನು ಡಿಸೆಂಬರ್ 2023ಕ್ಕೆ ಮುಂದೂಡಲಾಗಿತ್ತು. ಇದೀಗ ಐದು ತಿಂಗಳ ವಿಳಂಬದ ನಂತರ ರೈಲು ರೆಸ್ಟೋರೆಂಟ್ ಗಳನ್ನು ತಿಂಗಳಾಂತ್ಯದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ರೈಲು ರೆಸ್ಟೋರೆಂಟ್ ವಿಳಂಬವಾಗಲು ಕಾರಣ ಏನು? ರೈಲ್ವೆಗೆ ಈ ರೈಲು ರೆಸ್ಟೋರೆಂಟ್‌ನಲ್ಲಿ ಆದಾಯ ಹೇಗೆ, ಬೇರೆ ಎಲ್ಲೆಲ್ಲಿ ಈ ರೀತಿಯ ರೆಸ್ಟೋರೆಂಟ್ ಇದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ..

ಬೆಂಗಳೂರಿನ ಎರಡು ಕಡೆ ರೈಲು ರೆಸ್ಟೋರೆಂಟ್

ಬೆಂಗಳೂರು ಸಿಟಿ ರೈಲು ನಿಲ್ದಾಣ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಗಳ ಪ್ರವೇಶದ್ವಾರದಲ್ಲಿ ರೈಲು ಹಳಿಗಳ ಮೇಲೆ ಈ ರೈಲು ರೆಸ್ಟೋರೆಂಟ್ ಅನ್ನು ಶುರುಮಾಡಲಾಗುತ್ತಿದೆ.

ಈಗಾಗಲೇ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಾಡಿರುವ ರೈಲು ರೆಸ್ಟೋರೆಂಟ್ ಯಶಸ್ವಿಯಾಗಿದೆ ಎಂದು ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ ತಿಳಿಸಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಹಳೆಯ ರೈಲು ಕೋಚ್ ಗಳನ್ನು ಸುಂದರವಾದ ರೆಸ್ಟೋರೆಂಟ್ ಗಳನ್ನಾಗಿ ಪರಿವರ್ತಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ 40 ಜನರು ಕುಳಿತುಕೊಳ್ಳಬಹುದಾಗಿದೆ. ಹೊರಗಡೆಯೂ 40 ಜನರು ಕುಳಿತುಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿದೆ. ಒಳಾಂಗಣವನ್ನು ಗ್ರಾಹಕರಿಗೆ ಆಕರ್ಷಿಸುವಂತೆ ಮಾರ್ಪಡಿಸಲಾಗಿದೆ. ದಿನದ 24 ಗಂಟೆಯೂ ತೆರೆದಿರುವ ಈ ರೆಸ್ಟೋರೆಂಟ್‌ಗಳು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತವೆ.

ರೈಲ್ವೆಗೂ ಭರಪೂರ ಆದಾಯ ನಿರೀಕ್ಷೆ

ಅಂದಹಾಗೆ, ಮೈಸೂರಿನ ಅಶೋಕಪುರಂ ಡಿಪೋದಿಂದ ಬೋಗಿಗಳನ್ನು ಸಾಗಿಸಲಾಗಿತ್ತು. ಅವುಗಳನ್ನು ರೈಲ್ವೆ ಗುತ್ತಿಗೆದಾರರಿಗೆ ಉಚಿತವಾಗಿ ಪೂರೈಸಿದೆ. ರೈಲು ರೆಸ್ಟೋರೆಂಟ್ ಗೆಂದೇ ರೈಲು ಹಳಿಯನ್ನು ಸಹ ಸಿದ್ಧಪಡಿಸಲಾಗಿದೆ.

ಬೆಂಗಳೂರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿತ್ಯವೂ 2 ಲಕ್ಷದಷ್ಟು ಜನಸಂಚಾರವಿದೆ. ಹೀಗಾಗಿ ಉತ್ತಮ ಆದಾಯವನ್ನು ರೈಲ್ವೆ ನಿರೀಕ್ಷಿಸುತ್ತಿದೆ. ಇಲ್ಲಿನ ರೈಲು ರೆಸ್ಟೋರೆಂಟ್ ಗುತ್ತಿಗೆ ಪಡೆಯುವವರಿಂದ ಪರವಾನಗಿ ಶುಲ್ಕವಾಗಿ ವಾರ್ಷಿಕ 87 ಲಕ್ಷ ರೂಪಾಯಿಯನ್ನು ರೈಲ್ವೆ ಸಂಗ್ರಹಿಸಲಿದೆ. ಇದೇ ರೀತಿ, ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಲ್ಲಿ ದಿನಕ್ಕೆ 60000 ಜನ ಸಂಚಾರವಿದ್ದು, ರೆಸ್ಟೋರೆಂಟ್ ಪರವಾನಗಿ ಶುಲ್ಕವಾಗಿ ವಾರ್ಷಿಕ 33 ಲಕ್ಷ ರೂಪಾಯಿ ಪಡೆಯುವುದಕ್ಕೆ ರೈಲ್ವೆ ಮುಂದಾಗಿದೆ.

ಈಗಾಗಲೇ ಈ ರೆಸ್ಟೋರೆಂಟ್‌ಗಳ ಗುತ್ತಿಗೆಯನ್ನು ಎರಡು ಕಂಪನಿಗಳು ಪಡೆದುಕೊಂಡಿವೆ. ಕೆಎಸ್‌ಆರ್ ರೈಲ್ವೆ ನಿಲ್ದಾಣದ ರೈಲು ರೆಸ್ಟೋರೆಂಟ್‌ ಗುತ್ತಿಗೆಯನ್ನು 2023ರ ಜೂನ್‌ನಲ್ಲೇ ಒಎಎಂ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ ಮತ್ತು ಸರ್.ಎಂ.ವಿ. ಟರ್ಮಿನಲ್‌ನ ರೈಲು ರೆಸ್ಟೋರೆಂಟ್‌ ಗುತ್ತಿಗೆಯನ್ನು ಗೌರವ್ ಎಂಟರ್‌ಪ್ರೈಸಸ್ ಪಡೆದುಕೊಂಡಿದೆ. ಇದು 5 ವರ್ಷದ ಗುತ್ತಿಗೆ. ಪರವಾನಗಿ ಶುಲ್ಕದ ಮೂಲಕ ರೈಲ್ವೇಗೆ ಒಟ್ಟು 7.54 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಿದೆ.

ರೈಲು ರೆಸ್ಟೋರೆಂಟ್‌ ವಿಳಂಬಕ್ಕೇನು ಕಾರಣ

ಸ್ವಲ್ಪ ವಿಳಂಬವಾಗಿಯಾದರೂ ಈ ವಿಶಿಷ್ಟವಾದ ರೈಲು ಕೋಚ್ ರೆಸ್ಟೋರೆಂಟ್ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಇದು ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ದಕ್ಷಿಣ ಭಾರತ ಹಾಗೂ ಉತ್ತರ ಭಾರತೀಯ ಶೈಲಿಯ ಆಹಾರಗಳನ್ನು ಇಲ್ಲಿ ಪೂರೈಸಲಾಗುತ್ತದೆ. ಬೇಡಿಕೆಯ ಆಧಾರದ ಮೇಲೆ ಮೆನುವನ್ನು ವಿಸ್ತರಿಸಲು ಯೋಜಿಸಲಾಗಿದೆ ಎನ್ನಲಾಗಿದೆ.

ಇನ್ನು ರೆಸ್ಟೋರೆಂಟ್ ವಿಳಂಬವಾಗಲು ಕೆಲಸ ಮಾಡಲು ಗುತ್ತಿಗೆ ಪಡೆದವರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ವಿಳಂಬವಾಯಿತು ಎಂದು ರೈಲ್ವೇ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.

ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್, ವಿಜಯವಾಡ, ಭೋಪಾಲ್, ಮುಂಬೈ, ನಾಗ್ಪುರ, ಲಕ್ನೋ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿನ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಈ ರೀತಿ ರೈಲು ರೆಸ್ಟೋರೆಂಟ್‌ಗಳಿವೆ. ಬೆಂಗಳೂರಿಗರು ಕೂಡ ಈ ತಿಂಗಳ ಕೊನೆಯಲ್ಲಿ ಈ ವಿಶಿಷ್ಟ ಅನುಭವವನ್ನು ಪಡೆಯಬಹುದಾಗಿದೆ.

(ವರದಿ- ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner