ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ರೊಡಮೈನ್-ಬಿ ಪತ್ತೆ; ತಮಿಳುನಾಡಿನಲ್ಲಿ ನಿಷೇಧ; ಕರ್ನಾಟಕದಲ್ಲೂ ಬ್ಯಾನ್ ಮಾಡಲು ಕ್ರಮ-bengaluru news rhodamine b in cotton candy prohibited in tamil nadu likely to ban in karnataka mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ರೊಡಮೈನ್-ಬಿ ಪತ್ತೆ; ತಮಿಳುನಾಡಿನಲ್ಲಿ ನಿಷೇಧ; ಕರ್ನಾಟಕದಲ್ಲೂ ಬ್ಯಾನ್ ಮಾಡಲು ಕ್ರಮ

ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ರೊಡಮೈನ್-ಬಿ ಪತ್ತೆ; ತಮಿಳುನಾಡಿನಲ್ಲಿ ನಿಷೇಧ; ಕರ್ನಾಟಕದಲ್ಲೂ ಬ್ಯಾನ್ ಮಾಡಲು ಕ್ರಮ

Cotton Candy Ban: ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರೊಡಮೈನ್-ಬಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈ ತಿನಿಸನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರೊಡಮೈನ್-ಬಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನಿಷೇಧಿಸಲಾಗಿದೆ. ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಲಾಗುತ್ತದೆ.
ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರೊಡಮೈನ್-ಬಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ನಿಷೇಧಿಸಲಾಗಿದೆ. ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಲಾಗುತ್ತದೆ.

Rhodamine-B in Cotton Candy: ಹೆಗಲ ಮೇಲೊಂದು ಉದ್ದನೆಯ ಕೋಲು ಹಾಕಿಕೊಂಡು ಅದಕ್ಕೆ ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿಯ ಪೊಟ್ಟಣಗಳನ್ನು ನೇತು ಹಾಕಿಕೊಂಡು ಗಂಟೆ ಅಲ್ಲಾಡಿಸುತ್ತಾ ವ್ಯಾಪಾರಿ ಮನೆ ಮುಂದೆ ಬಂದಾಗ ಅದನ್ನು ತಿನ್ನದೆ ಇರಲಾಗದು. ಅದರಲ್ಲೂ ಜಾತ್ರೆ, ಹಬ್ಬ ಮತ್ತು ರಥೋತ್ಸವಗಳಲ್ಲಿ ಇದರ ಮಾರಾಟ ಫೇಮಸ್.

ಈ ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ರೊಡಮೈನ್-ಬಿ ಅತಿಯಾದ ಪ್ರಮಾಣದಲ್ಲಿದ್ದು, ನಿಷೇಧ ಹೇರಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ಇತ್ತೀಚೆಗಷ್ಟೇ ಅಂದರೆ ಫೆಬ್ರವರಿ 9ರಂದು ಪುದುಚೇರಿ ಮತ್ತು ಫೆ. 17 ರಂದು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿವೆ.

ಆಹಾರ ಪ್ರಯೋಗಾಲಯದ ವಿಶ್ಲೇಷಣೆಯ ನಂತರ ತಮಿಳುನಾಡು ರಾಜ್ಯದ ಆರೋಗ್ಯ ಸಚಿವ ಮಾ. ಸುಬ್ರಮಣ್ಯಂ ನಿಷೇಧವನ್ನು ಘೋಷಿಸಿದ್ದಾರೆ. ಮಾರಾಟ ಮತ್ತು ಉತ್ಪಾದನೆ ಶಿಕ್ಷಾರ್ಹ ಅಪರಾಧ ಎಂದು ವಿವರಿಸಿದ ಸುಬ್ರಮಣಿಯನ್, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಾಯಿದೆಯ ಪ್ರಕಾರ ರೋಡಮೈನ್-ಬಿ ಹೊಂದಿರುವ ಆಹಾರ ಪದಾರ್ಥಗಳನ್ನು ತಯಾರಿಸುವುದು, ಪ್ಯಾಕೇಜಿಂಗ್ ಮಾಡುವುದು, ಆಮದು ಮಾಡಿಕೊಳ್ಳುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಮಿಳುನಾಡು ಆರೋಗ್ಯ ಸಚಿವ ಎಂಎ ಸುಬ್ರಮಣಿಯನ್ ಹೇಳಿದ್ದಾರೆ.

ಕರ್ನಾಟಕದಲ್ಲೂ ನಿಷೇಧ?

ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕ್ಯಾಂಡಿ ಅಥವಾ ಮಿಠಾಯಿಯನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಬಾಂಬೆ ಮಿಠಾಯಿಯ ಮಾದರಿಗಳನ್ನು ಸಂಗ್ರಹಿಸಲು ಆಹಾರ ಸುರಕ್ಷತೆ ಆಯುಕ್ತರ ಕಾರ್ಯಾಲಯ ಸೂಚನೆ ನೀಡಿದೆ. ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ರೊಡಮೈನ್-ಬಿ ಅಂಶ ಇರುವುದು ದೃಢಪಟ್ಟಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ, ರಾಜ್ಯದಲ್ಲೂ ಕಾಟನ್ ಕ್ಯಾಂಡಿಯ ಮಾದರಿಗಳನ್ನು ಸಂಗ್ರಹಿಸಲು ಸೂಚನೆ ನೀಡಲಾಗಿದೆ ಎಂದು ಆಹಾರ ಸುರಕ್ಷತೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಬಾಂಬೆ ಮಿಠಾಯಿಗೆ ಸಕ್ಕರೆ ಮತ್ತು ಕೃತಕ ಬಣ್ಣಗಳನ್ನು ಸೇರಿಸುವುದು ಅಪಾಯಕಾರಿ ಎಂದು ತಮಿಳುನಾಡಿನ ಆಹಾರ ತಜ್ಞರು ಎಚ್ಚರಿಕೆ ನೀಡಿದ್ದರು. ನಿರಂತರ ಪರೀಕ್ಷೆ ಬಳಿಕ ಇದರಲ್ಲಿ ರಾಸಾಯನಿಕ ವಸ್ತುಗಳು ರೊಡಮೈನ್-ಬಿ ಅಂಶ ಹೆಚ್ಚು ಇರುವುದು ಕಂಡು ಬಂದಿತ್ತು. ಇದನ್ನು ಸೇವನೆ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದರು.

ಬಾಂಬೆ ಮಿಠಾಯಿ ಲಕ್ಷಣ

ಈ ಬಾಂಬೆ ಮಿಠಾಯಿ ಸಾಮಾನ್ಯವಾಗಿ ಅಂಗಡಿಗಳಲ್ಲಿ ಮಾರಾಟ ಮಾಡುವುದಿಲ್ಲ. ಪ್ಲಾಸ್ಟಿಕ್ ಕವರ್ ನಲ್ಲಿ ಇರಿಸಿ ಮಾರಲಾಗುತ್ತದೆ. ಹತ್ತಿಯಂತೆ ಹಗುರವಾಗಿದ್ದು, ಗುಲಾಬಿ ಹಾಗೂ ಕೇಸರಿ ಬಣ್ಣದಲ್ಲಿ ಸಿಗುತ್ತದೆ. ಇದನ್ನು ಬಾಯೊಳಗಿಟ್ಟರೆ ತಕ್ಷಣವೇ ಕರಗಿ ನೀರಾಗುತ್ತದೆ. ಆದ್ದರಿಂದ ಇದು ವಿಶೇಷವಾಗಿ ಮಕ್ಕಳಿಗೆ ಅಚ್ಚುಮೆಚ್ಚು. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮದುವೆ, ನಾಮಕರಣ ಮತ್ತಿತರ ಸಮಾರಂಭಗಳಲ್ಲಿ ವಿತರಿಸಲಾಗುತ್ತದೆ. ಛತ್ರ ಪ್ರವೇಶಿಸುವುದಕ್ಕೂ ಮುನ್ನ ನೀಡಲಾಗುತ್ತದೆ. ಬೇಡ ಎಂದು ಹೇಳುವವರು ಕಡಿಮೆ.

ರೊಡಮೈನ್-ಬಿ ಎಂದರೇನು ?

ರೊಡಮೈನ್-ಬಿ ಎಂಬ ರಾಸಾಯನಿಕ ಪುಡಿಯನ್ನು ಚರ್ಮ, ಜವಳಿ ಮತ್ತು ಬಣ್ಣಗಳ ಉದ್ಯಮದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣ ಪಡೆಯಲು ಬಳಕೆ ಮಾಡಲಾಗುತ್ತದೆ. ಪುಡಿ ರೂಪದಲ್ಲಿರುವ ಹಸಿರು ಬಣ್ಣದ ಈ ರಾಸಾಯನಿಕವನ್ನು ನೀರಿಗೆ ಸೇರಿಸಿದರೆ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಒಂದು ವೇಳೆ ಇದು ನೇರವಾಗಿ ದೇಹದೊಳಕ್ಕೆ ಪ್ರವೇಶಿಸಿದರೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ರೋಡೋಮಿನ್-ಬಿ ರಾಸಾಯನಿಕದ ಪುಡಿ ರೂಪವು ಹಸಿರು ಬಣ್ಣದಲ್ಲಿದ್ದು ನೀರಿಗೆ ಸೇರಿಸಿದ ನಂತರ ಅದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ಕಾರ್ಸಿನೋಜೆನಿಕ್ (ಕ್ಯಾನರ್ ಕಾರಕ) ಆಗಿದ್ದು, ಅವುಗಳನ್ನು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಈ ರಾಸಾಯನಿಕ ಹೊಟ್ಟೆಯನ್ನು ಪ್ರವೇಶಿಸಿದ ನಂತರ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಮತ್ತು ಯಕೃತ್ತಿನ ಕಾರ್ಯದ ಮೇಲೆ ಅದ್ದ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕಾಟನ್ ಕ್ಯಾಂಡಿಯಲ್ಲಿ ಮಾತ್ರವಲ್ಲದೆ ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬಣ್ಣ ಬಣ್ಣದ ಮಿಠಾಯಿಗಳು, ಕೆಂಪು ಮೆಣಸಿನಕಾಯಿ, ಮೆಣಸಿನ ಪುಡಿ, ಟೊಮೆಟೊ ಕೆಚಪ್, ಸಾಸ್ ಗಳಲ್ಲಿ ಮಿಶ್ರಣ ಮಾಡಲಾಗುತ್ತದೆ.

ಈ ರಾಸಾಯನಿಕವು ಮೆದುಳು ಮತ್ತು ಬೆನ್ನುಹುರಿಯ ನಿಷ್ಕ್ರಿಯತೆ ಗೆ ಕಾರಣವಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪ್ಯಾಕೇಜಿಂಗ್ ಮಾಡಿದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವಾಗ ಅದರಲ್ಲಿ ಯಾವೆಲ್ಲ ರಾಸಾಯನಿಕ ಮತ್ತು ಕೃತಕ ಬಣ್ಣಗಳಿವೆ ಎಂದು ತಿಳಿದುಕೊಳ್ಳಬೇಕು. ಮಕ್ಕಳಿಗೆ ಇಂತಹ ಪದಾರ್ಥಗಳಾದ ಸೇವನೆ ಕುರಿತು ಅರಿವು ಮೂಡಿಸಬೇಕಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point