ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಬೀಗದ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ರೌಡಿ ಶೀಟರ್ ಮತ್ತು ಸಹಚರನ ಬಂಧನ

ಬೆಂಗಳೂರು ಅಪರಾಧ ಸುದ್ದಿ; ಬೀಗದ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ರೌಡಿ ಶೀಟರ್ ಮತ್ತು ಸಹಚರನ ಬಂಧನ

ಬೆಂಗಳೂರು ವ್ಯಾಪ್ತಿಯಲ್ಲಿ ಬೀಗದ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ರೌಡಿ ಶೀಟರ್ ಮತ್ತು ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. 20 ಮನೆಗಳಲ್ಲಿ ಕಳವು ಮಾಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದರ ಜೊತೆಗೆ ಇನ್ನೆರಡು ಅಪರಾಧ ಸುದ್ದಿಗಳೂ ಇದರಲ್ಲಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಬೀಗದ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಓರ್ವ ರೌಡಿ ಶೀಟರ್ ಮತ್ತು ಆತನ ಸಹಚರನನ್ನು ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿ ಶ್ರೀನಿವಾಸ್ ಮತ್ತು ಆತನ ಸಹಚರ ವೆಂಕಟೇಶ್ ಬಂಧಿತ ಕಳ್ಳರಾಗಿದ್ದು, ಇವರಿಂದ 15 ಲಕ್ಷ ರೂಪಾಯಿ ಮೌಲ್ಯದ 205 ಗ್ರಾಂ ಚಿನ್ನದ ಆಭರಣಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ರೌಡಿ ಶೀಟರ್ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಇತ್ತೀಚೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮದಕರಿನಾಯಕ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಮನೆ ಮಾಲೀಕರು ಕೊಟ್ಟ ದೂರಿನ ತನಿಖೆ ನಡೆಸಿದಾಗ ಈ ಪ್ರಯತ್ನದಲ್ಲಿ ರೌಡಿ ಶೀಟರ್ ಭಾಗಿಯಾಗಿರುವುದು ಪತ್ತೆಯಾಗಿದೆ. ಈ ಮನೆಯಲ್ಲಿ ಕಂಡುಬಂದ ಬೆರಳಚ್ಚು ಮುದ್ರೆಗಳ ಸಹಾಯದಿಂದ ಆರೋಪಿಗಳು ಯಾರು ಎನ್ನುವುದು ತಿಳಿದು ಬಂದಿತ್ತು. ನಂತರ ಪೊಲೀಸರು ಇಬ್ಬರೂ ಆರೋಪಿಗಳನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಶ್ರೀನಿವಾಸ್ ಯಶವಂತಪುರ ಪೊಲೀಸ‌್ ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ 20 ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿರುವುದು

ವಿಚಾರಣೆಯಿಂದ ತಿಳಿದು ಬಂದಿದೆ. ಇವರಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಪ್ರಕರಣಗಳ ಪೈಕಿ 4 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ತಮ್ಮ ಮೋಜಿನ ಜೀವನಕ್ಕಾಗಿ, ಗೇಟ್ ಗಳಿಗೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ನಂತರ ಬೀಗ ಮುರಿದು ಕಳವು ಮಾಡುತ್ತಿರುತ್ತಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಪೊಲೀಸರು ಮತ್ತು ಬೆರಳಚ್ಚು ಘಟಕದ ಸಿಬ್ಬಂದಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಕಳ್ಳನ ಬಂಧನ

ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತಾ ರಾತ್ರಿ ವೇಳೆ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಬೀಗ ಮುರಿದು ಕಳವು ಮಾಡುತ್ತಿದ್ದ 23 ವರ್ಷದ ದೀಪಕ್ ಎಂಬಾತನನ್ನು ಜೆ.ಪಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ ನಗರದ ವಾಸಿಯಾಗಿದ್ದ ಈತ ಕದ್ದ ದ್ವಿಚಕ್ರ ವಾಹನಗಳನ್ನು ದಾಖಲೆಗಳನ್ನು ನಂತರ ನೀಡುವುದಾಗಿ ಹೇಳಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುತ್ತಾನೆ. ಈತನ ವಿರುದ್ದ ಈಗಾಗಲೇ ಜೆ.ಪಿ ನಗರ, ಪರಪ್ಪನ ಅಗ್ರಹಾರ, ಹೆಣ್ಣೂರು, ಜೆ.ಪಿ ನಗರ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಮಕ್ಕಳ ಅಶ್ಲೀಲ ವಿಡಿಯೋ, ಭಾವಚಿತ್ರ ವೀಕ್ಷಣೆ; ಅಸ್ಸಾಂ ವ್ಯಕ್ತಿ ಬಂಧನ

ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಸುನೈ ಗ್ರಾಮದ ನೂರ್ ಇಸ್ಲಾಂ ಚೌದ್ರಿ (37) ಎಂಬಾತನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಈತ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವುದಲ್ಲದೆ, ಶೇರ್ ಕೂಡ ಮಾಡುತ್ತಿರುವುದು ದೃಢಪಟ್ಟ ಕಾರಣ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಬೆಂಗಳೂರು ನಗರದ ಹೈನ್ಸ್ ರಸ್ತೆಯ ನಿವಾಸಿಯಾಗಿರುವ ಈತ, ನಿತ್ಯವೂ ಎಂಬಂತೆ ಮಕ್ಕಳ ಆಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ. ಇತರರಿಗೂ ಫಾರ್ವರ್ಡ್‌ ಮಾಡುತ್ತಿದ್ದ. ಕೇಂದ್ರ ಗೃಹ ಇಲಾಖೆಯ ಅಧೀನದ ನ್ಯಾಷನಲ್ ಸೆಂಟರ್‌ ಫಾರ್ ಮಿಸ್ಸಿಂಗ್ ಆಂಡ್ ಎಕ್ಸ್‌ಪ್ಲಾಯ್ಟೆಡ್‌ ಚಿಲ್ಡ್ರನ್‌ ಸಾಫ್ಟ್‌ವೇರ್‌ ಈತನ ಚಲನವಲನವನ್ನು ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದನ್ನು ಆಧರಿಸಿ ಎಲೆಕ್ಟ್ರಾನಿಕ್ ಸರ್ವೀಸ್ ಪ್ರೊವೈಡರ್‌ಗಳು ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸರಿಗೆ ಒದಗಿಸಿದ್ದರು.

ಬೆಂಗಳೂರು ಸೈಬರ್ ಪೊಲೀಸರು ಈ ಮಾಹಿತಿ ಆಧರಿಸಿ, ತಾಂತ್ರಿಕ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಖಚಿತ ಪಡಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಬಂಧಿತನಿಂದ ಮೊಬೈಲ್ ಫೋನ್ ವಶಪಡಿಸಲಾಗಿದೆ. ಆರೋಪಿ ತನ್ನ ಕೃತ್ಯಕ್ಕೆ ವಿವೋ ಫೋನ್ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point