ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರ್ನಾಟಕ ಬರ ಪರಿಸ್ಥಿತಿ; ಕೇಂದ್ರ ಸರ್ಕಾರದಿಂದ ರಾಜ್ಯದ 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ ಬಿಡುಗಡೆಯಾಗಿದೆ. ಇದೇ ವೇಳೆ, ರಾಜ್ಯ ಸರ್ಕಾರದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂಪಾಯಿ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. (ವರದಿ - ಎಚ್. ಮಾರುತಿ, ಬೆಂಗಳೂರು)

ಕರ್ನಾಟಕ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ ನೀಡಲಾಗಿದೆ. ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ ನೀಡಲು ಸರ್ಕಾರದ ತೀರ್ಮಾನ. (ಸಾಂಕೇತಿಕ ಚಿತ್ರ)
ಕರ್ನಾಟಕ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ ನೀಡಲಾಗಿದೆ. ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ ನೀಡಲು ಸರ್ಕಾರದ ತೀರ್ಮಾನ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಹಣವನ್ನು 32.12 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತಿತರ ತಾಂತ್ರಿಕ ದೋಷಗಳಿಂದ ಇನ್ನೂ 2 ಲಕ್ಷ ರೈತರಿಗೆ ಪರಿಹಾರ ಧನ ತಲುಪಿಲ್ಲ. ಅವರಿಗೂ ಶೀಘ್ರವೇ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದ್ದು ಇನ್ನೊಂದು ವಾರದಲ್ಲಿ ಎಲ್ಲ ರೈತರಿಗೂ ಪರಿಹಾರ ಲಭ್ಯವಾಗಲಿದೆ.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದ ನಂತರ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯಕ್ಕೆ ಪರಿಹಾರ ದೊರೆತಿದೆ. ಇದುವರೆಗೂ ಮೊದಲ ಮತ್ತು ಎರಡನೇ ಕಂತು ಸೇರಿ 3,000 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಗಿದೆ. ಇನ್ನೂ 1.5 ಲಕ್ಷ ಕುಟುಂಬಗಳಿಗೆ ಎರಡನೇ ಕಂತಿನ ಹಣ ತಲುಪಿಲ್ಲ. ಈ ಮೊತ್ತವೂ ತಲುಪಿದರೆ 33 ಲಕ್ಷ ರೈತ ಕುಟುಂಬಗಳಿಗೆ ನೆರವು ನೀಡಿದಂತಾಗುತ್ತದೆ. ಇನ್ನು ಎರಡು ಮೂರು ದಿನಗಳಲ್ಲಿ ಈ ರೈತರಿಗೂ ಹಣ ವರ್ಗಾವಣೆ ಆಗಲಿದೆ.

16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ ಪರಿಹಾರ

ಇದೇ ಮೊದಲ ಬಾರಿಗೆ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ರೈತ ಕುಟುಂಬಗಳಿಗೆ ಬರಗಾಲದಿಂದ ಉಂಟಾಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ 3,000 ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಎಸ್ ಡಿ ಆರ್ ಎಫ್ ಮತ್ತು ಎನ್‌ ಡಿಆರ್‌ ಎಫ್ ಎರಡರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ಈ ಮೊತ್ತ ಸುಮಾರು 460 ಕೋಟಿ ರೂಪಾಯಿ ದಾಟಬಹುದು ಎಂದು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿ ರೈತರ ನೆರವಿಗೆ ದಾವಿಸಲಾಗಿದ್ದು ಬರ ಪರಿಹಾರದ ಮಾರ್ಗಸೂಚಿಗಳಲ್ಲಿ ಪರಿಹಾರ ನೀಡಲು ಅವಕಾಶ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ರಾಜ್ಯದ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಇದರಲ್ಲಿ 196 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಪಟ್ಟಿ ಮಾಡಲಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ 44 ಲಕ್ಷ ರೈತರ ಪಟ್ಟಿ ಮಾಡಲಾಗಿತ್ತು. ಮಳೆ ಇಲ್ಲದೆ ಅನೇಕ ತಾಲ್ಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ತೀರ್ಮಾನಿಸಲಾಗಿದೆ. ಎರಡು ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇದುವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಿದ್ದು, 462 ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಗಳನ್ನೂ ನಡೆಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಪರಿಹಾರ ನಿಗದಿ

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿ ಮಾಡಲಾಗಿದೆ. ಅದರಂತೆ ಮಳೆಯಾಶ್ರಿತ ಬೆಳೆಗೆ 8,500 ರೂ. ನೀರಾವರಿ ಪ್ರದೇಶದ ಬೆಳೆಗೆ 17,000 ರೂ. ಮತ್ತು ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ 22,500 ರೂ. ಪರಿಹಾರ ನೀಡಲಾಗುತ್ತಿದೆ.

ರಾಜ್ಯ ಸರ್ಕಾರ 18,172 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಎನ್‌ ಡಿ ಆರ್‌ ಎಫ್, ಎಸ್‌ ಡಿ ಆರ್‌ ಎಫ್ ನಿಯಮಗಳ ಪ್ರಕಾರ ನೀಡುವ ಪರಿಹಾರ ರೈತರ ವೆಚ್ಚಗಳಿಗೆ ತಾಳೆಯಾಗುವುದಿಲ್ಲ. ಹೀಗಾಗಿ ಪರಿಹಾರ ನೀಡುವ ನಿಯಮಗಳನ್ನು ಪರಿಷ್ಕರಣೆ ಮಾಡುವಂತೆಯೂ ರಾಜ್ಯ ಸರ್ಕಾರ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿತ್ತು.

(ವರದಿ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner