RSS Bengaluru Event: ಬೆಂಗಳೂರಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕಡೆಗಣನೆ; ಸಾರ್ವಜನಿಕರ ಆಕ್ರೋಶ
ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಹಿಂದಿ ಫಲಕಗಳನ್ನು ಮಾತ್ರ ಪ್ರದರ್ಶಿಸಲಾಗಿದ್ದು, ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬೆಂಗಳೂರಿನಲ್ಲಿ ನಡೆಸುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಕನ್ನಡವನ್ನು ಕಡೆಗಣಿಸಿದ್ದಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಹಿಂದಿ ನಾಮಫಲಕಗಳನ್ನು ಮಾತ್ರ ಬಳಸಲಾಗಿದ್ದು, ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೂ, ಇದರ ನಾಮಫಲಕಗಳಲ್ಲಿ ಕೇವಲ ಹಿಂದಿಯನ್ನು ಬಳಸಿದ್ದು, ಕನ್ನಡದ ಅಕ್ಷರವೂ ಕೂಡ ಇರದೇ ಇರುವುದಕ್ಕೆ ಬೆಂಗಳೂರಿನ ನಿವಾಸಿಗಳು ಕಾರ್ಯಕ್ರಮದ ಆಯೋಜಕರನ್ನು ಟೀಕಿಸಿದ್ದಾರೆ.
ಮಾಗಡಿ ರಸ್ತೆಯ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಮೂರು ದಿನಗಳ (ಮಾರ್ಚ್ 21 ರಿಂದ 23) ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವಾರ್ಷಿಕ ವರದಿ ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲಾಗುತ್ತದೆ.
ಈ ಕಾರ್ಯಕ್ರಮವು ಕನ್ನಡ ಪರ ಕಾರ್ಯಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗೆ ಗುರಿಯಾಗಿದೆ. ಹಿಂದಿ ಸಲುವಾಗಿ ಆರ್‌ಎಸ್‌ಎಸ್ ಸ್ಥಳೀಯ ಭಾಷೆಯನ್ನು ಬದಿಗಿಟ್ಟಿದೆ, ನಮಗೆ ಕನ್ನಡವೇ ಮುಖ್ಯ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕನ್ನಡ ಪರ ಕಾರ್ಯಕರ್ತರು ಮತ್ತು ಎಕ್ಸ್ ಬಳಕೆದಾರರ ಪ್ರತಿಕ್ರಿಯೆ
ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಕನ್ನಡ ಫಲಕಗಳು ಇಲ್ಲದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಹಲವು ಎಕ್ಸ್ ಬಳಕೆದಾರರು ಪ್ರಾದೇಶಿಕ ಭಾಷೆಗಳ ವೆಚ್ಚದಲ್ಲಿ ಹಿಂದಿಯನ್ನು ಪ್ರಚಾರ ಮಾಡುತ್ತಿದ್ದಾರೆ ಆರೋಪಿಸಿ ಆರ್‌ಎಸ್‌ಎಸ್ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ.
ಆರ್‌ಎಸ್‌ಎಸ್ ಕನ್ನಡ ಭಾಷೆಯನ್ನು ಕಡೆಗಣಿಸಿದೆ. ಸ್ಟೇಜ್ ಮೇಲಿನ ಫಲಕದಲ್ಲಿ ಕೇವಲ ಹಿಂದೆ ಭಾಷೆ ಮಾತ್ರ ಕಾಣಿಸುತ್ತಿದೆ. ಇದರಲ್ಲೇ ಸ್ಟಷ್ಟವಾಗುತ್ತಿದೆ ಅವರ ಕನ್ನಡಕ್ಕಿಂತ ಹೆಚ್ಚು ಹಿಂದಿಯನ್ನು ಪ್ರೀತಿಸುತ್ತಾರೆ‘ ಎಂಬುದು.
‘ಆರ್‌ಎಸ್‌ಎಸ್ ಬೆಂಗಳೂರಿನಲ್ಲಿ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ‘ಯನ್ನು ಆಯೋಜಿಸಿದೆ. ಆದರೆ ಕಾರ್ಯಕ್ರಮದ ಸ್ಟೇಜ್‌ನಲ್ಲಿ ಬಳಸಿರುವ ನಾಮಫಲಕದಲ್ಲಿ ಒಂದೇ ಒಂದು ಕನ್ನಡ ಪದವನ್ನು ಕೂಡ ಬಳಸಿಲ್ಲ. ಬೆಂಗಳೂರು ಕನ್ನಡ ನಗರ. ಇದನ್ನು ನೋಡಿದಾಗ ಆರ್‌ಎಸ್‌ಎಸ್ ಕನ್ನಡ ಸಂಸ್ಕೃತಿಯನ್ನು ಉಳಿಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ? ಕನ್ನಡವಿಲ್ಲದೆ ಬೆಂಗಳೂರಿನಲ್ಲಿ ಹಿಂದೂ ಧರ್ಮ ಸಾಯುತ್ತದೆ‘ ಎಂದು ಎಕ್ಸ್ ಬಳಕೆದಾರರೊಬ್ಬರು ಆರ್‌ಎಸ್‌ಎಸ್ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಆರ್‌ಎಸ್‌ಎಸ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹೆಮ್ಮೆಯನ್ನು ಬೋಧಿಸುತ್ತದೆ, ಆದರೆ ಕನ್ನಡವನ್ನು ಬದಿಗಿಡುವ ಮೂಲಕ ಕರ್ನಾಟಕಕ್ಕೆ ಅಗೌರವ ತೋರಿದೆ. ಇದು ನಮ್ಮ ನಾಡು, ನಮ್ಮ ಭಾಷೆ, ಹಿಂದಿ ಹೇರಿಕೆಗೆ ಸ್ಥಳವಲ್ಲ! ಕರ್ನಾಟಕ ಹಿಂದಿ ವಸಾಹತು ಅಲ್ಲ‘ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.


