Bengaluru Jobs: ಬೆಂಗಳೂರಲ್ಲಿ ಸ್ಯಾಪ್ ಲ್ಯಾಬ್‌ನ ಎರಡನೇ ಕ್ಯಾಂಪಸ್, ದೇವನಹಳ್ಳಿಯಲ್ಲಿ 15 ಸಾವಿರ ಉದ್ಯೋಗಸೃಷ್ಟಿ
ಸ್ಯಾಪ್ ಲ್ಯಾಬ್ಸ್ ಇಂಡಿಯಾ (SAP Labs India) ಬೆಂಗಳೂರಿನಲ್ಲಿ ತನ್ನ ಎರಡನೇ ಆಫೀಸ್/ಕ್ಯಾಂಪಸ್ ತೆರೆಯಲು ಉದ್ದೇಶಿಸಿದ್ದು, ಇದರಿಂದ ಸುಮಾರು 15 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.
ಬೆಂಗಳೂರು: ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ವಿಫುಲ ಅವಕಾಶ ದೊರಕಲಿದೆ. ಬೆಂಗಳೂರು ಹೊರವಲಯಗಳಲ್ಲಿ ಹಲವು ಇಂಡಸ್ಟ್ರಿ ಕಾರಿಡಾರ್‌ಗಳು, ಇಂಡಸ್ಟ್ರಿ ಕ್ಲಸ್ಟರ್‌ಗಳು, ವಿಶೇಷ ಉದ್ಯಮ ವಲಯಗಳು ಸ್ಥಾಪನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿರಾರು ಜನರು ಉದ್ಯೋಗ ಪಡೆಯಲು ನೆರವಾಗಲಿದೆ. ಇದಕ್ಕೆ ಪೂರಕವಾಗಿ ಸ್ಯಾಪ್ ಲ್ಯಾಬ್ಸ್ ಇಂಡಿಯಾ (SAP Labs India) ಇತ್ತೀಚೆಗೆ ನೀಡಿದ ಮಾಹಿತಿಯೂ ಪೂರಕವಾಗಿದೆ. ಬೆಂಗಳೂರಿನಲ್ಲಿ ತನ್ನ ಎರಡನೇ ಆಫೀಸ್/ಕ್ಯಾಂಪಸ್ ತೆರೆಯಲು ಸ್ಯಾಪ್ ಲ್ಯಾಬ್ಸ್ ಉದ್ದೇಶಿಸಿದ್ದು, ಇದರಿಂದ ಸುಮಾರು 15 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಸುಮಾರು 41.07 ಎಕರೆ ಸ್ಥಳದಲ್ಲಿ ಸ್ಯಾಪ್ ಲ್ಯಾಬ್‌ನ ಬೃಹತ್ ಕ್ಯಾಂಪಸ್ ಆರಂಭವಾಗಲಿದೆ. ಈ ಆಫೀಸ್ ಉದ್ಯೋಗಿಗಳು ಆರಾಮದಾಯಕವಾಗಿ ಕೆಲಸ ಮಾಡಲು ಪೂರಕವಾಗಿರುವಂತೆ ಇರಲಿದೆ.
"ಈ ವರ್ಷ ಸ್ಯಾಪ್ಸ್ ಲ್ಯಾಬ್ಸ್ ಇಂಡಿಯಾವು ತನ್ನ 25ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಶುಭ ಸಂದರ್ಭದಲ್ಲಿ ಭಾರತದಲ್ಲಿ ತನ್ನ ಹೂಡಿಕೆಯನ್ನು ಕಂಪನಿಯು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿದೆ. ನಮ್ಮ 41 ಎಕರೆಯ ಹೊಸ ಕ್ಯಾಂಪಸ್ 15,000 ಉದ್ಯೋಗ ಸೃಷ್ಟಿಸಲಿದೆ" ಎಂದು ಸ್ಯಾಪ್ಸ್ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ಉಪಾಧ್ಯಕ್ಷೆ ಸಿಂಧು ಗಂಗಾಧರನ್ ಹೇಳಿದ್ದಾರೆ. ಈ ಸ್ಯಾಪ್ ಲ್ಯಾಬ್ ಘಟಕದ ಮೊದಲ ಹಂತವು 2025ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಸ್ಯಾಪ್ ಕಂಪನಿಯು ಜಗತ್ತಿನ ಬೃಹತ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಹಬ್ ಅನ್ನು ಬೆಂಗಳೂರಿನಲ್ಲಿ ಹೊಂದಿದೆ. ಇದು ಸ್ಯಾಪ್‌ನ ಜಾಗತಿಕ ಆರ್‌ಆಂಡ್‌ಡಿಯ ಶೇಕಡ 40 ಭಾಗವಾಗಿದೆ. ಹೊಸ ಕ್ಯಾಂಪಸ್ ಭಾರತ ಮತ್ತು ಕರ್ನಾಟಕದಲ್ಲಿ ಸ್ಯಾಪ್‌ನ ಸಾಮರ್ಥ್ಯವನ್ನು ವಿಸ್ತರಿಸಲಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಪುಣೆ, ಗುರುಗ್ರಾಮ, ಪುಣೆ, ಮುಂಬಯಿ ಮತ್ತು ಹೈದರಾಬಾದ್‌ನಲ್ಲಿಯೂ ಸ್ಯಾಪ್ ಇಂಡಿಯಾದ ಆಫೀಸ್‌ಗಳಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ.
ಭಾರತದಲ್ಲಿ ಸ್ಯಾಪ್ ಪರಿಣಿತರಿಗೆ ಸಾಕಷ್ಟು ಬೇಡಿಕೆಯಿದೆ. ಸ್ಯಾಪ್ ಹುದ್ದೆಗಳನ್ನು ಪಡೆದವರು ಕೈ ತುಂಬಾ ವೇತನವನ್ನೂ ಪಡೆಯುತ್ತಾರೆ. ಸ್ಯಾಪ್ ಇಂಡಿಯಾದಲ್ಲಿ ಉದ್ಯೋಗ ಪಡೆಯಲು ಸ್ಯಾಪ್ ಸರ್ಟಿಫಿಕೇಷನ್‌ಗಳು ನೆರವಾಗುತ್ತವೆ. ಬಿಗಿನರ್, ಇಂಟರ್‌ಮೀಡಿಯೇಟ್, ಅಡ್ವಾನ್ಸಡ್ ಲೆವೆಲ್‌ನ ಸ್ಯಾಪ್ ಸರ್ಟಿಫಿಕೇಷನ್ ಕೋರ್ಸ್‌ಗಳು ಇರುತ್ತವೆ. ಬೇರೆ ಐಟಿ ಉದ್ಯೋಗದಲ್ಲಿದ್ದುಕೊಂಡು ಕೂಡ ಸ್ಯಾಪ್ ಸ್ಕಿಲ್ ಪಡೆಯಬಹುದು.