ಪ್ರಜ್ವಲ್ ರೇವಣ್ಣಗೆ ಎರಡನೇ ಬಾರಿ ವೈದ್ಯಕೀಯ ಪರೀಕ್ಷೆ; ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ, ಸಿಸಿಬಿ ವಶಕ್ಕೆ ತೆಲುಗು ಚಿತ್ರನಟಿ ಹೇಮಾ
ಹಾಸನ ಲೈಂಗಿಕ ಹಗರಣ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗೆ ಸಂಬಂಧಿಸಿ, ಆರೋಪಿ ಪ್ರಜ್ವಲ್ ರೇವಣ್ಣಗೆ ಎರಡನೇ ಬಾರಿ ವೈದ್ಯಕೀಯ ಪರೀಕ್ಷೆ ಇಂದು ನಡೆಯಲಿದೆ. ಇನ್ನೊಂದು ಪ್ರಕರಣದಲ್ಲಿ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಕೇಸ್‌ಗೆ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ಅವರನ್ನು ಸಿಸಿಬಿ ವಶಕ್ಕೆ ತೆಗೆದುಕೊಂಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನದ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ )ಅಧಿಕಾರಿಗಳು ನಿನ್ನೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಆಸ್ಪತ್ರೆಯ ತಜ್ಞ ವೈದ್ಯರ ನೇತೃತ್ವದಲ್ಲಿ ಮೂರು ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಜೂನ್ ಒಂದರಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.
ಬೆಂಗಳೂರಿನ ಬಸವನಗುಡಿ ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ಪ್ರಜ್ವಲ್ ಅವರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಮಹಜರು ನಡೆಸಲಾಗುವುದು ಎಂದೂ ತಿಳಿದು ಬಂದಿದೆ. ಪ್ರಜ್ವಲ್ ನೆಲೆಸಿದ್ದ ಹಾಸನದ ಸರ್ಕಾರಿ ವಸತಿ ಗೃಹದಲ್ಲಿ ಈಗಾಗಲೇ ಅಗತ್ಯ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಸೋಲು ಮೌನಿಯಾದ ಪ್ರಜ್ವಲ್
ಲೋಕಸಭೆ ಚುನಾವಣೆಯಲ್ಲಿ ಸೋಟ್ ಸುದ್ದಿಯನ್ನು ತಿಳಿದ ನಂತರ ಪ್ರಜ್ವಲ್ ಜೈಲಿನ ತಮ್ಮ ಕೊಠಡಿಯಲ್ಲಿ ಮೌನಕ್ಕೆ ಜಾರಿದ್ದಾರೆ ಎಂದು ಎಸ್ ಐ ಟಿ ಪೊಲೀಸರು ಹೇಳಿದ್ದಾರೆ. ಬುಧವಾರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಎಸ್‌ಐಟಿ ಕಚೇರಿಯಲ್ಲಿ ಮತ್ತೆ ವಿಚಾರಣೆ ನಡೆಸಲಾಗಿದೆ. ಬಂಧನವಾದ ಮೊದಲ ಎರಡು ದಿನ ಪ್ರಜ್ವಲ್ ತನಿಖೆಗೆ ಸಹಕಾರ ನೀಡಿರಲಿಲ್ಲ. ಯಾವುದೇ ಪ್ರಶ್ನೆ ಕೇಳಿದರೂ ತನಗೇನೂ ತಿಳಿದಿಲ್ಲ. ವಕೀಲರೊಂದಿಗೆ ಚರ್ಚಿಸಿ ಹೇಳುತ್ತೇನೆ ಇಲ್ಲವೇ ನ್ಯಾಯಾಲಯಕ್ಕೆ ತಿಳಿಸುತ್ತೇನೆ ಎಂದು ಉತ್ತರಿಸುತ್ತಿದ್ದರು. ಈಗ ಅವರು ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಅತ್ಯಾಚಾರ ಪ್ರಕರಣ ದಾಖಲಾದ ನಂತರ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಮೇ 31ರಂದು ಅವರು ದೇಶಕ್ಕೆ ಹಿಂತಿರುಗಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ 31ರಂದು ಮಧ್ಯರಾತ್ರಿ ಅವರನ್ನು ಎಸ್‌ಐಟಿ ಬಂಧಿಸಿತ್ತು.
ಪ್ರಜ್ವಲ್ ಆವರನ್ನು ಜೂನ್ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 6 ದಿನಗಳ ಅವಧಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಅವರನ್ನು ಸಿ ಐ ಡಿ ಸೆಲ್ ನಲ್ಲಿ ಇರಿಸಲಾಗಿದೆ. ಗುರುವಾರ ಸಂಜೆಗೆ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದ್ದು ಮತ್ತಷ್ಟು ಅವಧಿಗೆ ಎಸ್ ಐ ಟಿ ಕೇಳಲಿದೆ ಎಂದು ಮೂಲಗಳು ಹೇಳಿವೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಅವರ ಪುರುಷತ್ವ ಸಾಮರ್ಥ್ಯದ ಪರೀಕ್ಷೆ ನಡೆಸುವ ಅವಶ್ಯಕತೆಯಿದ್ದು, ಆರೋಪಿಯನ್ನು ಮತ್ತಷ್ಟು ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್ ಐ ಟಿ ನ್ಯಾಯಾಲಯಕ್ಕೆ ಮನವಿ ಮಾಡಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಹರಿದಾಡುತ್ತಿರುವ ವಿಡಿಯೋಗಳನ್ನು ಕುರಿತು ಪ್ರಜ್ವಲ್ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ನ್ಯಾಯಾಲಯಕ್ಕೆ ತಿಳಿಸುತ್ತೇನೆ, ನಾನು ತಪ್ಪು ಮಾಡಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದರು.ಎಂದು ತಿಳಿದು ಬಂದಿದೆ.
ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ; ಸಿಸಿಬಿ ವಶಕ್ಕೆ ತೆಲುಗು ಚಿತ್ರನಟಿ ಹೇಮಾ
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಹುಸ್ಕೂರು ಹತ್ತಿರವಿರುವ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಹಾಗೂ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ
ಉದ್ದೇಶದಿಂದ ಸುಳ್ಳು ವಿಡಿಯೊ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲುಗು ಚಿತ್ರನಟಿ ಹೇಮಾ ಅಲಿಯಾಸ್ ಕೃಷ್ಣವೇಣಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ ಹೆಸರಿನಲ್ಲಿ ಮೇ 19 ರಂದು ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. 57 ವರ್ಷದ ನಟಿ ಹೇಮಾ ಈ ಪಾರ್ಟಿಯಲ್ಲಿ ಭಾಗವಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಹೇಮಾ ವಿಚಾರಣೆ ಹಾಜರಾಗಿರಲಿಲ್ಲ. ನಂತರ ಜೂನ್ 3ರಂದು ಸಿಸಿಬಿ ಕಚೇರಿಗೆ ವಿಚಾರಣೆಗೆ
ಹಾಜರಾಗಿದ್ದರು. ಚಿತ್ರನಟಿ ಹೇಮಾ ತಾವು ರೇವ್ ಪಾರ್ಟಿ ಯಲ್ಲಿ ಭಾಗಿಯಾಗಿರಲಿಲ್ಲ. ನಾನು ಹೈದರಾಬಾದ್ ನಲ್ಲಿದ್ದೇನೆ ಎಂದು ಸುಳ್ಳು ಹೇಳಿದ್ದರು. ತಮ್ಮ ಗೊಂದಲದ ಹೇಳಿಕೆಗಳು ಮತ್ತು ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದಾಗ ಹೇಮಾ ಸುಳ್ಳು ಮಾಹಿತಿ ನೀಡಿದ್ದರು. ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಯನ್ನು ತಪ್ಪಾಗಿ ಹೇಳಿದ್ದರು. ಈ ಎಲ್ಲ ಆರೋಪಗಳ ಅಡಿಯಲ್ಲಿ ಬಂಧಿಸಿ ಆಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಬುಧವಾರ ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿ ಹೇಮಾರನ್ನು ಮೂರು ದಿನ ತಮ್ಮ ವಶಕ್ಕೆ ನೀಡುವಂತೆ ಸಿಸಿಬಿ ಪೋಲಿಸರು ಮನವಿ ಮಾಡಿದ್ದರು. ನ್ಯಾಯಾಲಯವು 24 ಗಂಟೆ ಅಥವಾ ಒಂದು ದಿನದ ಮಟ್ಟಿಗೆ ವಿಚಾರಣೆಗೆ ಅವಕಾಶ ನೀಡಿದೆ. ಗುರುವಾರ ಸಂಜೆ ಹೇಮಾರನ್ನು ಮತ್ತೆ ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.