ಕರ್ನಾಟಕದಲ್ಲೇ ಬಿತ್ತನೆ ಬೀಜ ಅಗ್ಗ; ದರ ಹೆಚ್ಚಳ ಸಮರ್ಥನೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯ ಸ್ವಾಮಿ ನೀಡಿದ್ರು ತಲಾ 5 ಕಾರಣ
ಕರ್ನಾಟಕದಲ್ಲಿ ಬಿತ್ತನೆ ಬೀಜ ದುಬಾರಿಯಾಗಿರುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 30ರಿಂದ ಶೇಕಡ 60 ಏರಿಕೆಯಾಗಿರುವುದು ಇದಕ್ಕೆ ಕಾರಣ. ಆದಾಗ್ಯೂ, ಕರ್ನಾಟಕದಲ್ಲೇ ಬಿತ್ತನೆ ಬೀಜ ಅಗ್ಗ ಎಂದು ದರ ಹೆಚ್ಚಳ ಸಮರ್ಥನೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯ ಸ್ವಾಮಿ ತಲಾ 5 ಕಾರಣಗಳನ್ನು ನೀಡಿದ್ರು.

ಬೆಂಗಳೂರು: ಕರ್ನಾಟಕದಲ್ಲಿ ಬಿತ್ತನೆ ಬೀಜ ದುಬಾರಿಯಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ವಿಪಕ್ಷಗಳು ಕೂಡ ರೈತರ ಧ್ವನಿಯಾಗಿ ಬಿತ್ತನೆ ಬೀಜಗಳ ದರ ಇಳಿಸಬೇಕು ಅಥವಾ ರೈತರಿಗೆ ನೆರವಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ರಾಜ್ಯಗಳಲ್ಲಿ ಬಿತ್ತನೆ ಬೀಜಗಳ ದರ ಎಷ್ಟಿದೆ ಎಂಬುದರ ಅಂಕಿ ಅಂಶ ಸಹಿತ ವಿವರಣೆ ನೀಡಿದ್ದಾರೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಬಿತ್ತನೆ ಬೀಜಗಳಿಗೆ ಕಡಿಮೆ ದರ ಇರುವಂಥದ್ದು ಎಂದು ಅಂಕಿ-ಅಂಶ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಪಕ್ಷ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ, ಕೃಷಿ ಸಚಿವ ಚಲುವರಾಯ ಸ್ವಾಮಿ ಕೂಡ 5 ಅಂಶಗಳ ಸರ್ಮಥನೆಗಳನ್ನು ಮುಂದಿಟ್ಟಿದ್ದಾರೆ.
ಬಿತ್ತನೆ ಬೀಜ ದುಬಾರಿ; ಕರ್ನಾಟಕದಲ್ಲೇ ಕಡಿಮೆ ದರ ಎಂಬುದನ್ನು ಸಮರ್ಥಿಸಿದ ಸಿಎಂ
1) 2023-24ನೇ ಸಾಲಿನಲ್ಲಿ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯಿ ಕುಸಿತ ಕಂಡಿದೆ. ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರ ಸಹ ಗಣನೀಯವಾಗಿ ಏರಿಕೆಯಾಗಿದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿತ್ತನೆ ಬೀಜದ ದರ ಹೆಚ್ಚಳವಾಗಿದೆ. ಆದಾಗ್ಯೂ, ಈ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೇ ವರ್ಗಾವಣೆಯಾಗಿರುತ್ತದೆ.
2) ಬಿತ್ತನೆ ಬೀಜ ಎಲ್ಲ ರಾಜ್ಯಗಳಲ್ಲೂ ದುಬಾರಿ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಬಿತ್ತನೆ ಬೀಜದ ದರ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಸೋಯಾ ಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್ -1 ದರವು 8500 ರೂಪಾಯಿ ಇದ್ದು, ಕರ್ನಾಟಕದಲ್ಲಿ 7270 ರೂಪಾಯಿ ಇದೆ. ತೊಗರಿಗೆ ಮಹಾರಾಷ್ಟ್ರದಲ್ಲಿ 25,000 ರೂಪಾಯಿ ಇದ್ದು, ಕರ್ನಾಟಕದಲ್ಲಿ 17,900 ರೂಪಾಯಿ ಇದೆ. ಹೆಸರು ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ 23,500 ರೂಪಾಯಿ ಇದ್ದರೆ ಕರ್ನಾಟಕದಲ್ಲಿ 14,000 ರೂಪಾಯಿ ಇದೆ. ಜೋಳದ ಬಿತ್ತನೆ ಬೀಜಕ್ಕೆ ಮಹಾರಾಷ್ಟ್ರದಲ್ಲಿ ಕ್ವಿಂಟಾಲ್‌ಗೆ 18,600 ರೂಪಾಯಿ ಮತ್ತು ಕರ್ನಾಟಕದಲ್ಲಿ 12,500 ರೂಪಾಯಿ ಇದೆ.
3) ಬಿತ್ತನೆ ಬೀಜ ಮಾರಾಟ ದರ ನಿಗದಿಪಡಿಸುವಾಗ ಖರೀದಿ ದರ ಹಾಗೂ ಎಪಿಎಂಸಿಯ ಗರಿಷ್ಠ ಮಾರಾಟ ದರ ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ ಗರಿಷ್ಠ ಶೇ.59.58 ರಷ್ಟು ವ್ಯತ್ಯಾಸ ಗಮನಿಸಬಹುದು.
4) ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್-1 ದರವು ಶೇ.48.5, ಉದ್ದು ಬೆಳೆಯ ದರವು ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು, ಜೋಳದ ಬೆಳೆಯ ಎಲ್-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಳವಾಗಿದೆ.
5) 2024ರ ಮುಂಗಾರು ಹಂಗಾಮಿನ ಸೋಯಾ ಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇಲ್ಲ.
ಬಿತ್ತನೆ ಬೀಜ ಬೆಲೆ ಹೆಚ್ಚಳ ಸಮರ್ಥನೆಗೆ ಕೃಷಿ ಸಚಿವ ಚಲುವರಾಯಸ್ವಾಮಿಯವರು ಕೊಟ್ಟ 5 ಕಾರಣಗಳು
1) ಕಳೆದ ವರ್ಷ ಕರ್ನಾಟಕದಲ್ಲಿ ಆಹಾರ ಧಾನ್ಯಗಳ ಮಾರಾಟದ ದರ ಶೇಕಡ 40ರಷ್ಟು ಹೆಚ್ಚಳವಾಗಿದೆ. ಬಿತ್ತನ ಬೀಜ ಖರೀದಿ ಮೇಲೆ ಕೂಡ ಇದು ಪರಿಣಾಮ ಬೀರಿದೆ. ಆದ್ದರಿಂದಲೇ ನಾವು ಬಿತ್ತನೆ ಬೀಜಕ್ಕೆ ಶೇ.30ರಷ್ಟು ದರ ಏರಿಸಿದ್ದೇವೆ.
2) ಪ್ರಸಕ್ತ ಸಾಲಿನಲ್ಲಿ 2023-24ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಬರ ನಮ್ಮನ್ನು ಕಾಡಿದೆ. 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾದರೂ ಪ್ರಸ್ತುತ ಸಾಲಿಗೆ ಬಿತ್ತನೆ ಬೀಜಕ್ಕೆ ಕೊರತೆಯಾಗದ ರೀತಿ ಮುಂಜಾಗ್ರತೆ ವಹಿಸಿದ್ದು, ಈಗಾಗಲೇ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ
3) ಬಿತ್ತನೆ ಬೀಜ ಖರೀದಿ, ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಪ್ರಯೋಗಾಲಯದಲ್ಲಿ ಪರೀಕ್ಷೆ, ಗ್ರೇಡಿಂಗ್, ದಾಸ್ತಾನು ಮಾಡುವುದು, ಸಾಗಣೆ, ಬೀಜ ಪ್ರಮಾಣೀಕರಣ, ಕಾರ್ಮಿಕರ ಕೂಲಿ ಹಣ ಎಲ್ಲಾ ಸೇರಿಸಿ ಬಿತ್ತನೆ ಬೀಜದ ಮಾರಾಟ ದರ ನಿಗದಿ ಮಾಡಲಾಗುತ್ತದೆ.
4) ಕೃಷಿಕರಿಂದಲೇ ಬಿತ್ತನೆ ಬೀಜಗಳನ್ನು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಖರೀದಿಸುತ್ತವೆ. ಬೆಲೆ ಹೆಚ್ಚಳದ ಲಾಭ ಬಿತ್ತನೆ ಬೀಜ ಉತ್ಪಾದಿಸುವ ರೈತರಿಗೆ ಹೋಗುತ್ತದೆ. ಹಿಂದಿನ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನೇ ಮುಂದುವರಿಸಿದ್ದೇವೆ. ನಾವೇನೂ ವ್ಯತ್ಯಾಸ ಮಾಡಿಲ್ಲ.
5) ಬಿತ್ತನೆ ಬೀಜಕ್ಕೆ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ದರ ಇದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳೆಯುವ ಶೇಂಗಾ ಬಿತ್ತನೆ ಬೀಜದ ಬೆಲೆ ಶೇಕಡ 1 ಮಾತ್ರ ಏರಿಕೆಯಾಗಿದೆ. ಸೋಯಾ ಬೀನ್ ಬಿತ್ತನೆ ಬೀಜದ ಬೆಲೆ ಶೇಕಡ 8 ಇಳಿಕೆಯಾಗಿದೆ. ರೈತರ ಹಿತವೇ ನಮ್ಮ ಆದ್ಯತೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
